ADVERTISEMENT

ಆರ್‌ಸಿಬಿಗೆ ಎಬಿಡಿ, ಸರ್ಫರಾಜ್‌ ಬಲ

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಉಳಿದುಕೊಂಡ ಸುರೇಶ್ ರೈನಾ, ರವೀಂದ್ರ ಜಡೇಜ

ಪಿಟಿಐ
Published 4 ಜನವರಿ 2018, 19:30 IST
Last Updated 4 ಜನವರಿ 2018, 19:30 IST
ಸರ್ಫರಾಜ್‌ ಖಾನ್‌
ಸರ್ಫರಾಜ್‌ ಖಾನ್‌   

ಮುಂಬೈ: ಎರಡು ವರ್ಷಗಳ ಅಮಾನತಿನ ನಂತರ ಕಣಕ್ಕೆ ಮರಳಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಮಹೇಂದ್ರ ಸಿಂಗ್ ದೋನಿ ಜೊತೆಯಲ್ಲಿ ರವೀಂದ್ರ ಜಡೇಜ ಮತ್ತು ಸುರೇಶ್ ರೈನಾ ಮರಳಿದ್ದಾರೆ.

ವಿರಾಟ್ ಕೊಹ್ಲಿ ಅವರಿಗೆ ಶಕ್ತಿ ತುಂಬಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರನ್ನು ಉಳಿಸಿಕೊಂಡಿದೆ. ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್ ಗೇಲ್ ಹರಾಜು ಪ್ರಕ್ರಿಯೆ ವರೆಗೆ ಕಾಯುವಂತೆ ಮಾಡಿರುವ ಫ್ರಾಂಚೈಸ್‌ ಸರ್ಫರಾಜ್‌ ಖಾನ್‌ಗೆ ₹ 1.75 ಕೋಟಿ ಕೊಟ್ಟು ಉಳಿಸಿಕೊಳ್ಳಲು ನಿರ್ಧರಿಸಿ ಅಚ್ಚರಿ ಮೂಡಿಸಿದೆ.

‘ಸಮರ್ಥ ಆಟಗಾರರನ್ನು ಉಳಿಸಲು ಲಭಿಸಿದ ಅವಕಾಶ ಅದ್ಭುತವಾಗಿದೆ. ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಿರುವ ಆಟಗಾರರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದೇವೆ. ಹೀಗಾಗಿ ಭುವನೇಶ್ವರ್‌ ಕುಮಾರ್ ಮತ್ತು ಡೇವಿಡ್ ವಾರ್ನರ್ ಅವರನ್ನು ಕೈಬಿಡಲಿಲ್ಲ’ ಎಂದು ಸನ್‌ರೈಸರ್ಸ್ ಹೈದರಾಬಾದ್ ತಂಡದ ಪೋಷಕ ವಿವಿಎಸ್ ಲಕ್ಷ್ಮಣ್ ತಿಳಿಸಿದರು.

ADVERTISEMENT

‘ರೋಹಿತ್ ಶರ್ಮಾ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಸಂಬಂಧ ಅಪರೂಪದ್ದು. ಹಾರ್ದಿಕ್ ಪಾಂಡ್ಯ ಮತ್ತು ಜಸ್‌ಪ್ರೀತ್ ಬೂಮ್ರಾ ತಂಡದ ವಿಶೇಷ ಆಟಗಾರರು. ಆದ್ದರಿಂದ ಅವರನ್ನು ಉಳಿಸಿಕೊಂಡಿದ್ದೇವೆ’ ಎಂದು ಮುಂಬೈ ಇಂಡಿಯನ್ಸ್‌ ಮುಖ್ಯಸ್ಥ ಆಕಾಶ್ ಅಂಬಾನಿ ಹೇಳಿದರು.

ಯುವ ಆಟಗಾರರಿಗೆ ‘ಬೆಲೆ’
ಯುವ ಆಟಗಾರರನ್ನು ಪ್ರೋತ್ಸಾಹಿಸಬೇಕು ಎಂಬ ಉದ್ದೇಶದಿಂದ ಸರ್ಫರಾಜ್ ಖಾನ್ ಅವರನ್ನು ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರನ್ನು ಕೈಬಿಡುವುದಾದರೂ ಹೇಗೆ’ ಎಂದು ಆರ್‌ಸಿಬಿ ನಿರ್ದೇಶಕ ಅಮೃತ್‌ ಥಾಮಸ್‌ ತಿಳಿಸಿದರು.

*

ಡೇರ್‌ ಡೆವಿಲ್ಸ್‌ಗೆ ಪಾಂಟಿಂಗ್ ಕೋಚ್‌
ಮುಂಬೈ:
ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ರಿಕಿ ಪಾಂಟಿಂಗ್‌ ಅವರನ್ನು ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್ ತಂಡದ ಕೋಚ್ ಆಗಿ ನೇಮಕ ಮಾಡಲಾಗಿದೆ. ಫ್ರಾಂಚೈಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್ ದುವಾ ಅವರು ಈ ವಿಷಯವನ್ನು ಗುರುವಾರ ತಿಳಿಸಿದ್ದಾರೆ.

ಡೆಲ್ಲಿ ಡೇರ್ ಡೆವಿಲ್ಸ್‌ಗೆ ರಾಹುಲ್ ದ್ರಾವಿಡ್‌ ಕೋಚ್ ಆಗಿದ್ದರು. ಆದರೆ ಕಳೆದ ಬಾರಿ ಹಿತಾಸಕ್ತಿ ಸಂಘರ್ಷಕ್ಕೆ ಸಂಬಂಧಿಸಿದ ವಿವಾದದ ನಂತರ ಕಳೆದ ವರ್ಷ ಅವರು ರಾಜೀನಾಮೆ ನೀಡಿದ್ದರು. ರಿಕಿ ಪಾಂಟಿಂಗ್ 2015 ಮತ್ತು 2016ರಲ್ಲಿ ಮುಂಬೈ ಇಂಡಿಯನ್ಸ್‌ಗೆ ತರಬೇತಿ ನೀಡಿದ್ದಾರೆ. 2015ರಲ್ಲಿ ತಂಡ ಪ್ರಶಸ್ತಿ ಗೆದ್ದಿತ್ತು. ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ ತಂಡದಲ್ಲಿ ಪಾಂಟಿಂಗ್ ಈ ಹಿಂದೆ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.