ADVERTISEMENT

ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ಹರಪ್ರೀತ್‌ಗೆ ಬೆಳ್ಳಿ, ಜ್ಞಾನೇಂದರ್‌ಗೆ ಕಂಚು

ಭಾರತಕ್ಕೆ ಒಟ್ಟು 16 ಪದಕ

ಪಿಟಿಐ
Published 28 ಏಪ್ರಿಲ್ 2019, 17:25 IST
Last Updated 28 ಏಪ್ರಿಲ್ 2019, 17:25 IST
ಭಾರತದ ಹರಪ್ರೀತ್‌ ಸಿಂಗ್‌ (ಎಡ) ಮತ್ತು ಸಯೀದ್‌ ಮೊರಾದ್‌ ಅವರ ಪೈಪೋಟಿಯ ಕ್ಷಣ –ಎಎಫ್‌ಪಿ ಚಿತ್ರ
ಭಾರತದ ಹರಪ್ರೀತ್‌ ಸಿಂಗ್‌ (ಎಡ) ಮತ್ತು ಸಯೀದ್‌ ಮೊರಾದ್‌ ಅವರ ಪೈಪೋಟಿಯ ಕ್ಷಣ –ಎಎಫ್‌ಪಿ ಚಿತ್ರ   

ಕ್ಸಿಯಾನ್‌, ಚೀನಾ: ಭಾರತದ ಹರಪ್ರೀತ್‌ ಸಿಂಗ್‌ ಮತ್ತು ಜ್ಞಾನೇಂದರ್‌ ಅವರು ಭಾನುವಾರ ಮುಕ್ತಾಯವಾದ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಚಾಂಪಿಯನ್‌ಷಿಪ್‌ನಲ್ಲಿ ಭಾರತವು ಒಟ್ಟು 16 ಪದಕಗಳನ್ನು ಬಗಲಿಗೆ ಹಾಕಿಕೊಂಡಿದೆ.

ಪುರುಷರ ಗ್ರೀಕೊ ರೋಮನ್‌ ವಿಭಾಗದ 82 ಕೆ.ಜಿ. ಸ್ಪರ್ಧೆಯ ಫೈನಲ್‌ನಲ್ಲಿ ಹರಪ್ರೀತ್‌ 0–8 ಪಾಯಿಂಟ್ಸ್‌ನಿಂದ ಇರಾನ್‌ನ ಸಯೀದ್‌ ಮೊರಾದ್‌ ಅಬ್ದವಲಿ ಎದುರು ಸೋತರು.

ADVERTISEMENT

ಕ್ವಾರ್ಟರ್‌ ಫೈನಲ್‌ನಲ್ಲಿ 5–1ರಿಂದ ಕಿರ್ಗಿಸ್ತಾನದ ಬರ್ಗೊ ಬೀಸಲಿಯೆವ್‌ ಎದುರು ಗೆದ್ದಿದ್ದ ಹರಪ್ರೀತ್‌, ಸೆಮಿಫೈನಲ್‌ನಲ್ಲಿ 10–1 ಪಾಯಿಂಟ್ಸ್‌ನಿಂದ ಚೀನಾದ ಹೈತಾವೊ ಕ್ವಿಯಾನ್‌ ಅವರನ್ನು ಮಣಿಸಿದ್ದರು.

60 ಕೆ.ಜಿ. ವಿಭಾಗದಲ್ಲಿ ಕಣದಲ್ಲಿದ್ದ ಜ್ಞಾನೇಂದರ್‌, ಕಂಚಿನ ಪದಕದ ಪ್ಲೇ ಆಫ್‌ನಲ್ಲಿ ತೈಪೆಯ ಜುಯಿ ಚಿ ಹುವಾಂಗ್‌ ಅವರನ್ನು ಪರಾಭವಗೊಳಿಸಿದರು.

ಕ್ವಾರ್ಟರ್‌ ಫೈನಲ್‌ನಲ್ಲಿ 9–1 ಪಾಯಿಂಟ್ಸ್‌ನಿಂದ ಜೋರ್ಡನ್‌ನ ಅಲಿ ಅಬೆದ್‌ ಅಲನಸರ್‌ ಅವರನ್ನು ಮಣಿಸಿದ್ದ ಜ್ಞಾನೇಂದರ್‌, ನಾಲ್ಕರ ಘಟ್ಟದ ಪೈಪೋಟಿಯಲ್ಲಿ 0–9ರಿಂದ ಉಜ್‌ಬೆಕಿಸ್ತಾನದ ಇಸ್ಲಾಮ್‌ಜೊನ್‌ ಬಾಖ್ರಮೋವ್‌ ಎದುರು ಸೋತಿದ್ದರು.

72 ಕೆ.ಜಿ. ವಿಭಾಗದ ಕಂಚಿನ ಪದಕದ ಪ್ಲೇ ಆಫ್‌ನಲ್ಲಿ ಯೋಗೇಶ್‌ ಅವರು ಕಿರ್ಗಿಸ್ತಾನದ ರುಸ್ಲಾನ್‌ ಸರೆವ್‌ ಎದುರು ಮಣಿದರು.

ರವಿಂದರ್‌ (67 ಕೆ.ಜಿ) ಮತ್ತು ಹರದೀಪ್‌ (97 ಕೆ.ಜಿ) ಅವರೂ ನಿರಾಸೆ ಕಂಡರು. ಹರದೀಪ್‌ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಸೋತರೆ, ರವಿಂದರ್‌ ಅವರು ಅರ್ಹತಾ ಸುತ್ತಿನಲ್ಲೇ ಮುಗ್ಗಿರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.