ADVERTISEMENT

ಬಂಗಾಳ ಕ್ರಿಕೆಟ್‌ ಸಂಸ್ಥೆಗೆ ಮತ್ತೆ ಗಂಗೂಲಿ ಅಧ್ಯಕ್ಷ

ಪಿಟಿಐ
Published 15 ಅಕ್ಟೋಬರ್ 2022, 15:57 IST
Last Updated 15 ಅಕ್ಟೋಬರ್ 2022, 15:57 IST
   

ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ನಿರ್ಗಮಿತ ಅಧ್ಯಕ್ಷ ಸೌರವ್ ಗಂಗೂಲಿ ಅವರು ಮತ್ತೆ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ಧಾರೆ.

ಅವರು 2015 ರಿಂದ 2019ರವರೆಗೆ ಬಂಗಾಳ ಸಂಸ್ಥೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅದಾದ ನಂತರ ಬಿಸಿಸಿಐ ಅಧ್ಯಕ್ಷರಾಗಿದ್ದರು. ಇದೇ 18ರಂದು ನಡೆಯಲಿರುವ ಮಂಡಳಿಯ ಸರ್ವಸದಸ್ಯರ ಸಭೆಯಲ್ಲ ತಮ್ಮ ಅಧಿಕಾರವನ್ನು ರೋಜರ್ ಬಿನ್ನಿ ಅವರಿಗೆ ಹಸ್ತಾಂತರಿಸಲಿದ್ಧಾರೆ.

‘ಬಂಗಾಳ ಸಂಸ್ಥೆಯ ಚುನಾವಣೆಯಲ್ಲಿ ನಾನು ಸ್ಪರ್ಧಿಸಲಿದ್ದೇನೆ. ಅ.22ರಂದು ನಾಮಪತ್ರ ಸಲ್ಲಿಸಲಿದ್ದೇನೆ. ಈ ಮೊದಲು ನಾನು ಬಂಗಾಳಕ್ಕೆ ಐದು ವರ್ಷ ಪದಾಧಿಕಾರಿಯಾಗಿದ್ದೆ. ಲೋಧಾ ನಿಯಮದ ಪ್ರಕಾರ ಇನ್ನೂ ನಾಲ್ಕು ವರ್ಷಗಳವರೆಗೆ ಅಧಿಕಾರ ಪಡೆಯಲು ಅವಕಾಶವಿದೆ’ ಎಂದು ಗಂಗೂಲಿ ಹೇಳಿದ್ದಾರೆ.

ADVERTISEMENT

ಪ್ರಸ್ತುತ ಅಧ್ಯಕ್ಷರಾಗಿರುವ ಅವಿಷೇಕ್ ದಾಲ್ಮಿಯಾ ಅವರ ಸ್ಥಾನಕ್ಕೆ ಗಂಗೂಲಿ ಅವರ ಅಣ್ಣ ಸ್ನೇಹಾಶಿಶ್ ಸ್ಪರ್ಧಿಸುವುದಾಗಿ ಇಲ್ಲಿಯವರೆಗೂ ಹೇಳಲಾಗಿತ್ತು. ಇದೀಗ ಸೌರವ್ ಅಧ್ಯಕ್ಷರಾಗಲು ಚಿತ್ತ ಹರಿಸಿರುವುದರಿಂದ ಲೆಕ್ಕಾಚಾರಗಳು ಬದಲಾಗಲಿವೆ.

‘ಇದೇ 20ರಂದು ಸಭೆ ಸೇರಲಿದ್ದೇವೆ. ಆಗ ಎಲ್ಲ ಸ್ಥಾನಗಳನ್ನು ನಿರ್ಧರಿಸುತ್ತೇವೆ’ ಎಂದೂ ಗಂಗೂಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.