ADVERTISEMENT

ನಟಿ ಅಶ್ವಿತಿ ಶೆಟ್ಟಿ ಫಿಟ್‌ನೆಸ್‌ ಗುಟ್ಟು

ನಾಗರತ್ನ ಜಿ.
Published 22 ಸೆಪ್ಟೆಂಬರ್ 2019, 19:31 IST
Last Updated 22 ಸೆಪ್ಟೆಂಬರ್ 2019, 19:31 IST
ಅಶ್ವಿತಿ ಶೆಟ್ಟಿ
ಅಶ್ವಿತಿ ಶೆಟ್ಟಿ   

ದೇಹ ದಂಡನೆ ಎಂಬುದು ಪುರುಷರಿಗಷ್ಟೇ ಸೀಮಿತವಲ್ಲ. ಮಹಿಳೆ ಕೂಡ ತನ್ನ ದೇಹವನ್ನು ಸಮತೋಲನವಾಗಿಟ್ಟುಕೊಳ್ಳಲು ಪುರುಷರಿಗೆ ಸರಿಸಮನಾಗಿ ಶ್ರಮಿಸುತ್ತಿದ್ದಾಳೆ ಎಂದು ಹೇಳುವ ಅಶ್ವಿತಿ ಶೆಟ್ಟಿ, ‘ರಾಮಚಾರಿ’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟು ‘ಅನಂತು ವರ್ಸಸ್‌ ನುಸ್ರತ್‌’ ಮತ್ತು ‘ಸುಳಿ’ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಚಂದನ್‌ ಶೆಟ್ಟಿಯ ‘ಶೋಕಿವಾಲ’ ಗೀತೆಗೂ ಹೆಜ್ಜೆ ಹಾಕಿದ್ದಾರೆ. ಇವರು ಫಿಟ್‌ನೆಸ್‌ ಸಲಹೆಗಾರ್ತಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ತಮ್ಮ ಫಿಟ್‌ನೆಸ್‌ ಗುಟ್ಟನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.

ಫಿಟ್‌ನೆಸ್‌ ಬಗ್ಗೆ ಒಲವು ಮೂಡಿದ್ದು ಯಾವಾಗ?

ನನ್ನ ಫಿಟ್‌ನೆಸ್ ಹವ್ಯಾಸ ಆರಂಭವಾಗಿದ್ದು ಎರಡು ವರ್ಷಗಳ ಹಿಂದೆ. ನಾನು ತುಂಬಾ ಸಣ್ಣಗಿದ್ದೇನೆ ಎಂದು ಯಾರಾದರೂ ಹೇಳಿದಾಗ ಮುಜುಗರ ಉಂಟಾಗುತ್ತಿತ್ತು. ಚೆನ್ನಾಗಿ ಊಟ ಮಾಡಿದರೂ ದಪ್ಪವಾಗುತ್ತಿಲ್ಲ ಎಂಬ ಬೇಸರವಿತ್ತು. ಅಲ್ಲಿಂದ ನಾನು ವರ್ಕ್‌ಔಟ್‌ ಮಾಡಲು ಆರಂಭಿಸಿದೆ.

ADVERTISEMENT

ವರ್ಕ್ಔಟ್‌ಗೆ ಸಮಯವನ್ನು ಹೇಗೆ ಮೀಸಲಿಡುತ್ತೀರಿ?

ಸಂಜೆಯ ಸಮಯದಲ್ಲಿ ವರ್ಕ್‌ಔಟ್‌ ಮಾಡುತ್ತೇನೆ. ವರ್ಕ್‌ಔಟ್‌ ಮಾಡುವುದು ನನಗಿಷ್ಟ. ಏನೇ ಕೆಲಸವಿದ್ದರೂ ಬಿಡುವು ಮಾಡಿಕೊಂಡು ವರ್ಕ್‌ಔಟ್‌ ಮಾಡುತ್ತೇನೆ. ಒಂದು ಗಂಟೆಯಾದರೂ ವರ್ಕ್‌ಔಟ್‌ಗೆ ಮೀಸಲಿಟ್ಟಿರುತ್ತೇನೆ.

ನಿಮ್ಮ ಪ್ರಕಾರ ಫಿಟ್‌ನೆಸ್‌ ಎಂದರೆ?

ಯೋಗ ಮಾಡುವುದು, ಧ್ಯಾನ ಮಾಡುವುದು ದೇಹದ ಆರೋಗ್ಯ ಮತ್ತು ಮನಸ್ಸಿನ ಆರೋಗ್ಯಕ್ಕೆ ಒಳ್ಳೆಯ ಮದ್ದು. ದೇಹದ ಸಮತೋಲನ ಕಾಪಾಡಿಕೊಳ್ಳಲು ಫಿಟ್‌ನೆಸ್‌ ಬಹಳ ಮುಖ್ಯ ಎಂಬುದು ನನ್ನ ನಿಲುವು. ಆದ್ದರಿಂದ ನಾನು ಪ್ರತಿನಿತ್ಯ ತಪ್ಪದೇ ವರ್ಕ್‌ಔಟ್‌ ಮಾಡುತ್ತೇನೆ.

ಫಿಟ್‌ನೆಸ್‌ ಎಂದರೆ ನನ್ನ ಪ್ರಕಾರ ದಿನನಿತ್ಯದ ಒಂದು ಹವ್ಯಾಸ. ವರ್ಕ್‌ಔಟ್‌ ಮಾಡುವುದರಿಂದ ನಾವು ಕಳೆದುಕೊಳ್ಳುವುದು ಏನೂ ಇಲ್ಲ. ಇದರಿಂದ ತುಂಬಾ ಅನುಕೂಲವಿದೆ. ದಿನಪೂರ್ತಿ ಉತ್ಸಾಹದಿಂದ ಇರುತ್ತೇವೆ. ದೇಹವೂ ಆರೋಗ್ಯದಿಂದ ಇರುತ್ತದೆ. ದೇಹಕ್ಕೆ ಕೆಲಸ ಕೊಟ್ಟರೆ ಸ್ನಾಯುಗಳಿಗೂ ಶಕ್ತಿ ಬರುತ್ತದೆ. ಕೋಪ ಕಡಿಮೆಯಾಗುತ್ತದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ನಮ್ಮನ್ನು ಉತ್ಸಾಹವಾಗಿಡಲು ಫಿಟ್‌ನೆಸ್‌ ಒಂದು ಮಾರ್ಗ.

ವ್ಯಾಯಾಮದ ಜೊತೆಗೆ ಆಹಾರಾಭ್ಯಾಸ ಅಗತ್ಯವಿದೆಯೇ?

ಫಿಟ್‌ನೆಸ್‌ ಎಂಬುದು ಪ್ರತಿಯೊಬ್ಬರ ಭಾವದಲ್ಲಿ ಒಂದೊಂದು ಆಸಕ್ತಿಯನ್ನು ಮೂಡಿಸುತ್ತದೆ. ಕೆಲವರು ಸಣ್ಣವಾಗಬೇಕು ಎಂದು ವರ್ಕ್‌ಔಟ್‌ ಮಾಡಿದರೆ, ಕೆಲವರು ಆರೋಗ್ಯದಿಂದಿರಲು ಮಾಡುತ್ತಾರೆ. ನನ್ನ ದೇಹ ಆರೋಗ್ಯವಾಗಿರಿಸಲು ಹಾಗೂ ಮಾನಸಿಕ ನೆಮ್ಮದಿಗಾಗಿ ವರ್ಕ್‌ಔಟ್‌ ಮಾಡುತ್ತೇನೆ. ಹೀಗಾಗಿ ಇಂಥಹದ್ದೇ ರೀತಿಯ ಆಹಾರ ಸೇವನೆ ಮಾಡಬೇಕು ಎಂಬುದನ್ನು ನಾನು ರೂಢಿಸಿಕೊಂಡಿಲ್ಲ. ನನಗೆ ಮಾಂಸಾಹಾರ ಎಂದರೆ ಇಷ್ಟ. ಆಹಾರವನ್ನು ಇಷ್ಟಪಟ್ಟು ತಿನ್ನುತ್ತೇನೆ. ಅದೇ ರೀತಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆಹಾರವನ್ನು ಸೇವಿಸುವುದಿಲ್ಲ.

ವರ್ಕ್‌ಔಟ್‌ ಫಲಿತಾಂಶ?

ನಾನು ಮೊದಲನೇ ದಿನ ಜಿಮ್‌ಗೆ ಹೋದಾಗ ಅಲ್ಲಿನ ವಾತಾವರಣ ಕಸಿವಿಸಿ ಉಂಟುಮಾಡಿತು. ನನ್ನಿಂದ ಸಾಧ್ಯವೇ ಎಂಬ ಪ್ರಶ್ನೆ ಮೂಡಿತು. ಇದನ್ನೇ ಸವಾಲಾಗಿ ತೆಗೆದುಕೊಂಡೆ. ಮನಸಿದ್ದಲ್ಲಿ ಮಾರ್ಗ ಎಂಬ ಮಾತಿದೆ. ನನ್ನ ಶ್ರಮದಿಂದ ಸುಮಾರು 15 ಕೆ.ಜಿ ತೂಕ ಇಳಿಸಿಕೊಂಡೆ. ಶ್ರಮವಹಿಸಿ ದೇಹ ದಂಡಿಸಿದೆ. ನಾನು ನೃತ್ಯ ಮಾಡುವಾಗ ಅಥವಾ ಸಿನಿಮಾದಲ್ಲಿ ನಟಿಸುವಾಗ ಒಳ್ಳೆಯ ಪ್ರತಿಕ್ರಿಯೆಗಳು ಬಂದಿವೆ. ವರ್ಕ್‌ಔಟ್‌ ಮಾಡುವುದರಿಂದ ಉತ್ತಮ ಹಾಗೂ ಆರೋಗ್ಯಕರ ಫಲಿತಾಂಶ ಸಿಗುತ್ತದೆ. ಅಲ್ಲದೆಸಾಮಾಜಿಕ ಜಾಲತಾಣದಲ್ಲಿ ಫಿಟ್‌ನೆಸ್‌ ಬಗ್ಗೆ ಉಪಯುಕ್ತ ಸಲಹೆಗಳನ್ನೂ ನೀಡುತ್ತಿದ್ದೇನೆ.

ನೆಚ್ಚಿನ ವರ್ಕ್‌ಔಟ್‌ ಯಾವುದು?

ಸಾಮಾನ್ಯವಾಗಿ ನಾನು ಕಾರ್ಡಿಯೊ ಮಾಡುವುದಿಲ್ಲ. ಆದರೆ, ವೇಟ್‌ಲಿಫ್ಟಿಂಗ್‌ ನನ್ನ ನೆಚ್ಚಿನ ವರ್ಕ್‌ಔಟ್‌. ಭಾರ ಎತ್ತುವುದು ಪುರುಷರಿಗೆ ಮಾತ್ರ ಸೀಮಿತ ಎನ್ನುವುದು ಸುಳ್ಳು. ಒಬ್ಬ ಮಹಿಳೆಯೂ ತನ್ನ ದೇಹ ದಂಡನೆಯಲ್ಲಿ ಯಾವೆಲ್ಲ ತರಬೇತಿ ಪಡೆಯುತ್ತಾಳೆ ಎಂಬುದು ಮುಖ್ಯ. ನಾನು ಹೆಚ್ಚಾಗಿ ಭಾರ ಎತ್ತುವ ತರಬೇತಿ ಪಡೆಯುತ್ತೇನೆ. ಇದರಿಂದ ನನ್ನ ಸ್ನಾಯುಗಳು ಮತ್ತು ತೋಳ್ಬಲ ಹೆಚ್ಚಿದೆ. ಹುಡುಗಿಯಾಗಿ ಇಷ್ಟು ಭಾರ ಎತ್ತುತ್ತೇನೆ ಎಂಬುದು ಸಂತಸದ ವಿಷಯ. ಭಾರ ಎತ್ತಲು ಸಾಧ್ಯವೇ ಎಂದು ಮೊದಮೊದಲು ನನಗೂ ಭಯವಿತ್ತು, ಹಂತಹಂತವಾಗಿ ನಾನು ತರಬೇತಿ ಪಡೆದೆ. ಈಗ ಸುಮಾರು 60 ರಿಂದ 70 ಕೆ.ಜಿ ತೂಕವನ್ನು ಎತ್ತುವ ಸಾಮರ್ಥ್ಯ ನನ್ನಲ್ಲಿ ಬೆಳೆದಿದೆ. ಮಹಿಳೆಯೂ ಸಹ ಈ ತರಹದ ವರ್ಕ್‌ಔಟ್‌ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ.

ಸುಲಭ ಫಿಟ್‌ನೆಸ್‌ ಸೂತ್ರ?

ಮನೆಯಲ್ಲಿಯೇ ಸುಲಭವಾಗಿ ವರ್ಕ್‌ಔಟ್‌ ಮಾಡುವಂತ ಅವಕಾಶಗಳಿವೆ, ಜಿಮ್‌ಗೆ ಹೋಗಲೇಬೇಕೆಂದಿಲ್ಲ. ಡಂಬೆಲ್ಸ್‌ನಿಂದ ವರ್ಕ್‌ಔಟ್‌ ಮಾಡಬಹುದು. ಇದರಲ್ಲಿಯೂ ವಿವಿಧ ಭಂಗಿಗಳಿವೆ. ಸೂಕ್ತವಾದ ವಿಧಾನವನ್ನು ಬಳಸಿ ವರ್ಕ್‌ಔಟ್‌ ಮಾಡಬೇಕು. ಪ್ರತಿದಿನ 30 ನಿಮಿಷ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಇದಲ್ಲದೆ ನಿತ್ಯ ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಹೆಚ್ಚಾಗಿ ನೀರು ಕುಡಿಯಬೇಕು. ರನ್ನಿಂಗ್‌ ಮಾಡುವುದು ಉತ್ತಮ. ಮನೆಯಲ್ಲಿ ಸಿಗುವ ಉಪಕರಣಗಳಲ್ಲಿಯೇ ನಾವು ಬಹಳಷ್ಟು ವರ್ಕ್‌ಔಟ್‌ ಮಾಡಬಹುದು. ಜಿಮ್‌ಗೆ ಹೋಗಿ ವರ್ಕ್‌ಔಟ್‌ ಮಾಡುವವರು ಮೊಬೈಲ್‌ ಬಳಕೆ ಮಾಡಬಾರದು. ಇತರರೊಂದಿಗೆ ಮಾತನಾಡಬಾರದು. ಮೊಬೈಲ್‌ ಬಳಕೆಯಿಂದ ನಮ್ಮ ಆಸಕ್ತಿ ಕುಗ್ಗುವ ಸಾಧ್ಯತೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.