ADVERTISEMENT

ಪಂಕಜ್‌ ಅಡ್ವಾಣಿ ಮುಡಿಗೆ ಕಿರೀಟ

ಧ್ವಜ್‌ ಹರಿಯಾಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 19:30 IST
Last Updated 15 ಜನವರಿ 2018, 19:30 IST
ಪಂಕಜ್‌ ಅಡ್ವಾಣಿ ಮುಡಿಗೆ ಕಿರೀಟ
ಪಂಕಜ್‌ ಅಡ್ವಾಣಿ ಮುಡಿಗೆ ಕಿರೀಟ   

ಬೆಂಗಳೂರು: ಕರ್ನಾಟಕದ ಪಂಕಜ್‌ ಅಡ್ವಾಣಿ, ರಾಷ್ಟ್ರೀಯ ಸೀನಿಯರ್‌ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಕೆಎಸ್‌ಬಿಎ ಕೊಠಡಿಯಲ್ಲಿ ಸೋಮವಾರ ನಡೆದ ಫೈನಲ್‌ ಹೋರಾಟದಲ್ಲಿ ಪಂಕಜ್‌ 151–0, 152–0, 151–36, 151–0, 152–112 ಫ್ರೇಮ್‌ಗಳಿಂದ ಪಿಎಸ್‌ಪಿಬಿಯ ಧ್ವಜ್‌ ಹರಿಯಾ ಸವಾಲು ಮೀರಿದರು.

ಹೋದ ಬಾರಿ ಟ್ರೋಫಿ ಎತ್ತಿಹಿಡಿದಿದ್ದ ಪಿಎಸ್‌ಪಿಬಿ ತಂಡದ ಪಂಕಜ್‌ ಈ ಬಾರಿಯೂ ಪ್ರಾಬಲ್ಯ ಮೆರೆದರು.

ADVERTISEMENT

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 18 ಪ್ರಶಸ್ತಿ ಗೆದ್ದ ಸಾಧನೆ ಮಾಡಿರುವ ಬೆಂಗಳೂರಿನ ಆಟಗಾರ, ಫೈನಲ್‌ ಹೋರಾಟದ ಮೊದಲ ಎರಡು ಫ್ರೇಮ್‌ಗಳಲ್ಲಿ ನಿರಾಯಾಸವಾಗಿ ಗೆದ್ದು ಮುನ್ನಡೆ ಕಂಡುಕೊಂಡರು.

ಮೂರನೇ ಫ್ರೇಮ್‌ನಲ್ಲಿ ಎದುರಾಳಿಯಿಂದ ಅಲ್ಪ ಪ್ರತಿರೋಧ ಎದುರಾಯಿತು. ಇದರಿಂದ ಕಿಂಚಿತ್ತೂ ವಿಶ್ವಾಸ ಕಳೆದುಕೊಳ್ಳದ ಪಂಕಜ್‌ 151–36ರಿಂದ ಗೆದ್ದು ಮುನ್ನಡೆಯನ್ನು 3–0ಗೆ ಹೆಚ್ಚಿಸಿಕೊಂಡರು.

ನಂತರದ ಎರಡು ಫ್ರೇಮ್‌ಗಳಲ್ಲೂ ಪಂಕಜ್‌ ಆಟ ಕಳೆಗಟ್ಟಿತು. ಚುರುಕಿನ ಆಟದ ಮೂಲಕ ಪಾಯಿಂಟ್ಸ್‌ ಕಲೆಹಾಕಿದ ಅವರು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ಅಡ್ವಾಣಿ, ರಾಷ್ಟ್ರೀಯ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದ ಒಂಬತ್ತನೇ ಪ್ರಶಸ್ತಿ ಇದಾಗಿದೆ. ಬಿಲಿಯರ್ಡ್ಸ್‌, ಸ್ನೂಕರ್‌, 6–ರೆಡ್‌ ಸ್ನೂಕರ್‌, ಜೂನಿಯರ್‌ ಬಿಲಿಯರ್ಡ್ಸ್‌ ಮತ್ತು ಜೂನಿಯರ್‌ ಸ್ನೂಕರ್‌ ಸೇರಿದಂತೆ ಒಟ್ಟಾರೆ 31 ಟ್ರೋಫಿಗಳನ್ನು ಎತ್ತಿಹಿಡಿದಿದ್ದಾರೆ.

‘ಫೈನಲ್‌ನಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಲೇಬೇಕು ಎಂದು ನಿರ್ಧರಿಸಿದ್ದೆ. ಹೀಗಾಗಿ ವಿಶೇಷ ಯೋಜನೆ ಹೆಣೆದು ಕಣಕ್ಕಿಳಿದಿದ್ದೆ’ ಎಂದು ಪಂಕಜ್‌ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.

ಭಾಸ್ಕರ್‌ಗೆ ಮೂರನೇ ಸ್ಥಾನ: ಕರ್ನಾಟಕದ ಅನುಭವಿ ಆಟಗಾರ ಬಿ.ಭಾಸ್ಕರ್‌, ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು. ಮೂರನೇ ಸ್ಥಾನಕ್ಕಾಗಿ ನಡೆದ ‘ಪ್ಲೇ ಆಫ್‌’ ಹೋರಾಟದಲ್ಲಿ ಭಾಸ್ಕರ್‌ 150–57, 62–150, 151–116, 26–150, 152–9ರಲ್ಲಿ ಪಿಎಸ್‌ಪಿಬಿಯ ರೂಪೇಶ್‌ ಷಾ ಅವರನ್ನು ಪರಾಭವಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.