ADVERTISEMENT

ಮೆಲ್ಬರ್ನ್‌ ಪಿಚ್‌ ಕಳಪೆ: ಐಸಿಸಿ ಘೋಷಣೆ

ಏಜೆನ್ಸೀಸ್
Published 2 ಜನವರಿ 2018, 19:30 IST
Last Updated 2 ಜನವರಿ 2018, 19:30 IST
ಎಂಸಿಜಿ ಅಂಗಣದಲ್ಲಿ ನಡೆದ ಆ್ಯಷಸ್ ಸರಣಿಯ ಪಂದ್ಯದಲ್ಲಿ ಔಟಾದ ನಂತರ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಪ್ರತಿಕ್ರಿಯಿಸಿದ ರೀತಿ. –ರಾಯಿಟರ್ಸ್ ಚಿತ್ರ
ಎಂಸಿಜಿ ಅಂಗಣದಲ್ಲಿ ನಡೆದ ಆ್ಯಷಸ್ ಸರಣಿಯ ಪಂದ್ಯದಲ್ಲಿ ಔಟಾದ ನಂತರ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಪ್ರತಿಕ್ರಿಯಿಸಿದ ರೀತಿ. –ರಾಯಿಟರ್ಸ್ ಚಿತ್ರ   

ಸಿಡ್ನಿ: ಈ ಬಾರಿಯ ಆ್ಯಷಸ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ನಡೆದಿದ್ದ ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಕಳಪೆಯಾಗಿತ್ತು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹೇಳಿದೆ.

ಹೋದ ಡಿಸೆಂಬರ್ 26ರಿಂದ 30ರವರೆಗೆ ಇಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ನಡುವಣ ನಡೆದಿದ್ದ ಟೆಸ್ಟ್‌ ಡ್ರಾ ಆಗಿತ್ತು. ಪಿಚ್ ಸ್ಪರ್ಧಾತ್ಮಕವಾಗಿಲ್ಲ ಎಂದು ಪಂದ್ಯದ ಬಳಿಕ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್‌ ಹಾಗೂ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅಸಮಾಧಾನ ವ್ಯಕ್ತಪಡಿಸಿದ್ದರು.

‘ಪಿಚ್‌ನಲ್ಲಿ ಬೌಲರ್‌ಗಳು ಹಾಕಿದ ಎಸೆತಗಳಿಗೆ ಮೊದಲ ದಿನವೇ ಹೆಚ್ಚು ಬೌನ್ಸ್‌ ಮತ್ತು ವೇಗ ಸಿಗುತ್ತಿರಲಿಲ್ಲ. ನಂತರದ ದಿನಗಳಲ್ಲಿ ಚೆಂಡು ಮತ್ತಷ್ಟು ನಿಧಾನಗತಿಯಿಂದ ಚಲಿಸುತ್ತಿತ್ತು. ಇದರಿಂದಾಗಿ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಿಬ್ಬರಿಗೂ ನೆರವು ಸಿಗಲಿಲ್ಲ’ ಎಂದು ಪಂದ್ಯದ ರೆಫರಿ ರಂಜನ್ ಮದುಗಲೆ ಐಸಿಸಿಗೆ ವರದಿ ಸಲ್ಲಿಸಿದ್ದರು.

ADVERTISEMENT

ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್‌ನಲ್ಲಿ 327 ರನ್ ಮತ್ತು ಎರಡನೇ ಇನಿಂಗ್ಸ್‌ನಲ್ಲಿ 4ಕ್ಕೆ263 ರನ್‌ಗಳನ್ನು ಗಳಿಸಿತ್ತು. ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 491 ರನ್ ಗಳಿಸಿತ್ತು.ಪಂದ್ಯ ವೀಕ್ಷಿಸಲು 88 ಸಾವಿರ ಪ್ರೇಕ್ಷಕರು ಸೇರಿದ್ದರು.

‘ಪಿಚ್‌ ಗುಣಮಟ್ಟ ಕಳಪೆಯಾಗಿದೆ. ಮುಂದಿನ ಪ್ರಕ್ರಿಯೆಗಳ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು‘ ಎಂದು ಐಸಿಸಿ ಹೇಳಿದೆ.

‘ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ವೇಳೆ ಪಿಚ್ ಗುಣಮಟ್ಟದ ಕುರಿತು ಎದ್ದ ಪ್ರಶ್ನೆಗಳು ನೋವುಂಟು ಮಾಡಿದೆ. ಮುಂದಿನ ದಿನಗಳಲ್ಲಿ ಮೆಲ್ಬರ್ನ್ ಅಂಗಳದ ಪಿಚ್‌ನಲ್ಲಿ ಯಾವುದೇ ತೊಂದರೆ ಕಾಣಿಸದಂತೆ ಎಚ್ಚರ ವಹಿಸುತ್ತೇವೆ’ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಜೇಮ್ಸ್‌ ಸದರ್ಲೆಂಡ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.