ADVERTISEMENT

ಚಾರಿತ್ರಿಕ ಸಾಧನೆಯತ್ತ ಸೈನಾ, ಸಿಂಧು ಚಿತ್ತ

ಇಂದಿನಿಂದ ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್

ಪಿಟಿಐ
Published 22 ಏಪ್ರಿಲ್ 2019, 20:35 IST
Last Updated 22 ಏಪ್ರಿಲ್ 2019, 20:35 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ನವದೆಹಲಿ: ಸೈನಾ ನೆಹ್ವಾಲ್‌ ಮತ್ತು ಪಿ.ವಿ.ಸಿಂಧು ಅವರು ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿ ಚಾರಿತ್ರಿಕ ಸಾಧನೆ ಮಾಡುವತ್ತ ಚಿತ್ತ ನೆಟ್ಟಿದ್ದಾರೆ.

ಚೀನಾದ ವುಹಾನ್‌ನಲ್ಲಿ ಮಂಗಳವಾರದಿಂದ ಪಂದ್ಯಗಳು ನಡೆಯಲಿವೆ. 1965ರಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ದಿನೇಶ್‌ ಖನ್ನಾ ಚಿನ್ನದ ಪದಕ ಜಯಿಸಿ‌ದ್ದರು. ನಂತರ ಭಾರತದ ಯಾರೊಬ್ಬರೂ ಪದಕ ಗೆದ್ದಿಲ್ಲ. 54 ವರ್ಷಗಳಿಂದ ಕಾಡುತ್ತಿರುವ ಈ ಕೊರಗನ್ನು ಸೈನಾ ಮತ್ತು ಸಿಂಧು ದೂರ ಮಾಡುವ ನಿರೀಕ್ಷೆ ಗರಿಗೆದರಿದೆ.

ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಸಿಂಧು, ಜಪಾನ್‌ನ ಸಯಾಕ ಟಕಹಾಶಿ ವಿರುದ್ಧ ಸೆಣಸಲಿದ್ದಾರೆ. ಸೈನಾ, ಮೊದಲ ಸುತ್ತಿನಲ್ಲಿ ಹಾನ್‌ ಯೂ ವಿರುದ್ಧ ಆಡಲಿದ್ದಾರೆ.

ADVERTISEMENT

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿರುವ ಕಿದಂಬಿ ಶ್ರೀಕಾಂತ್‌, ಇಂಡೊನೇಷ್ಯಾದ ಶೇಸರ್‌ ಹಿರೇನ್‌ ರುಸ್ತಾವಿಟೊ ಎದುರು ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ. ಸಮೀರ್‌ ವರ್ಮಾಗೆ ಜಪಾನ್‌ನ ಕಜುಮಸಾ ಸಕಾಯ್‌ ಸವಾಲು ಎದುರಾಗಲಿದೆ.

ಮಹಿಳಾ ಡಬಲ್ಸ್‌ನಲ್ಲಿ ಪೂಜಾ ದಂಡು–ಸಂಜನಾ ಸಂತೋಷ್‌, ಅಪರ್ಣ ಬಾಲನ್‌–ಕೆ.ಪಿ.ಶ್ರುತಿ ಹಾಗೂ ಜಕ್ಕಂಪುಡಿ ಮೇಘನಾ–ಪೂರ್ವಿಶಾ ಎಸ್‌.ರಾಮ್ ಅವರು ಅಂಗಳಕ್ಕಿಳಿಯಲಿದ್ದಾರೆ.

ಬಿಎಐ ವಿರುದ್ಧ ಪ್ರಣಯ್‌–ಪ್ರಣೀತ್‌ ಕಿಡಿ: ಭಾರತ ಬ್ಯಾಡ್ಮಿಂಟನ್‌ ಫೆಡರೇಷನ್‌ನ (ಬಿಎಐ) ಕಾರ್ಯವೈಖರಿ ಬಗ್ಗೆ ಎಚ್‌.ಎಸ್‌.ಪ್ರಣಯ್‌ ಮತ್ತು ಬಿ.ಸಾಯಿ ಪ್ರಣೀತ್‌ ಕಿಡಿ ಕಾರಿದ್ದಾರೆ.

ಬಿಎಐ, ಪ್ರಣಯ್‌ ಮತ್ತು ಪ್ರಣೀತ್ ಹೆಸರನ್ನು ಏಷ್ಯಾ ಚಾಂಪಿಯನ್‌ಷಿಪ್‌ಗೆ ಕಳುಹಿಸಿರಲಿಲ್ಲ.

‘ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಸ್ಪರ್ಧಿಗಳ ಪಟ್ಟಿ ಕಳುಹಿಸುವಂತೆ ಬ್ಯಾಡ್ಮಿಂಟನ್‌ ಏಷ್ಯಾ, ಎಲ್ಲಾ ಸಂಸ್ಥೆಗಳಿಗೂ ನಿರ್ದೇಶನ ನೀಡಿತ್ತು. ಪ್ರಣೀತ್‌ ಮತ್ತು ನನ್ನ ಭಾಗವಹಿಸುವಿಕೆಯನ್ನು ಬಿಎಐ ಖಚಿತಪಡಿಸಿಲ್ಲ. ಹೀಗಾಗಿಯೇ ನಮಗೆ ಅವಕಾಶ ಕೈತಪ್ಪಿದೆ’ ಎಂದು ಪ್ರಣಯ್‌ ದೂರಿದ್ದಾರೆ.

‘ಪುರುಷರ ಮತ್ತು ಮಹಿಳಾ ಸಿಂಗಲ್ಸ್‌ ವಿಭಾಗಗಳಲ್ಲಿ ಪಾಲ್ಗೊಳ್ಳುವ ತಲಾ ಇಬ್ಬರು ಸ್ಪರ್ಧಿಗಳ ಹೆಸರು ಕಳುಹಿಸುವಂತೆ ಬ್ಯಾಡ್ಮಿಂಟನ್‌ ಏಷ್ಯಾ, ಇ–ಮೇಲ್‌ ಕಳುಹಿಸಿತ್ತು. ರ‍್ಯಾಂಕಿಂಗ್‌ ಆಧಾರದಲ್ಲಿ ಸ್ಪರ್ಧಿಗಳ ಹೆಸರು ಅಂತಿಮಗೊಳಿಸಿ ಪಟ್ಟಿಯನ್ನು ರವಾನಿಸಿದ್ದೇವೆ’ ಎಂದು ಬಿಎಐ, ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.