ADVERTISEMENT

ಚತುಷ್ಕೋನ ಕ್ರಿಕೆಟ್ ಸರಣಿ ಇಂದಿನಿಂದ ಆರಂಭ

ಯುವಪ್ರತಿಭೆಗಳ ಹಣಾಹಣಿಗೆ ಉದ್ಯಾನನಗರಿ ಸಜ್ಜು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2018, 19:30 IST
Last Updated 22 ಆಗಸ್ಟ್ 2018, 19:30 IST
ಮಯಂಕ್ ಅಗರವಾಲ್
ಮಯಂಕ್ ಅಗರವಾಲ್   

ಬೆಂಗಳೂರು:‘ಉದ್ಯಾನನಗರಿ’ಯಲ್ಲಿ ಮತ್ತೆ ಕ್ರಿಕೆಟ್ ಚಟುವಟಿಕೆ ಗರಿಗೆದರಿದೆ.ವಿಜಯವಾಡದಲ್ಲಿ ಮಳೆಯ ಆರ್ಭಟ ಹೆಚ್ಚಿಸುರುವದರಿಂದ ಅಲ್ಲಿ ನಡೆಯಬೇಕಿದ್ದ ಚತುಷ್ಕೋನ ಕ್ರಿಕೆಟ್ ಸರಣಿಯ ಪಂದ್ಯಗಳು ಗುರುವಾರದಿಂದ ಇಲ್ಲಿ ನಡೆಯಲಿವೆ.

ಆಗಸ್ಟ್‌ 17ರಿಂದ 29ರವರೆಗೆ ಈ ಟೂರ್ನಿಯನ್ನು ಆಯೋಜಿಸಲಾಗಿತ್ತು. ಆದರೆ, ಮೊದಲ ನಾಲ್ಕು ಪಂದ್ಯಗಳು ಮಳೆಗೆ ಆಹುತಿಯಾಗಿದ್ದರಿಂದ ಉಳಿದ ಸರಣಿಯನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ಆಡುತ್ತಿರುವ ಭಾರತ ಎ ಮತ್ತು ಭಾರತ ಬಿ ತಂಡಗಳಲ್ಲಿ ಕರ್ನಾಟಕದ ಆಟಗಾರರು ಇದ್ದಾರೆ. ಆದ್ದರಿಂದ ಏಕದಿನ ಮಾದರಿಯ ಈ ಪಂದ್ಯಗಳನ್ನು ನೋಡುವ ಅವಕಾಶ ಬೆಂಗಳೂರಿಗರಿಗೆ ಲಭಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳು ಮುಖಾಮುಖಿಯಾಗಲಿವೆ. ಈಚೆಗೆ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ಎರಡು ‘ಟೆಸ್ಟ್’ ಪಂದ್ಯಗಳ ಸರಣಿಯನ್ನು 1–0ಯಿಂದ ಗೆದ್ದಿದ ಭಾರತ ಎ ತಂಡವನ್ನು ಈ
ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ.

ADVERTISEMENT

ರಾಜ್ಯ ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್, ಬ್ಯಾಟ್ಸ್‌ಮನ್ ಆರ್. ಸಮರ್ಥ್ ಅವರು ತಂಡದಲ್ಲಿದ್ದಾರೆ. ಆಂಧ್ರದ ಹನುಮವಿಹಾರಿ ಮತ್ತು ಮುಂಬೈನ ಪೃಥ್ವಿ ಶಾ ಕೂಡ ತಂಡದಲ್ಲಿದ್ದಾರೆ. ಆಸ್ಟ್ರೇಲಿಯಾ ‘ಎ’ ತಂಡದಲ್ಲಿ ಅನುಭವಿ ಆಟಗಾರರು ಇದ್ದಾರೆ. ಆಸ್ಟ್ರೇಲಿಯಾ ತಂಡದ ಪರ ಆಡಿರುವ ಟ್ರಾವಿಸ್ ಹೆಡ್ ಈ ತಂಡಕ್ಕೆ ನಾಯಕತ್ವ ವಹಿಸಿದ್ದಾರೆ. ಉಸ್ಮಾನ್ ಖ್ವಾಜಾ, ಪೀಟರ್ ಹ್ಯಾಂಡ್ಸ್‌ಕಂಬ್, ಡಾರ್ಚಿ ಶಾರ್ಟ್ ಅವರು ಇಲ್ಲಿ ಆಡುತ್ತಿದ್ದಾರೆ. ಅವರು ಶ್ರೇಯಸ್ ಬಳಗಕ್ಕೆ ಕಠಿಣ ಸವಾಲು ಒಡ್ಡುವ ನಿರೀಕ್ಷೆ ಇದೆ.

ಚಿನ್ನಸ್ವಾಮಿ ಅಂಗಳದ ’ಸ್ಫೋರ್ಟಿಂಗ್ ಪಿಚ್‌’ ನಲ್ಲಿ ಏಕಾಗ್ರತೆ ಸಾಧಿಸಿ ಆಡುವ ಬ್ಯಾಟ್ಸ್‌ಮನ್ ಗಳು ರನ್‌
ಗಳ ಹೊಳೆ ಹರಿಸಬಹುದು. ಬ್ಯಾಟ್ಸ್‌ಮನ್ಸ್‌ಗಳು ಲಯ ತಪ್ಪಿದರೆ ಬೌಲರ್‌ಗಳು ಮೇಲುಗೈ ಸಾಧಿಸುವುದು ಖಚಿತ.

ತಂಡಗಳು ಇಂತಿವೆ:

ಭಾರತ ‘ಎ‘: ಶ್ರೇಯಸ್ ಅಯ್ಯರ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ದೀಪಕ್ ಚಹಾರ್, ಸೂರ್ಯಕುಮಾರ್ ಯಾದವ್, ಹನುಮವಿಹಾರಿ, ಕೃಷ್ಣಪ್ಪ ಗೌತಮ್, ನಿತೀಶ್ ರಾಣಾ, ಸಿದ್ದೇಶ್ ಲಾಡ್, ಆರ್. ಸಮರ್ಥ್, ಮೊಹಮ್ಮದ್ ಸಿರಾಜ್, ಕೆ. ಖಲೀಲ್ ಅಹಮದ್, ಕೃಣಾಲ್ ಪಾಂಡ್ಯ, ಪೃಥ್ವಿ ಶಾ, ಶಿವಂ ಮಾವಿ, ಮಯಂಕ್ ಮಾರ್ಕಂಡೆ.

ಆಸ್ಟ್ರೇಲಿಯಾ ‘ಎ’: ಟ್ರಾವಿಸ್ ಹೆಡ್ (ನಾಯಕ–ವಿಕೆಟ್‌ಕೀಪರ್), ಉಸ್ಮಾನ್ ಖ್ವಾಜಾ, ಮೈಕೆಲ್ ನೆಸೆರ್, ಪೀಟರ್ ಹ್ಯಾಂಡ್ಸ್‌ಕಂಬ್, ಜೋಲ್ ಪ್ಯಾರಿಸ್, ಆಷ್ಟನ್ ಅಗರ್, ಜ್ಯಾಕ್ ವೈಲ್ಡರ್‌ಮತ್, ಕ್ರಿಸ್ ಟ್ರೆಮೆನ್, ಅಲೆಕ್ಸ್‌ ಕ್ಯಾರಿ, ಬಿಲ್ಲಿ ಸ್ಟಾನ್‌ಲೇಕ್, ಮ್ಯಾಟ್ ರೆನ್‌ ಶಾ , ಮಾರ್ನಸ್ ಲ್ಯಾಬುಶೆನ್, ಜೇ ರಿಚರ್ಡಸನ್, ಮಿಚೆಲ್ ಸ್ವೆಪ್ಸನ್, ಡಾರ್ಚಿ ಶಾರ್ಟ್.

ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು, ಪಂದ್ಯ ಆರಂಭ: ಬೆಳಿಗ್ಗೆ 9

ಭಾರತ ಬಿ: ಮನೀಷ್ ಪಾಂಡೆ (ನಾಯಕ), ಮಯಂಕ್ ಅಗರವಾಲ್, ಜಯಂತ್ ಯಾದವ್, ಧರ್ಮೇಂದ್ರಸಿಂಹ ಜಡೇಜ, ರಿಕಿ ಭುಯ್, ದೀಪಕ್ ಹೂಡಾ, ನವದೀಪ್ ಸೈನಿ, ಅಭಿಮನ್ಯು ಈಶ್ವರನ್, ಶ್ರೇಯಸ್ ಗೋಪಾಲ್, ಇಶಾನ್ ಕಿಶನ್ (ವಿಕೆಟ್‌ಕೀಪರ್), ಪ್ರಸಿದ್ಧ ಕೃಷ್ಣ, ಶುಭಮನ್ ಗಿಲ್, ಕುಲವಂತ ಖೆಜ್ರೋಲಿಯಾ.

ದಕ್ಷಿಣ ಆಫ್ರಿಕಾ ಎ: ಖಯಾಯ ಜೊಂಡೊ (ನಾಯಕ), ರಾಬರ್ಟ್ ಫ್ಲೈಲಿಂಕ್, ಫರ್ಹಾನ್ ಬೆಹ್ರಾದಿನ್, ಗಿನಾನ್ ಕ್ಲೋಟ್, ಹೆನಸ್ ಡಿ ಬ್ರೈನ್, ತೆಂಬಾ ಬಯುಮಾ, ಡ್ವೇನ್ ಪ್ರಿಟೋರಿಯಸ್, ಬೆರನ್ ಹೆನ್ರಿಕ್ಸ್, ಡೇನ್ ಪೀಟರ್ಸನ್, ರೂಡಿ ಸೆಕೆಂಡ್ (ವಿಕೆಟ್‌ಕೀಪರ್), ಮಾಲುಸಿ ಸಿಬೊಟೊ, ಸಿಸಾಂದಾ ಮಗಾಲ, ತಬ್ರೇಜ್ ಶಂಸಿ, ಸೆನುರನ್ ಮುತುಸಾಮಿ, ಪೀಟರ್ ಮಲಾನ್

ಸ್ಥಳ: ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣ, ಪಂದ್ಯ ಆರಂಭ: ಬೆಳಿಗ್ಗೆ 9

ಮನೀಷ್ ಬಳಗಕ್ಕೆ ಖಯಾಯ ಜೊಂಡೊ ಬಳಗದ ಸವಾಲು

ಕರ್ನಾಟಕದ ಮನೀಷ್ ಪಾಂಡೆ ನಾಯಕತ್ವದ ಭಾರತ ಬಿತಂಡವು ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ‘ಎ’ ತಂಡವನ್ನು ಎದುರಿಸಲಿದೆ.

‘ರನ್‌ ಮಷಿನ್’ ಮಯಂಕ್ ಅಗರವಾಲ್, ಪ್ರಸಿದ್ಧ ಕೃಷ್ಣ ಮತ್ತು ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರು ಕೂಡ ಈ ತಂಡದಲ್ಲಿ ಆಡುತ್ತಿದ್ದಾರೆ. ಹೋದ ವಾರ ಆಲೂರಿನಲ್ಲಿ ನಡೆದಿದ್ದ ‘ಟೆಸ್ಟ್‌’ ನಲ್ಲಿ ಛಲದ ಆಟವಾಡಿ ಡ್ರಾ ಸಾಧಿಸಿದ್ದ ದಕ್ಷಿಣ ಆಫ್ರಿಕಾ ತಂಡವು ಗೆಲುವಿನ ಆರಂಭ ಮಾಡಲು ಉತ್ಸುಕವಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ಖಯಾಯ ಜೊಂಡೊ ಅವರು ಪ್ರವಾಸಿ ಬಳಗದ ನಾಯಕತ್ವ ವಹಿಸುತ್ತಿದ್ದಾರೆ. ತೆಂಬಾ ಬಯುಮಾ, ರೂಡಿ ಸೆಕೆಂಡ್ ಅವರು ಈ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಅವರನ್ನು ಕಟ್ಟಿಹಾಕುವ ಸವಾಲು ಪ್ರಸಿದ್ಧ ಕೃಷ್ಣ, ಶ್ರೇಯಸ್, ನವದೀಪ್ ಸೈನಿ ಅವರ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.