ADVERTISEMENT

ಟ್ವೆಂಟಿ–20 ವಿಶ್ವಕಪ್‌: ಶ್ರೀಲಂಕಾಕ್ಕೆ ನಮೀಬಿಯಾ ಎದುರಾಳಿ

ಶನಕ ಪಡೆಗೆ ಶುಭಾರಂಭ ನಿರೀಕ್ಷೆ

ಪಿಟಿಐ
Published 17 ಅಕ್ಟೋಬರ್ 2021, 12:27 IST
Last Updated 17 ಅಕ್ಟೋಬರ್ 2021, 12:27 IST
ದಸುನ್ ಶನಕ– ಎಎಫ್‌ಪಿ ಚಿತ್ರ
ದಸುನ್ ಶನಕ– ಎಎಫ್‌ಪಿ ಚಿತ್ರ   

ಅಬುಧಾಬಿ (ಪಿಟಿಐ): ಮಾಜಿ ಚಾಂಪಿಯನ್ ಶ್ರೀಲಂಕಾ ತಂಡವು ಟಿ20 ವಿಶ್ವಕಪ್ ಅಭಿಯಾನವನ್ನು ನಮೀಬಿಯಾ ತಂಡವನ್ನು ಎದುರಿಸುವುದರ ಮೂಲಕ ಆರಂಭಿಸಲಿದೆ. ಉಭಯ ತಂಡಗಳ ನಡುವಣ ಅರ್ಹತಾ ಸುತ್ತಿನ ಪಂದ್ಯ ಸೋಮವಾರ ಇಲ್ಲಿ ನಿಗದಿಯಾಗಿದೆ.

2014ರ ಆವೃತ್ತಿಯಲ್ಲಿ ದ್ವೀಪರಾಷ್ಟ್ರ ತಂಡ ಶ್ರೀಲಂಕಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆ ಬಳಿಕ ಪ್ರಮುಖ ಆಟಗಾರರು ಒಬ್ಬೊಬ್ಬರಾಗಿ ವಿದಾಯ ಹೇಳಿದ್ದು ತಂಡಕ್ಕೆ ಹೊಡೆತ ನೀಡಿತು. ಕುಮಾರ್ ಸಂಗಕ್ಕಾರ, ಮಹೇಲ ಜಯವರ್ಧನೆ, ತಿಲಕರತ್ನೆ ದಿಲ್‌ಶಾನ್‌, ರಂಗನಾ ಹೆರಾತ್‌, ಲಸಿತ್ ಮಾಲಿಂಗ, ನುವಾನ್ ಕುಲಶೇಖರ ಹಾಗೂ ತಿಸಾರ ಪೆರೇರ ನಿವೃತ್ತಿ ಘೋಷಿಸಿದ್ದರು.

ಚಾಂಪಿಯನ್ ಆಗಿದ್ದ ತಂಡವು ಈಗ ಅರ್ಹತಾ ಸುತ್ತಿನ ಮೂಲಕ ಸೂಪರ್‌ 12 ಹಂತಕ್ಕೆ ಪ್ರವೇಶ ಪಡೆಯಬೇಕಿದೆ. ಇಂಗ್ಲೆಂಡ್‌ನಲ್ಲಿ ಬಯೋಬಬಲ್ ನಿಯಮ ಉಲ್ಲಂಘಿಸಿ ಅಮಾನತುಗೊಂಡಿರುವ ನಿರೋಶನ್ ಡಿಕ್ವೆಲ್ಲಾ, ಕುಶಲ್ ಮೆಂಡಿಸ್‌, ಧನುಷ್ಕಾ ಗುಣತಿಲಕ ಅವರ ಅನು‍ಪಸ್ಥಿತಿಯು ತಂಡವನ್ನು ಕಾಡುತ್ತಿದೆ.

ADVERTISEMENT

ದಿನೇಶ್ ಚಾಂಡಿಮಲ್‌ ಮತ್ತು ಕುಶಲ್ ಪೆರೇರ ಸದ್ಯ ತಂಡದಲ್ಲಿರುವ ಅನುಭವಿ ಆಟಗಾರರು. ವನಿಂದು ಹಸರಂಗ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿಯೂ ಮಿಂಚಬಲ್ಲರು.

ನಮೀಬಿಯಾ 2003ರ ಬಳಿಕ ಇದೇ ಮೊದಲ ಬಾರಿ ವಿಶ್ವಕಪ್ ಹಂತದ ಸ್ಪರ್ಧೆಗೆ ಸಜ್ಜಾಗಿದೆ. ಉತ್ತಮ ಸಾಮರ್ಥ್ಯದ ಮೂಲಕ ವಿಶ್ವಕಪ್‌ ಅರ್ಹತಾ ಟೂರ್ನಿಗೆ ಪ್ರವೇಶ ಗಿಟ್ಟಿಸಿರುವ ತಂಡವು ಗೆರಾರ್ಡ್‌ ಎರಾಸ್ಮಸ್‌ ನಾಯಕತ್ವದಲ್ಲಿ ಸೂಪರ್‌ 12 ಹಂತಕ್ಕೆ ಪ್ರವೇಶ ಪಡೆಯುವ ತವಕದಲ್ಲಿದೆ.

ತಂಡಗಳು: ನಮೀಬಿಯಾ: ಗೆರಾರ್ಡ್‌ ಎರಾಸ್ಮಸ್‌ (ನಾಯಕ), ಸ್ಟೀಫನ್‌ ಬಾರ್ಡ್‌, ಕಾರ್ಲ್‌ ಬರ್ಕೆನ್‌ಸ್ಟಾಕ್‌, ಮಿಚಾ ಡು ಪ್ರೀಜ್, ಜಾನ್‌ ಫ್ರಿಲಿಂಚ್‌, ಜೇನ್‌ ಗ್ರೀನ್‌, ನಿಕೋಲ್ ಲೋಫಿ ಈಟನ್‌, ಬೆರಾರ್ಡ್‌ ಸ್ಕಾಲ್ಟಜ್‌, ಬೆನ್ ಶಿಕೊಂಗೊ, ಜೆಜೆ ಸ್ಮಿಟ್‌, ರುಬೆನ್‌ ಟ್ರಂಪಲ್‌ಮನ್‌, ಮೈಕೆಲ್ ವಾನ್‌ ಲಿಂಗೆನ್‌, ಡೇವಿಡ್‌ ವೈಸ್‌, ಕ್ರೇಗ್‌ ವಿಲಿಯಮ್ಸ್, ಪಿಕ್ಕಿ ಯಾ ಫ್ರಾನ್ಸ್.

ಶ್ರೀಲಂಕಾ: ದಸುನ್ ಶನಕ (ನಾಯಕ), ಕುಶಲ್ ಜನಿತ್‌ ಪೆರೇರ, ದಿನೇಶ್ ಚಾಂಡಿಮಲ್‌, ಧನಂಜಯ ಡಿಸಿಲ್ವಾ, ಪಾತುಮ್ ನಿಸಂಕಾ, ಚರಿತ ಅಸಲಂಕ, ಆವಿಷ್ಕಾ ಫರ್ನಾಂಡೊ, ಭಾನುಕಾ ರಾಜಪಕ್ಷ, ಚಾಮಿಕಾ ಕರುಣಾರತ್ನೆ, ವನಿಂದು ಹಸರಂಗ, ದುಷ್ಮಂತ ಚಮೀರ, ಲಾಹಿರು ಕುಮಾರ್, ಮಹೀಶ್‌ ತೀಕ್ಷನ, ಅಖಿಲ ಧನಂಜಯ, ಬಿನುರಾ ಫರ್ನಾಂಡೊ.

ಪಂದ್ಯ ಆರಂಭ: ಸಂಜೆ 7.30 (ಭಾರತೀಯ ಕಾಲಮಾನ)

ಐರ್ಲೆಂಡ್‌ಗೆ ನೆದರ್ಲೆಂಡ್ಸ್ ಎದುರಾಳಿ

ಅಲ್ ಅಮೆರತ್‌, ಒಮನ್‌ (ಪಿಟಿಐ): ಐರ್ಲೆಂಡ್‌ ತಂಡವು ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡಕ್ಕೆ ಮುಖಾಮುಖಿಯಾಗಲಿದೆ. ‘ಎ‘ ಗುಂಪಿನ ಈ ಹಣಾಹಣಿಯ ಮೂಲಕ ಸೂಪರ್ 12 ಹಂತಕ್ಕೆ ಅರ್ಹತೆ ಗಳಿಸುವ ತಮ್ಮ ಪ್ರಯತ್ನಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿವೆ.

ಐರ್ಲೆಂಡ್‌ ಎದುರು ಆಡಿರುವ 12 ಟಿ20 ಪಂದ್ಯಗಳ ಪೈಕಿ ಏಳರಲ್ಲಿ ಜಯ ಸಾಧಿಸಿರುವ ನೆದರ್ಲೆಂಡ್ಸ್ ಸಹಜವಾಗಿಯೇ ಆತ್ಮವಿಶ್ವಾಸದಲ್ಲಿದೆ.

ಐರ್ಲೆಂಡ್‌ ತಂಡಕ್ಕೂ ವಿಶ್ವಕಪ್‌ ಟೂರ್ನಿಯಲ್ಲಿ ಪ್ರಮುಖ ತಂಡಗಳನ್ನು ಮಣಿಸಿದ ಇತಿಹಾಸವಿದೆ. ಪಾಕಿಸ್ತಾನ (2007), ಇಂಗ್ಲೆಂಡ್‌ (2011), ಜಿಂಬಾಬ್ವೆ (2015) ಹಾಗೂ ಬಾಂಗ್ಲಾದೇಶ (2009ರ ಟಿ20 ವಿಶ್ವಕಪ್‌) ತಂಡಗಳು ಐರ್ಲೆಂಡ್‌ ಎದುರು ಆಘಾತ ಅನುಭವಿಸಿದ್ದವು. ಹೀಗಾಗಿ ಉಭಯ ತಂಡಗಳ ಮಧ್ಯೆ ಜಿದ್ದಾಜಿದ್ದಿ ಪೈಪೋಟಿ ನಿರೀಕ್ಷಿಸಬಹುದು.

ಪಂದ್ಯ ಆರಂಭ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.