ADVERTISEMENT

ಕ್ರೀಡಾ ಸಾಧಕರಿಗೆ ಕೆಒಎ ಗೌರವ: ರಾಜ್ಯಪಾಲರಿಂದ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 19:30 IST
Last Updated 11 ಜನವರಿ 2018, 19:30 IST
ಬೆಂಗಳೂರಿನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ (ಕುಳಿತವರ ಪೈಕಿ ಎಡದಿಂದ ನಾಲ್ಕನೇಯವರು) ಅವರಿಂದ ಕೆಒಎ ಪ್ರಶಸ್ತಿ ಸ್ವೀಕರಿಸಿದ ಬಳಿಕ ಸಾಧಕರು ಗಣ್ಯರೊಂದಿಗೆ ಕಾಣಿಸಿಕೊಂಡರು. (ನಿಂತವರು, ಎಡದಿಂದ) ಅನಿಲ್‌ಕುಮಾರ್‌ (ಬ್ಯಾಸ್ಕೆಟ್‌ಬಾಲ್‌), ಎಂ.ಅವಿನಾಶ್‌ (ಈಜು), ವಿ.ಖುಷಿ (ಟೇಬಲ್‌ ಟೆನಿಸ್‌), ಬಿ.ನಿಖಿಲ್‌ (ಶೂಟಿಂಗ್‌), ಶರ್ಮದಾ ಬಾಲು (ಟೆನಿಸ್‌), ಸಂದೀಪ್‌ ಕಾಟೆ (ಕುಸ್ತಿ), ಬಾಲಾಜಿ ನರಸಿಂಹನ್‌ (ಹಿರಿಯ ಫುಟ್‌ಬಾಲ್‌ ಆಟಗಾರ), ಉದಯ ಕುಮಾರ್‌ (ಹಿರಿಯ ಟೆನಿಸ್‌ ಆಟಗಾರ್ತಿ), ಕಿರಣ್‌ ಕುಮಾರ್‌ ಕುಲಕರ್ಣಿ (ಕ್ರೀಡಾ ವೈದ್ಯ), ಡೇನಿಯಲ್‌ ಎಸ್‌. ಫರೀದ್‌ (ಬ್ಯಾಡ್ಮಿಂಟನ್‌), ಹೇಮಂತ್‌ ಸಂಪಾಜೆ (ಮಾಧ್ಯಮ), ಬಲಿಯಾಡ ಕಾಳಯ್ಯ ಸುಬ್ರಮಣಿ (ಹಿರಿಯ ಹಾಕಿ ಆಟಗಾರ) ಮತ್ತು ನವೀನ್‌ ಜಾನ್‌ (ಸೈಕ್ಲಿಂಗ್‌). (ಕುಳಿತವರು, ಎಡದಿಂದ), ಅನಂತರಾಜು (ಕೆಒಎ ಮಹಾ ಕಾರ್ಯದರ್ಶಿ), ಅನುಪಮ್‌ ಅಗರವಾಲ್‌ (ಡಿವೈಇಎಸ್‌ ನಿರ್ದೇಶಕ), ಕೆ.ಗೋವಿಂದ ರಾಜ್‌ (ಕೆಒಎ ಅಧ್ಯಕ್ಷ), ರಾಮಲಿಂಗಾ ರೆಡ್ಡಿ (ಗೃಹ ಸಚಿವ), ರಜನೀಶ್‌ ಗೋಯಲ್‌ (ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ), ರಾಜೇಶ್‌ ಎನ್‌.ಜಗದಾಳೆ (ಕೆಒಎ ಖಜಾಂಚಿ) ಮತ್ತು ಎಂ.ಮೋಹನ್‌ ರಾಜ್‌ (ಕೆಒಎ ಪ್ರಶಸ್ತಿ ಆಯ್ಕೆ ಸಮಿತಿ ಮುಖ್ಯಸ್ಥ) ಪ್ರಜಾವಾಣಿ ಚಿತ್ರ

ಬೆಂಗಳೂರು: ಕ್ರೀಡಾ ಕ್ಷೇತ್ರದಲ್ಲಿ ಎತ್ತರದ ಸಾಧನೆ ಮಾಡಿದ ರಾಜ್ಯದ 15 ಮಂದಿಗೆ ಗುರುವಾರ ಕರ್ನಾಟಕ ಒಲಿಂಪಿಕ್‌ ಸಂಸ್ಥೆ (ಕೆಒಎ) ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಯುವ ಕೇಂದ್ರದ ಯವನಿಕಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ವಿಜೇತರಿಗೆ ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕ ನೀಡಿದರು.

ಬಳಿಕ ಮಾತನಾಡಿದ ಅವರು ‘ಪ್ರತಿಯೊಬ್ಬರೂ ಜೀವನದಲ್ಲಿ ಕ್ರೀಡಾ ಸ್ಫೂರ್ತಿ ಬೆಳೆಸಿಕೊಳ್ಳಬೇಕು. ಬದ್ಧತೆ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಎತ್ತರದ ಸಾಧನೆ ಮಾಡಲು ಸಾಧ್ಯ. ಹೀಗಾಗಿ ಎಳವೆಯಿಂದಲೇ ಮಕ್ಕಳಲ್ಲಿ ಈ ಗುಣ ಬೆಳೆಸಲು ‍‍ಪೋಷಕರು ಮುಂದಾಗಬೇಕು’ ಎಂದರು.

ADVERTISEMENT

‘ಆರು ದಶಕಗಳಿಂದಲೂ ಕೆಒಎ ಕ್ರೀಡೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಜೊತೆಗೆ ಹಿಂದಿನ 16 ವರ್ಷಗಳಿಂದ ಕ್ರೀಡಾ ಕ್ಷೇತ್ರದಲ್ಲಿ ಎತ್ತರದ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಾ ಬಂದಿದೆ. ಕೆಒಎಯ ಈ ಕಾರ್ಯ ಶ್ಲಾಘನೀಯ. ಇದಕ್ಕೆ ಕರ್ನಾಟಕ ಸರ್ಕಾರವೂ ಬೆಂಬಲವಾಗಿ ನಿಂತಿದೆ. ಈ ಕಾರ್ಯ ಹೀಗೆ ಮುಂದುವರಿಯಲಿ’ ಎಂದು ಹೇಳಿದರು.

‘ಕ್ರೀಡಾಪಟುಗಳಿಗೆ ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸುವುದು ರಾಜ್ಯ ಸರ್ಕಾರಗಳ ಜವಾಬ್ದಾರಿ. ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸುಸಜ್ಜಿತ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಗಳು ಮತ್ತು ಅಥ್ಲೆಟಿಕ್ಸ್‌ ಟ್ರ್ಯಾಕ್‌ಗಳು ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಮುಂದಾಗಬೇಕು’ ಎಂದು ತಿಳಿಸಿದರು.

‘ರಾಜ್ಯ ಸರ್ಕಾರ ಕ್ರೀಡೆಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದೆ. ಹೋದ ವರ್ಷ ನಾವು ಕ್ರೀಡಾ ಕ್ಷೇತ್ರಕ್ಕೆ ₹280 ಕೋಟಿ ಅನುದಾನ ಬಿಡುಗಡೆ ಮಾಡಿದ್ದೇವೆ. ಈ ವರ್ಷವೂ ₹400 ಕೋಟಿ ನೀಡಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದೆ’ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಪ್ರಶಸ್ತಿಗೆ ಆಯ್ಕೆಯಾಗಿದ್ದ ಹಾಕಿ ಆಟಗಾರ ಪ್ರಧಾನ್‌ ಸೋಮಣ್ಣ, ಜೂಡೊ ಸ್ಪರ್ಧಿ ವಿ.ಅವಿನಾಶ್‌ ಕಾರ್ಯಕ್ರಮಕ್ಕೆ ಬಂದಿರಲಿಲ್ಲ.

10 ಮಂದಿ ಕ್ರೀಡಾಪಟುಗಳು ಮತ್ತು ಒಬ್ಬರು ಕ್ರೀಡಾ ಬರಹಗಾರರಿಗೆ ತಲಾ ₹ 1 ಲಕ್ಷ, ಮೂರು ಮಂದಿ ಹಿರಿಯ ಕ್ರೀಡಾಪಟುಗಳು ಮತ್ತು ಕ್ರೀಡಾ ವೈದ್ಯರಿಗೆ ತಲಾ ₹25 ಸಾವಿರ ಬಹುಮಾನ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.