ADVERTISEMENT

ರಾಷ್ಟ್ರೀಯ ದಾಖಲೆ ಮಾಡಿದ ಸೌಮ್ಯಬೇಬಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2018, 19:30 IST
Last Updated 18 ಫೆಬ್ರುವರಿ 2018, 19:30 IST

ನವದೆಹಲಿ (ಪಿಟಿಐ): ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಡಿಗೆ ಚಾಂಪಿಯನ್‌ಷಿಪ್‌ನ 20 ಕಿ.ಮೀ ಸ್ಪರ್ಧೆಯಲ್ಲಿ ಸೌಮ್ಯಬೇಬಿ ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ.

ತಿರುವನಂತಪುರದ ಸೌಮ್ಯ ದೆಹಲಿಯನ್ನು ಪ್ರತಿನಿಧಿಸುತ್ತಿದ್ದು, ನಿಗದಿತ ದೂರವನ್ನು 1ಗಂಟೆ 31 ನಿಮಿಷ ಹಾಗೂ 28 ಸೆಕೆಂಡುಗಳಲ್ಲಿ ತಲುಪಿದರು. ಈ ಹಿಂದೆ ಖುಷ್ಬೀರ್‌ಸಿಂಗ್ ಅವರು ಇದೇ ದೂರವನ್ನು 1ಗಂಟೆ 31 ನಿಮಿಷ 40 ಸೆಕೆಂಡುಗಳಲ್ಲಿ ಕ್ರಮಿಸಿ ರಾಷ್ಟ್ರೀಯ ದಾಖಲೆ ಹೊಂದಿದ್ದರು.

ಇದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 24 ವರ್ಷದ ಖುಷ್ಬೀರ್‌ 1ಗಂಟೆ 32 ನಿಮಿಷ 16 ಸೆಕೆಂಡುಗಳಲ್ಲಿ ತಲುಪಿ ಬೆಳ್ಳಿ ಪದಕ ಪಡೆದರು. ಹರಿಯಾಣದ ಕರಮ್‌ಜಿತ್‌ಕೌರ್‌ 1ಗಂಟೆ 34 ನಿಮಿಷ 8 ಸೆಕೆಂಡುಗಳಲ್ಲಿ ಮುಟ್ಟಿ ಕಂಚಿನ ಪದಕ ಗೆದ್ದರು.

ADVERTISEMENT

ಪುರುಷರ 20 ಕಿ.ಮೀ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಹೊಂದಿದ್ದ ಕೇರಳದ ಕೆ.ಟಿ.ಇರ್ಫಾನ್‌ 1ಗಂಟೆ 21 ನಿಮಿಷ 31.25 ಸೆಕೆಂಡುಗಳಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಉತ್ತರಾಖಂಡದ ಮನೀಶ್‌ ಸಿಂಗ್‌ 1 ಗಂಟೆ 21 ನಿಮಿಷ 31.72 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಗೆದ್ದರೆ, ಹರಿಯಾಣದ ನೀರಕ್‌ 1ಗಂಟೆ 21 ನಿಮಿಷ 39 ಸೆಕೆಂಡುಗಳಲ್ಲಿ ಮುಟ್ಟಿ ಕಂಚಿನ ಪದಕ ಪಡೆದರು.

ಪುರುಷ ಹಾಗೂ ಮಹಿಳೆಯರ 20 ಕಿ.ಮೀ ನಡಿಗೆ ಸ್ಪರ್ಧೆಯ ವಿಜೇತರು ಪದಕದ ಜೊತೆಗೆ ಕ್ರಮವಾಗಿ ₹30,000, ₹25,000 ಹಾಗೂ ₹20ಸಾವಿರ ನಗದು ಬಹುಮಾನ ಪಡೆದರು. 10 ಕಿ.ಮೀ. ಸ್ಪರ್ಧೆ ವಿಜೇತರಿಗೆ ಯಾವುದೇ ನಗದು ಬಹುಮಾನ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.