ADVERTISEMENT

ಫುಟ್‌ಬಾಲ್: ಏಷ್ಯಾದ ಕಾಲ್ಚಳಕ ಇಂದಿನಿಂದ

ಎಎಫ್‌ಸಿ ಏಷ್ಯಾ ಕಪ್‌ ಫುಟ್‌ಬಾಲ್ ಟೂರ್ನಿ ಇಂದಿನಿಂದ; ಭಾರತದ ಮೊದಲ ಪಂದ್ಯ ನಾಳೆ

ಪಿಟಿಐ
Published 4 ಜನವರಿ 2019, 17:54 IST
Last Updated 4 ಜನವರಿ 2019, 17:54 IST
ಆಸ್ಟ್ರೇಲಿಯಾ ತಂಡದ ಆಟಗಾರರು ಶುಕ್ರವಾರ ಅಭ್ಯಾಸ ಮಾಡಿದರು –ಎಎಫ್‌ಪಿ ಚಿತ್ರ
ಆಸ್ಟ್ರೇಲಿಯಾ ತಂಡದ ಆಟಗಾರರು ಶುಕ್ರವಾರ ಅಭ್ಯಾಸ ಮಾಡಿದರು –ಎಎಫ್‌ಪಿ ಚಿತ್ರ   

ಅಬುದಾಬಿ: ಏಷ್ಯಾದ ಫುಟ್‌ಬಾಲ್‌ ಶಕ್ತಿಯನ್ನು ಜಗತ್ತಿಗೆ ಪರಿಚಯಿಸುವ ಏಷ್ಯಾಕಪ್ ಟೂರ್ನಿಗೆ ಶನಿವಾರ ಇಲ್ಲಿ ಚಾಲನೆ ಸಿಗಲಿದೆ. ಈ ವರೆಗೆ ನಡೆದ ಏಷ್ಯಾಕಪ್‌ಗಳಲ್ಲೇ ಅತಿದೊಡ್ಡದು ಎಂದು ಹೇಳಲಾಗುವ ಈ ಬಾರಿಯ ಟೂರ್ನಿಯಲ್ಲಿ 24 ತಂಡಗಳು ಪಾಲ್ಗೊಳ್ಳುತ್ತಿದ್ದು ಎಂಟು ವರ್ಷಗಳ ನಂತರ ಅರ್ಹತೆ ಗಳಿಸಿರುವ ಭಾರತ ತಂಡ ಚೊಚ್ಚಲ ಪ್ರಶಸ್ತಿಯ ಕನಸಿನೊಂದಿಗೆ ಭಾನುವಾರ ಕಣಕ್ಕೆ ಇಳಿಯಲಿದೆ.

ಮೊದಲ ಪಂದ್ಯ ಶನಿವಾರ ರಾತ್ರಿ ನಡೆಯಲಿದ್ದು ‘ಎ’ ಗುಂಪಿನ ಈ ಪಂದ್ಯದಲ್ಲಿ ಆತಿಥೇಯ ಯುಎಇ ತಂಡ ಬಹರೇನ್ ಎದುರು ಸೆಣಸಲಿದೆ. ಪಂದ್ಯ ಅಬುಧಾಬಿಯ ಜೈಯದ್‌ ಸ್ಪೋರ್ಟ್ಸ್‌ ಸಿಟಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಎಂಟು ವರ್ಷಗಳ ಹಿಂದೆ ಕೊನೆಯದಾಗಿ ಸ್ಪರ್ಧಿಸಿದ್ದ ಭಾರತ ಗುಂಪು ಹಂತದಲ್ಲಿ ನೀರಸ ಆಟ ಆಡಿ ಹೊರಗೆ ಬಿದ್ದಿತ್ತು. ಈ ಬಾರಿ ಸುನಿಲ್ ಚೆಟ್ರಿ ಬಳಗ ಬಲಿಷ್ಠವಾಗಿದ್ದು ಅರ್ಹತಾ ಸುತ್ತಿನಲ್ಲಿ ಸತತ 13 ಪಂದ್ಯಗಳನ್ನು ಗೆದ್ದು ತಾಕತ್ತು ಪ್ರದರ್ಶಿಸಿದೆ. ಆದ್ದರಿಂದ ಕೋಚ್‌ ಸ್ಟೀಫನ್ ಕಾನ್‌ಸ್ಟಂಟೇನ್ ಭರವಸೆಯಲ್ಲಿದ್ದಾರೆ.

ADVERTISEMENT

‘ಇದು ಪ್ರಬಲ ಸ್ಪರ್ಧೆ ಇರುವ ಟೂರ್ನಿ ಎಂದು ನನಗೆ ಗೊತ್ತಿದೆ. ಆದರೆ ತಂಡದ ಆಟಗಾರರು ಯಾವುದೇ ಸವಾಲನ್ನು ಮೆಟ್ಟಿನಿಲ್ಲಲು ಸಮರ್ಥರಾಗಿದ್ದು ಉತ್ತಮ ಸಾಮರ್ಥ್ಯವನ್ನು ನಿರೀಕ್ಷಿಸಲಾಗಿದೆ’ ಎಂದು ಸ್ಟೀಫನ್ ಹೇಳಿದರು.

ದಕ್ಷಿಣ ಕೊರಿಯಾ, ಜಪಾನ್‌, ಇರಾಕ್‌, ಚೀನಾ, ಒಮನ್‌ ಮುಂತಾದ ತಂಡಗಳು ಕೂಡ ನಿರೀಕ್ಷೆಯಿಂದ ಕಣಕ್ಕೆ ಇಳಿಯಲಿವೆ.

ಭಾರತ ತಂಡಕ್ಕೆ ಶುಭಾಶಯ: ಭಾರತ ತಂಡದ ಮೊದಲ ಪಂದ್ಯಕ್ಕೆ ಜರ್ಮನ್‌ನ ಬಂಡೆಸ್‌ಲೀಗಾದ ಪ್ರಮುಖ ಆಟಗಾರರಾದ ಮಾರಿಯೊ ಗೊಯೆಟ್ಸ್‌, ವೆರ್ಡರ್‌ ಬ್ರೆಮನ್‌, ಕ್ಲಾಡಿಯೊ ಪಿಜಾರೊ ಮತ್ತು ಲಾಥರ್‌ ಮಥಾವುಸ್ ಶುಭ ಕೋರಿದ್ದಾರೆ.

***

ಇಂದಿನ ಪಂದ್ಯಗಳು

ಯುಎಇ–ಬಹರೇನ್‌

ಸ್ಥಳ: ಅಬುಧಾಬಿ

ಆರಂಭ: ರಾತ್ರಿ 8.00

ಟೂರ್ನಿ ನಡೆಯುವ ಅವಧಿ ಜನವರಿ 5–ಫೆಬ್ರುವರಿ 1

ತಂಡಗಳು 24

ಅಂಗಣಗಳು 8 (4 ನಗರಗಳು)

ಲಾಂಛನ: ಬಣ್ಣದ ರಿಬ್ಬನ್‌ಗಳಿಂದ ತಯಾರಿಸಿದ ಗೋಳಾಕೃತಿ

ಮ್ಯಾಸ್ಕಟ್‌: ಮನ್ಸೌರ್‌ ಮತ್ತು ಜರ‍್ಹಾ

ಘೋಷವಾಕ್ಯ: ಏಷ್ಯಾದ ಒಗ್ಗಟ್ಟು

ಪಂದ್ಯಗಳಿಗೆ ಬಳಸುವ ಚೆಂಡು: ಮಾಲ್ಟೆನ್ ಅಸೆಂಟೆಕ್‌

ಟ್ರೋಫಿ ತಯಾರಕ: ಥಾಮಸ್ ಲೈಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.