ADVERTISEMENT

ಅರ್ಜುನ ಪ್ರಶಸ್ತಿ: ಸಂದೇಶ್‌, ಬಾಲಾದೇವಿ ಹೆಸರು ಶಿಫಾರಸು

ನಾಮನಿರ್ದೇಶನ ಮಾಡಿದ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌

ಪಿಟಿಐ
Published 12 ಮೇ 2020, 19:30 IST
Last Updated 12 ಮೇ 2020, 19:30 IST
ರಾಷ್ಟ್ರೀಯ ತಂಡದ ರಕ್ಷಣಾ ಆಟಗಾರ ಸಂದೇಶ್‌ ಜಿಂಗಾನ್‌
ರಾಷ್ಟ್ರೀಯ ತಂಡದ ರಕ್ಷಣಾ ಆಟಗಾರ ಸಂದೇಶ್‌ ಜಿಂಗಾನ್‌    

ನವದೆಹಲಿ: ರಾಷ್ಟ್ರೀಯ ತಂಡದ ರಕ್ಷಣಾ ಆಟಗಾರ ಸಂದೇಶ್‌ ಜಿಂಗಾನ್‌ ಮತ್ತು ಮಹಿಳಾ ತಂಡದ ಫಾರ್ವರ್ಡ್‌ ಎನ್‌.ಬಾಲಾದೇವಿ ಅವರ ಹೆಸರನ್ನು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷ್‌, ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.

ಹೆಚ್ಚು ಕಸರತ್ತಿಲ್ಲದೇ ಫೆಡರೇಷನ್‌ ಇಬ್ಬರ ಹೆಸರುಗಳನ್ನು ಪ್ರಶಸ್ಗಿಗೆ ಅಂತಿಮಗೊಳಿಸಿದೆ. ಈ ವರ್ಷದ ಪ್ರಶಸ್ತಿಗಳಿಗೆ ಕ್ರೀಡಾಪಟುಗಳ ಹೆಸರುಗಳನ್ನು ಸಲ್ಲಿಸುವಂತೆ ಕ್ರೀಡಾ ಸಚಿವಾಲಯ ಇತ್ತೀಚೆಗೆ ನಿರ್ದೇಶನ ನೀಡಿತ್ತು.

ಇತ್ತೀಚಿನ ವರ್ಷಗಳಲ್ಲಿ ತೋರಿದ ಗಮನಾರ್ಹ ಸಾಧನೆ ಮತ್ತು ಸ್ಥಿರ ಪ್ರದರ್ಶನಗಳಿಗೆ ಮನ್ನಣೆ ನೀಡಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಸಂದೇಶ್‌ ಮತ್ತು ಬಾಲಾ ದೇವಿ ಅವರ ಹೆಸರುಗಳನ್ನು ನಾಮ ನಿರ್ದೇಶನ ಮಾಡಲಾಗಿದೆ ಎಂದು ಎಐಎಫ್‌ಎಫ್‌ ಪ್ರಧಾನ ಕಾರ್ಯದರ್ಶಿ ಕುಶಲ್‌ ದಾಸ್‌ ತಿಳಿಸಿದ್ದಾರೆ.

ADVERTISEMENT

26 ವರ್ಷದ ಸಂದೇಶ್ ಜಿಂಗಾನ್‌, ಫುಟ್‌ಬಾಲ್‌ ಜೀವನದ ಆರಂಭದ ದಿನಗಳನ್ನು ಸಿಕ್ಕಿಂ ಯುನೈಟೆಡ್‌ ತಂಡದಲ್ಲಿ ಹೆಸರಾಂತ ಆಟಗಾರ ಬೈಚುಂಗ್‌ ಭುಟಿಯಾ ಮತ್ತು‘ಸೆಟ್‌ಪೀಸ್‌ ಸ್ಪೆಷಲಿಸ್ಟ್‌’ ರೆನಡಿ ಸಿಂಗ್‌ ಅವರೊಂದಿಗೆ ಕಳೆದಿದ್ದರು. ಈಗ ಅವರು ಸುನೀಲ್ ಚೆಟ್ರಿ ನಂತರ ಭಾರತದ ಬಹುಬೇಡಿಕೆಯ ಆಟಗಾರ ಎನಿಸಿಕೊಂಡಿದ್ದಾರೆ.

2015ರಲ್ಲಿ ಫಿಫಾ ವಿಶ್ವಕಪ್‌ ಅರ್ಹತಾ ಟೂರ್ನಿಯಲ್ಲಿ ಅವರು ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ನಂತರ ತಂಡದಲ್ಲಿ ಅವರ ಸ್ಥಾನ ಸಿಮೆಂಟ್‌ನಂತೆ ಗಟ್ಟಿಯಾಗಿದೆ. ಕೆಲ ಸಂದರ್ಭಗಳಲ್ಲಿ ಅವರು ತಂಡದ ನಾಯಕತ್ವವನ್ನೂ ವಹಿಸಿದ್ದೂ ಇದೆ. ಐಎಸ್‌ಎಲ್‌ನಲ್ಲಿ ಆಡುವ ಕೇರಳ ಬ್ಲಾಸ್ಟರ್ಸ್‌ ತಂಡದಲ್ಲೂ ಅವರು ರಕ್ಷಣಾ ವಿಭಾಗದಲ್ಲಿ ಹೆಗಲುಕೊಟ್ಟಿದ್ದಾರೆ.

30 ವರ್ಷದ ಮಣಿಪುರದ ಪ್ರತಿಭಾನ್ವಿತೆ ಬಾಲಾ ದೇವಿ, ಈ ವರ್ಷದ ಆರಂಭದಲ್ಲಿ ಸ್ಕಾಟಿಷ್‌ ಮಹಿಳಾ ಪ್ರೀಮಿಯರ್‌ ಲೀಗ್‌ ತಂಡವಾದ ರೇಂಜರ್ಸ್‌ ಎಫ್‌ಸಿ ಪರ 18 ತಿಂಗಳ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಚಾರಿತ್ರಿಕ ಸಾಧನೆಯೊಡನೆ ಗಮನ ಸೆಳೆದಿದ್ದರು. ವಿದೇಶಿ ಲೀಗ್‌ನಲ್ಲಿ ಆಡಿದ ಭಾರತದ ಮೊಟ್ಟಮೊದಲ ಆಟಗಾರ್ತಿ ಎನಿಸಿದ್ದರು.

ಯುರೋಪಿನ ಲೀಗ್‌ನಲ್ಲಿ ಕೆಲ ಪಂದ್ಯಗಳಲ್ಲಿ ಆಡಿದ್ದರು. ಆದರೆ ಕೋವಿಡ್‌–19 ಪಿಡುಗಿನಿಂದಾಗಿ ಲೀಗ್ ಅರ್ಧದಲ್ಲೇ ಸ್ಥಗಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.