ADVERTISEMENT

ಮೊದಲ ಓಟದ ಪುಳಕ

ಪ್ರಮೋದ ಜಿ.ಕೆ
Published 21 ಅಕ್ಟೋಬರ್ 2018, 19:45 IST
Last Updated 21 ಅಕ್ಟೋಬರ್ 2018, 19:45 IST
800 ಮೀಟರ್‌ ಓಟದಲ್ಲಿ ಕೂಟ ದಾಖಲೆ ನಿರ್ಮಿಸಿದ ಜ್ಯೋತಿ ಕಟ್ಟಿಮನಿ ಪ್ರಜಾವಾಣಿ ಚಿತ್ರ/ಬಿ.ಎಂ. ಕೇದಾನರಾಥ
800 ಮೀಟರ್‌ ಓಟದಲ್ಲಿ ಕೂಟ ದಾಖಲೆ ನಿರ್ಮಿಸಿದ ಜ್ಯೋತಿ ಕಟ್ಟಿಮನಿ ಪ್ರಜಾವಾಣಿ ಚಿತ್ರ/ಬಿ.ಎಂ. ಕೇದಾನರಾಥ   

ಧಾರವಾಡ, ವಿಜಯಪುರ, ಹಾವೇರಿ, ಗದಗ, ಬೆಳಗಾವಿ, ಬಳ್ಳಾರಿ, ಉತ್ತರ ಕನ್ನಡ, ಕಲಬುರ್ಗಿ ಜಿಲ್ಲೆಗಳಿಂದ ಬಂದಿದ್ದ ಮಹಿಳಾ ಅಥ್ಲೀಟ್‌ಗಳು ಹೋದ ವಾರ ಎರಡು ದಿನ ಭರ್ಜರಿ ಖುಷಿಯ ಲ್ಲಿದ್ದರು. ಅವರಲ್ಲಿ ಮೊದಲ ಬಾರಿಗೆ ಸಿಂಥೆಟಿಕ್‌ ಟ್ರ್ಯಾಕ್‌ ಮೇಲೆ ಓಡಿದ ಪುಳಕ. ಸಿಂಥೆಟಿಕ್‌ನಲ್ಲಿ ವೇಗದ ಓಟ ಅವರ ಸಂಭ್ರಮ ಇಮ್ಮಡಿಸಿತ್ತು.

ಧಾರವಾಡದ ಆರ್‌.ಎನ್‌. ಶೆಟ್ಟಿ ಕ್ರೀಡಾಂಗ ಣದಲ್ಲಿ ನಡೆದ ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಡು ಬಂದ ಚಿತ್ರಣವಿದು. ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 148 ಕಾಲೇಜುಗಳು ಬರುತ್ತವೆ. ಆದರೆ, ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು 27 ಕಾಲೇಜುಗಳಷ್ಟೇ.

ಮಹಿಳಾ ವಿಶ್ವವಿದ್ಯಾಲಯದ ಕ್ರೀಡಾಕೂಟಗಳಲ್ಲಿ ಪ್ರತಿ ವರ್ಷವೂ ಇದೇ ಪರಿಸ್ಥಿತಿ. ಇದಕ್ಕೆ ಕಾರಣವೇನು ಎಂದು ಅಥ್ಲೀಟ್‌ಗಳನ್ನು ಪ್ರಶ್ನಿಸಿದರೆ ‘ಸೆಮಿಸ್ಟರ್‌ ಪದ್ಧತಿ ಇರುವ ಕಾರಣ ಕ್ರೀಡೆಯತ್ತ ಹೆಚ್ಚು ಗಮನ ಹರಿಸಲು ಆಗುವುದಿಲ್ಲ. ಅಷ್ಟೊಂದು ಸಮಯವೂ ಇಲ್ಲ’ ಎಂದು ಖಡಕ್‌ ಉತ್ತರ ನೀಡುತ್ತಾರೆ.

ADVERTISEMENT

ಸೌಲಭ್ಯವೇ ಇಲ್ಲ: ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಇಲ್ಲ. ಆದ್ದರಿಂದ ಈ ಭಾಗದ ಅಥ್ಲೀಟ್‌ಗಳು ಮಣ್ಣಿನ ನೆಲದ ಮೇಲೆ ಅಭ್ಯಾಸ ಮಾಡಿ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುತ್ತಾರೆ.

2017ರಲ್ಲಿ ಅಕ್ಕಮಹಾದೇವಿ ವಿ.ವಿ.ಯಲ್ಲಿ ಅಂತರ ಕಾಲೇಜುಗಳ ಅಥ್ಲೆಟಿಕ್ಸ್‌ ನಡೆದಿತ್ತು. ಆಗಲೂ ಮಣ್ಣಿನ ಮೇಲೆ ಓಡಿ, ಅಂತರ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಮೇಲೆ ‘ಅಭ್ಯಾಸ’ ಮಾಡಿದ್ದರು. ಆದ್ದರಿಂದ ಮಹಿಳಾ ವಿ.ವಿ.ಗೆ ಅಖಿಲ ಭಾರತ ಮಟ್ಟದಲ್ಲಿ ಇದುವರೆಗೆ ಒಂದೂ ಪದಕ ಗೆಲ್ಲಲು ಸಾಧ್ಯವಾಗಿಲ್ಲ.

2004ರಲ್ಲಿ ಮ್ಯಾರಥಾನ್‌ನಲ್ಲಿ ಯಶೋಧಾ ಎನ್ನುವವರು ನಾಲ್ಕನೇ ಸ್ಥಾನ ಪಡೆದಿದ್ದೇ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ರಾಜ್ಯದ ಮಹಿಳಾ ವಿ.ವಿ.ಯ ಶ್ರೇಷ್ಠ ಸಾಧನೆ ಎನಿಸಿದೆ!

ಕರ್ನಾಟಕದ ಏಕೈಕ ಮಹಿಳಾ ವಿ.ವಿ. ಆರಂಭ ವಾಗಿ 14 ವರ್ಷ ಕಳೆದಿವೆ. ವಿ.ವಿ. ಆವರಣದಲ್ಲಿ ಇದುವರೆಗೂ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸಿಲ್ಲ. ಬಹುತೇಕ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಏಕೆ ಹೀಗೆ ಎಂದು ವಿ.ವಿ. ಯ ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಪ್ರೊ. ಎನ್‌. ಚಂದ್ರಪ್ಪ ಅವರನ್ನು ಪ್ರಶ್ನಿಸಿದಾಗ ‘ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣಕ್ಕೆ ₹ 5 ಕೋಟಿ ಖರ್ಚಾಗುತ್ತದೆ. ಇಷ್ಟೊಂದು ಹಣವಿಲ್ಲದ ಕಾರಣ ಮಣ್ಣಿನಲ್ಲಿ ಓಡುವುದು ಅನಿವಾರ್ಯ’ ಎಂದರು.

ಎರಡು ಕೂಟ ದಾಖಲೆ: ಮೊದಲ ಬಾರಿಗೆ ಸಿಂಥೆಟಿಕ್‌ನಲ್ಲಿ ನಡೆದರೂ ಕ್ರೀಡಾಕೂಟದಲ್ಲಿ ಎರಡು ಕೂಟ ದಾಖಲೆ ನಿರ್ಮಾಣವಾದವು.800 ಮೀಟರ್ ಓಟದ ಸ್ಪರ್ಧೆಯಲ್ಲಿ ಧಾರವಾಡದ ಕೆ.ಎಸ್‌ ಜಿಗಳೂರ ಹಾಗೂ ಡಾ. ಸುಶೀಲಾ ಮುರಿಗೆಪ್ಪ ಶೇಷಗಿರಿ ಕಲಾ, ವಾಣಿಜ್ಯ ಮಹಿಳಾ ಕಾಲೇಜಿನ ಜ್ಯೋತಿ ಕಟ್ಟಿಮನಿ ಮತ್ತುಹುಬ್ಬಳ್ಳಿಯ ಎಸ್‌ಜೆಎಂವಿಎಸ್‌ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನ ದಿವ್ಯಾ ಪಡಕನ್ನವರ ಹೈಜಂಪ್‌ನಲ್ಲಿ ದಾಖಲೆ ನಿರ್ಮಿಸಿದರು.

‘ಸಿಂಥೆಟಿಕ್‌ನಲ್ಲಿ ಮೊದಲ ಬಾರಿಗೆ ಓಡಿ ದ್ದರಿಂದ ಕಡಿಮೆ ಸಮಯದಲ್ಲಿ ಗುರಿ ಮುಟ್ಟಲು ಸಾಧ್ಯವಾಗಿದೆ. ಹೆಚ್ಚು ಆಯಾಸವಾಗಲಿಲ್ಲ. ನಮ್ಮ ವಿಶ್ವವಿದ್ಯಾಲಯದಲ್ಲಿಯೂ ಸೌಲಭ್ಯ ಕಲ್ಪಿಸಿದರೆ ಇನ್ನಷ್ಟು ಸಾಧನೆಗೆ ಅನುಕೂಲವಾಗುತ್ತದೆ’ ಎಂದು ಶಾಂತಾ ಮೇಟಿ ಹೇಳಿದರು.

‘ವಿದ್ಯಾರ್ಥಿಗಳ ಆಸಕ್ತಿಯೂ ಮುಖ್ಯ’

ಪದವಿಪೂರ್ವ ಮತ್ತು ಪದವಿ ಹಂತದ ಕ್ರೀಡಾಕೂಟಗಳಲ್ಲಿ ಮಹಿಳಾ ಕ್ರೀಡಾಪಟುಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಆದರೆ, ವಿಶ್ವವಿದ್ಯಾಲಯ ಹಂತಕ್ಕೆ ಬರುವಷ್ಟರಲ್ಲಿ ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ ಎಂದು ಕೆ.ಎಸ್‌ ಜಿಗಳೂರ ಮಹಿಳಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿಶಕುಂತಲಾ ಬಿರಾದಾರ ಬೇಸರ ವ್ಯಕ್ತಪಡಿಸಿದರು.

‘ವೃತ್ತಿಪರತೆ ಇದ್ದರಷ್ಟೇ ಯಶಸ್ಸು’
ಕ್ರೀಡಾಕೂಟಗಳು ಇದ್ದಾಗ ಮಾತ್ರ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಾರೆ. ಆದ್ದರಿಂದ ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಯ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವುದಿಲ್ಲ. ಕಾಲೇಜು ಓದು ಮುಗಿದ ಬಳಿಕ ಕ್ರೀಡೆಯಲ್ಲಿ ಮುಂದುವರೆಯುವುದಿಲ್ಲ. ಕ್ಲಬ್‌ ಹಾಗೂ ಅಕಾಡೆಮಿಗಳಲ್ಲಿ ವೃತ್ತಿಪರ ತರಬೇತಿ ಪಡೆಯುವುದಿಲ್ಲ. ಬೆಂಗಳೂರು, ಮಂಗಳೂರು, ಮೈಸೂರು ಭಾಗದಲ್ಲಿ ಈ ಸಮಸ್ಯೆಯಾಗುವುದಿಲ್ಲ. ಅಲ್ಲಿನ ಕ್ರೀಡಾಪಟುಗಳು ಕಾಲೇಜಿನಲ್ಲಿ ತರಬೇತಿ ಜೊತೆಗೆ ವೈಯಕ್ತಿಕ ಕೋಚ್‌ ನೇಮಿಸಿಕೊಂಡು ತರಬೇತಿ ಪಡೆದುಕೊಳ್ಳುತ್ತಾರೆ. ಇದರಿಂದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿದೆ.
-ಎಂ. ಚಂದ್ರಪ್ಪ, ಅಕ್ಕಮಹಾದೇವಿ ವಿ.ವಿ. ದೈಹಿಕ ಶಿಕ್ಷಣ ವಿಭಾಗದ ಪ್ರೊಫೆಸರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.