ADVERTISEMENT

ಸರ್ಜುಬಾಲಾ, ಸರಿತಾಗೆ ಚಿನ್ನ

ಪಿಟಿಐ
Published 12 ಜನವರಿ 2018, 19:30 IST
Last Updated 12 ಜನವರಿ 2018, 19:30 IST
ಸರಿತಾ ದೇವಿ
ಸರಿತಾ ದೇವಿ   

ರೋಹ್ಟಕ್‌ : ಮಣಿಪುರದ ಸರ್ಜುಬಾಲಾ ದೇವಿ (48ಕೆ.ಜಿ) ಚಿನ್ನದ ಪದಕದೊಂದಿಗೆ ಉತ್ತಮ ಬಾಕ್ಸರ್ ಟ್ರೋಫಿ ಎತ್ತಿಹಿಡಿದಿದ್ದಾರೆ.

ಶುಕ್ರವಾರ ಮುಕ್ತಾಯಗೊಂಡ ರಾಷ್ಟ್ರೀಯ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಎಲ್‌. ಸರಿತಾ ದೇವಿ, ಸೋನಿಯಾ ಲಾಥರ್ ಕೂಡ ಚೆನ್ನ ಗೆದ್ದರು. ರೈಲ್ವೆ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್‌ (ಆರ್‌ಎಸ್‌ಪಿಬಿ) ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ. ಈ ತಂಡ ಐದು ಚಿನ್ನ ಹಾಗೂ ಎರಡು ಕಂಚು ಗೆದ್ದಿದೆ.

48ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮಣಿಪುರ ತಂಡದ ಸರ್ಜುಬಾಲಾ ಫೈನಲ್‌ನಲ್ಲಿ 3–2ರಲ್ಲಿ ಹರಿಯಾಣದ ರಿತುಗೆ ಸೋಲುಣಿಸಿದರು. ಮಣಿಪುರ ತಂಡ ಏಕೈಕ ಚಿನ್ನ ಗೆದ್ದುಕೊಂಡಿತು. ಈ ಚಾಂಪಿಯನ್‌ಷಿಪ್‌ನಲ್ಲಿ ಸರ್ಜುಬಾಲಾ ಸತತ ಎರಡನೇ ವರ್ಷ ಚಿನ್ನದ ಪದಕ ಜಯಿಸಿದ್ದಾರೆ.

ADVERTISEMENT

ಆಲ್‌ ಇಂಡಿಯಾ ಪೊಲೀಸ್‌ (ಎಐಪಿ) ತಂಡದ ಪರ ಆಡಿದ ಸರಿತಾ 60ಕೆ.ಜಿ ವಿಭಾಗದಲ್ಲಿ ಆರ್‌ಎಸ್‌ಪಿಬಿ ತಂಡದ ಪವಿತ್ರಾ ಎದುರು ಗೆದ್ದರು.

ಆರ್‌ಎಸ್‌ಪಿಬಿ ತಂಡದ ಇನ್ನೊರ್ವ ಸ್ಪರ್ಧಿ ಸೋನಿಯಾ 57ಕೆ.ಜಿ ವಿಭಾಗದಲ್ಲಿ ಹರಿಯಾಣದ ಶಶಿ ಚೋಪ್ರಾ ಎದುರು ಗೆದ್ದರು. ಆಲ್‌ ಇಂಡಿಯಾ ಪೊಲೀಸ್ ತಂಡದ ಮೀನಾಕುಮಾರಿ 54ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದರು. ಫೈನಲ್‌ನಲ್ಲಿ ಅವರು ಹರಿಯಾಣದ ಮನೀಷ್ ಅವರನ್ನು ಮಣಿಸಿದರು. ಆರ್‌ಎಸ್‌ಪಿಬಿ ತಂಡದ ರಾಜೇಶ್‌ ನರ್ವಾಲ್‌ 48ಕೆ.ಜಿ ಫ್ಲೈವೇಟ್ ವಿಭಾಗದಲ್ಲಿ ಮೋನಿಕಾ ಎದುರು ಗೆದ್ದರು.

ಹರಿಯಾಣ ತಂಡ ಟೂರ್ನಿಯಲ್ಲಿ ಒಂದು ಚಿನ್ನ ಗೆದ್ದಿತು. ಪೂಜಾ ರಾಣಿ 75ಕೆ.ಜಿ ವಿಭಾಗದಲ್ಲಿ ಅಸ್ಸಾಂನ ಅಲಾರಿ ಬೋರೊ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.