ADVERTISEMENT

ವಿಶ್ವಕಪ್‌ ತಂಡದಲ್ಲಿ ಸ್ಥಾನ ಗಳಿಸುವ ಹಾದಿಯಲ್ಲಿ ವಾರ್ನರ್‌

ರಾಯಿಟರ್ಸ್
Published 1 ಏಪ್ರಿಲ್ 2019, 14:54 IST
Last Updated 1 ಏಪ್ರಿಲ್ 2019, 14:54 IST
ಡೇವಿಡ್‌ ವಾರ್ನರ್‌
ಡೇವಿಡ್‌ ವಾರ್ನರ್‌   

ಮುಂಬೈ: ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಡೇವಿಡ್‌ ವಾರ್ನರ್‌, ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಗಳಿಸುವ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾಗಿದ್ದ ವಾರ್ನರ್‌ ಒಂದು ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಇದರಿಂದಾಗಿ ಐಪಿಎಲ್‌ 11ನೇ ಆವೃತ್ತಿಯಲ್ಲಿ ಆಡುವ ಅವಕಾಶವನ್ನೂ ಕಳೆದುಕೊಂಡಿದ್ದರು. ಶಿಕ್ಷೆ ಪೂರ್ಣಗೊಳಿಸಿ ಐಪಿಎಲ್‌ಗೆ ಮರಳಿರುವ ಅವರು ತಮ್ಮಲ್ಲಿ ಇನ್ನೂ ಅಬ್ಬರದ ಆಟ ಆಡುವ ಸಾಮರ್ಥ್ಯ ಇದೆ ಎಂಬುದನ್ನು ಮೊದಲ ಪಂದ್ಯದಲ್ಲೇ ಸಾಬೀತು ಮಾಡಿದ್ದರು.

ಕೋಲ್ಕತ್ತ ನೈಟ್‌ರೈಡರ್ಸ್‌ ಎದುರಿನ ಹೋರಾಟದಲ್ಲಿ ಅವರು 53 ಎಸೆತಗಳಲ್ಲಿ 85ರನ್‌ ಬಾರಿಸಿದ್ದರು. ರಾಜಸ್ಥಾನ್‌ ಎದುರಿನ ಪೈಪೋಟಿಯಲ್ಲಿ 37 ಎಸೆತಗಳಲ್ಲಿ 69ರನ್‌ ಗಳಿಸಿದ್ದ 32 ವರ್ಷ ವಯಸ್ಸಿನ ವಾರ್ನರ್‌, ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿದ್ದರು. ಈ ಮೂಲಕ ಲೀಗ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು.

ADVERTISEMENT

‘ನಿಷೇಧ ಶಿಕ್ಷೆಯಿಂದ ಸಾಕಷ್ಟು ನೊಂದಿದ್ದೇನೆ. ಈ ಅವಧಿಯಲ್ಲಿ ಹೊಸ ಪಾಠಗಳನ್ನು ಕಲಿತಿದ್ದೇನೆ. ಈಗ ನಿರಾಳನಾಗಿದ್ದೇನೆ. ಹೊಸ ಹುರುಪಿನೊಂದಿಗೆ ಆಡುತ್ತಿದ್ದೇನೆ’ ಎಂದು ವಾರ್ನರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.