ADVERTISEMENT

ಒಲಿಂಪಿಯನ್‌ ಪ್ರಕಾಶ್‌ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 19:30 IST
Last Updated 22 ಜನವರಿ 2018, 19:30 IST
ಒಲಿಂಪಿಯನ್‌ ಪ್ರಕಾಶ್‌ ಆಕರ್ಷಣೆ
ಒಲಿಂಪಿಯನ್‌ ಪ್ರಕಾಶ್‌ ಆಕರ್ಷಣೆ   

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಹುಬ್ಬಳ್ಳಿ ಸ್ಪೋರ್ಟ್ಸ್‌ ಶೂಟಿಂಗ್‌ ಆಕಾಡೆಮಿ (ಎಚ್‌ಎಸ್‌ಎಸ್‌ಎ) ಮೊದಲ ಬಾರಿಗೆ ಆಯೋಜಿಸಿರುವ ರಾಷ್ಟ್ರೀಯ ಮುಕ್ತ ಶೂಟಿಂಗ್‌ ಚಾಂಪಿಯನ್‌ಷಿಪ್‌ ಮಂಗಳವಾರ ಆರಂಭವಾಗಲಿದ್ದು, ಒಲಿಂಪಿಯನ್‌ ಪಿ.ಎನ್‌. ಪ್ರಕಾಶ್‌ ಅವರು ಪ್ರಮುಖ ಆಕರ್ಷಣೆಯಾಗಿದ್ದಾರೆ.

ಗಂಗೂಬಾಯಿ ಹಾನಗಲ್‌ ಸಂಗೀತ ಗುರುಕುಲದ ಹತ್ತಿರವಿರುವ ಅಕಾಡೆಮಿಯ ಶೂಟಿಂಗ್‌ ರೇಂಜ್‌ನಲ್ಲಿ 30ರ ವರೆಗೆ ಸ್ಪರ್ಧೆಗಳು ನಡೆಯಲಿವೆ. ಬೆಂಗಳೂರಿನ ಪ್ರಕಾಶ್‌ ಅವರು 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. 2017ರಲ್ಲಿ ಬ್ರಿಸ್ಬೇನ್‌ನಲ್ಲಿ ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

‘ಪ್ರಕಾಶ್‌ ಅವರು ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವುದರಿಂದ ಸ್ಥಳೀಯ ಶೂಟರ್‌ಗಳಿಗೆ ಪ್ರೇರಣೆ ಲಭಿಸಲಿದೆ. ಏಷ್ಯನ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಪದಕ ಜಯಿಸಿರುವ ಕರ್ನಾಟಕದ ಮಹಿಳಾ ಶೂಟರ್‌ ಸುಮಾ ಶಿರೂರ ಕೂಡ ಬರಲಿದ್ದಾರೆ. ಆದರೆ ಸುಮಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ಶೂಟಿಂಗ್‌ ಅಕಾಡೆಮಿಯ ಅಧ್ಯಕ್ಷ ಶಿವಾನಂದ ಬಾಲೆಹೊಸೂರ ತಿಳಿಸಿದರು.

ADVERTISEMENT

‘ಅಂಗವಿಕಲರಿಗಾಗಿ ಓಪನ್‌ ಚಾಲೆಂಜ್‌ ಕಪ್‌ ಸ್ಪರ್ಧೆಗಳನ್ನು ಪ್ರತ್ಯೇಕವಾಗಿ ಆಯೋಜಿಸಲಾಗಿದೆ. ಜ್ಯೋತಿ ಸಣ್ಣಕ್ಕಿ, ಕೇಶವ ತೆಲುಗು ಅವರು ಈ ವಿಭಾಗದ ಪ್ರಮುಖ ಸ್ಪರ್ಧಿಗಳಾಗಿದ್ದಾರೆ’ ಎಂದು ಹೇಳಿದರು.

ಅಂತರರಾಷ್ಟ್ರೀಯ ಶೂಟರ್‌ಗಳಾದ ಟಿ.ಸಿ. ಪಳಂಗಪ್ಪ, ಸುಬ್ಬಯ್ಯ, ಮಂಜುನಾಥ ಪಟೇಗಾರ, ಉತ್ತರ ಪ್ರದೇಶ ಸೌರಭ್‌, ಮಹಾರಾಷ್ಟ್ರದ ಅನುಷ್ಕಾ ಪಾಟೀಲ, ಪಶ್ಚಿಮ ಬಂಗಾಳದ ಮೆಹುಲಿ ಘೋಷ್‌, ರಾಷ್ಟ್ರೀಯ ಶೂಟರ್‌ಗಳಾದ ಕರ್ನಾಟಕದ ರಾಕೇಶ್‌ ಮನ್‌ಪತ್‌, ಮೇಘನಾ ಸಜ್ಜನ, ನಿಖಿಲ್‌, ಅಕ್ಷತಾ ಹರಕುಣಿ, ಸಂಜಯ ಶುಕ್ಲಾ, ದುರ್ಗಾನಂದ ಮತ್ತು ತೇಜಸ್‌ ಭಾಗವಹಿಸಲಿದ್ದಾರೆ.

ಏರ್‌ ರೈಫಲ್‌, ಏರ್‌ ಪಿಸ್ತೂಲ್‌ ಮತ್ತು ಓಪನ್‌ ಸೈಟ್‌ ರೈಫಲ್‌ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.  ಮೊದಲ ಎರಡು ವಿಭಾಗಗಲ್ಲಿ ಮೊದಲ ಸ್ಥಾನ ಪಡೆದ ಶೂಟರ್‌ಗಳಿಗೆ ತಲಾ ₹ 1 ಲಕ್ಷ, ಎರಡನೇ ಸ್ಥಾನ ಪಡೆದವರಿಗೆ ತಲಾ ₹ 50 ಸಾವಿರ ಬಹುಮಾನ ಲಭಿಸುತ್ತದೆ. ಅಂಗವಿಕಲರ ವಿಭಾಗಕ್ಕೆ ಏರ್‌ ರೈಫಲ್‌ ಮತ್ತು ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಸ್ಪರ್ಧೆಗಳು ಜರುಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.