ADVERTISEMENT

ಹಲೆಪ್‌, ಶರಪೋವಾ ಶುಭಾರಂಭ

ರಾಯಿಟರ್ಸ್
Published 1 ಜನವರಿ 2018, 19:30 IST
Last Updated 1 ಜನವರಿ 2018, 19:30 IST
ರಷ್ಯಾದ ಮರಿಯಾ ಶರಪೋವಾ ಚೆಂಡನ್ನು ಹಿಂತಿರುಗಿಸಲು ಮುಂದಾದರು ಎಎಫ್‌ಪಿ ಚಿತ್ರ
ರಷ್ಯಾದ ಮರಿಯಾ ಶರಪೋವಾ ಚೆಂಡನ್ನು ಹಿಂತಿರುಗಿಸಲು ಮುಂದಾದರು ಎಎಫ್‌ಪಿ ಚಿತ್ರ   

ಶೆಂಜೆನ್‌: ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ದಲ್ಲಿರುವ ಸಿಮೊನಾ ಹಲೆಪ್‌ ಮತ್ತು ರಷ್ಯಾದ ಮರಿಯಾ ಶರಪೋವಾ, ಶೆಂಜೆನ್‌ ಓಪನ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ರುಮೇನಿಯಾದ ಹಲೆಪ್‌ 6–4, 6–1ರಲ್ಲಿ ಅಮೆರಿಕದ ನಿಕೊಲ್‌ ಗಿಬ್ಸ್‌ ವಿರುದ್ಧ ಗೆದ್ದರು.

ಪಂದ್ಯದ ಆರಂಭದಿಂದಲೂ ಪ್ರಾಬಲ್ಯ ಮೆರೆದ ಹಲೆಪ್‌, ಮೂರು ಏಸ್‌ ಮತ್ತು 12 ವಿನ್ನರ್‌ಗಳನ್ನು ಸಿಡಿಸಿ ಚೀನಾದ ಟೆನಿಸ್‌ ಪ್ರಿಯರನ್ನು ರಂಜಿಸಿದರು.

ADVERTISEMENT

2015ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಸಿಮೊನಾ ಚೊಚ್ಚಲ ಟ್ರೋಫಿ ಎತ್ತಿಹಿಡಿದಿದ್ದರು.

ಮುಂದಿನ ಸುತ್ತಿನಲ್ಲಿ ಹಲೆಪ್‌, ಚೀನಾದ ದುವಾನ್‌ ಯಿಂಗ್‌ಯಿಂಗ್‌ ವಿರುದ್ಧ ಸೆಣಸಲಿದ್ದಾರೆ.

ದಿನದ ಇನ್ನೊಂದು ಪಂದ್ಯದಲ್ಲಿ ದುವಾನ್‌ 6–2, 7–5ರ ನೇರ ಸೆಟ್‌ಗಳಿಂದ ಎವಜೆನಿಯಾ ರೊಡಿನಾ ವಿರುದ್ಧ ಗೆದ್ದರು.

ರಷ್ಯಾದ ಶರಪೋವಾ ಆರಂಭಿಕ ಹಣಾಹಣಿಯಲ್ಲಿ 6–3, 6–0ರ ನೇರ ಸೆಟ್‌ಗಳಿಂದ ಮಿಹಾಯೆಲಾ ಬುಜಾನೆಸ್ಕು ಸವಾಲು ಮೀರಿದರು.

ಮೊದಲ ಸೆಟ್‌ನಲ್ಲಿ ಎದುರಾಳಿ ಯಿಂದ ಅಲ್ಪ ಪ್ರತಿರೋಧ ಎದುರಿಸಿದ ಶರಪೋವಾ, ಎರಡನೇ ಸೆಟ್‌ನಲ್ಲಿ ಅಬ್ಬರಿಸಿದರು. ಅವರು ಎದುರಾಳಿಗೆ ಒಂದೂ ಗೇಮ್‌ ಗೆಲ್ಲಲು ಅವಕಾಶ ನೀಡಲಿಲ್ಲ. ಗ್ರ್ಯಾನ್‌ಸ್ಲಾಮ್‌ನಲ್ಲಿ ಐದು ಪ್ರಶಸ್ತಿಗಳನ್ನು ಜಯಿಸಿರುವ ಶರಪೋವಾ, 1 ಗಂಟೆ 22 ನಿಮಿಷ ನಡೆದ ಹೋರಾಟದಲ್ಲಿ ಒಟ್ಟು 18 ವಿನ್ನರ್‌ಗಳನ್ನು ಸಿಡಿಸಿದರು.

ಎರಡನೇ ಸುತ್ತಿನ ಪಂದ್ಯದಲ್ಲಿ ಮರಿಯಾ, ಅಲಿಸನ್‌ ರಿಸ್ಕೆ ಸವಾಲಿಗೆ ಎದೆಯೊಡ್ಡಲಿದ್ದಾರೆ. ಭಾನುವಾರ ನಡೆದಿದ್ದ ಪ್ರಥಮ ಸುತ್ತಿನ ಹೋರಾ ಟದಲ್ಲಿ ಅಲಿಸನ್‌, ಚೀನಾದ ಐದನೇ ಶ್ರೇಯಾಂಕಿತೆ ವಾಂಗ್‌ ಕ್ಸಿಯಾಂಗ್‌ ವಿರುದ್ಧ ಗೆದ್ದಿದ್ದರು.

ಟೂರ್ನಿಯ ಇತರ ಪಂದ್ಯಗಳಲ್ಲಿ ಡಾಂಕ ಕೊವಿನಿಕ್‌ 4–6, 6–2, 6–3ರಲ್ಲಿ ಏಳನೇ ಶ್ರೇಯಾಂಕಿತ ಆಟಗಾರ್ತಿ ಮರಿಯಾ ಸಕಾರಿ ಎದುರೂ, ಜಾಂಗ್‌ ಶೂಯಿ 6–3, 6–4ರಲ್ಲಿ ರಷ್ಯಾದ ಅನಾ ಬ್ಲಿಂಕೊವಾ ಮೇಲೂ, ಟೈಮಿ ಬಾಬೊಸ್‌ 6–1, 6–1ರಲ್ಲಿ ಚೀನಾದ ವಾಂಗ್‌ ಕ್ಸಿಯು ವಿರುದ್ಧವೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.