ADVERTISEMENT

ಚಾನು, ಜೆರೆಮಿಗೆ ಒಲಿಂಪಿಕ್ಸ್‌ ಟಿಕೆಟ್ ಕನಸು

ಏಷ್ಯನ್ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌: ಕಣದಲ್ಲಿ ಸತೀಶ್ ಶಿವಲಿಂಗಂ

ಪಿಟಿಐ
Published 15 ಏಪ್ರಿಲ್ 2021, 13:31 IST
Last Updated 15 ಏಪ್ರಿಲ್ 2021, 13:31 IST
ಮೀರಾಬಾಯಿ ಚಾನು –ಪಿಟಿಐ ಚಿತ್ರ
ಮೀರಾಬಾಯಿ ಚಾನು –ಪಿಟಿಐ ಚಿತ್ರ   

ತಾಷ್ಕಂಟ್‌: ಕೋವಿಡ್‌–19ರಿಂದಾಗಿ ಒಂದು ವರ್ಷ ಸ್ಪರ್ಧಾ ಕಣದಿಂದ ದೂರವಿದ್ದ ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಅವರು ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಲು ಸಜ್ಜಾಗಿದ್ದಾರೆ. ಶುಕ್ರವಾರ ಇಲ್ಲಿ ಆರಂಭವಾಗಲಿರುವ ಚಾಂಪಿಯನ್‌ಷಿಪ್‌ನಲ್ಲಿ ಚಾನು ಸೇರಿದಂತೆ ಭಾರತದ ಲಿಫ್ಟರ್‌ಗಳು ಪ್ರಶಸ್ತಿ ಗಳಿಸುವ ಭರವಸೆಯಲ್ಲಿದ್ದಾರೆ.

ಭಾರತದ ಕ್ರೀಡಾಪಟುಗಳು ಕೊನೆಯದಾಗಿ 2020ರ ಫೆಬ್ರುವರಿಯಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕೊನೆಯದಾಗಿ ಸ್ಪರ್ಧಿಸಿದ್ದರು. 2019ರಲ್ಲಿ ನಡೆದ ಕತಾರ್‌ ಕಪ್‌ ಭಾರತ ಪಾಲ್ಗೊಂಡ ಕೊನೆಯ ಅಂತರರಾಷ್ಟ್ರೀಯ ಕೂಟವಾಗಿತ್ತು.

ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲಿರುವ ಚಾಂಪಿಯನ್‌ಷಿಪ್‌ನಲ್ಲಿ 26 ವರ್ಷದ ಚಾನು ಪದಕ ಗಳಿಸುವ ನೆಚ್ಚಿನ ಕ್ರೀಡಾಪಟು ಎನಿಸಿದ್ದಾರೆ. 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿರುವ ಅವರ ಈ ಹಿಂದಿನ ಗರಿಷ್ಠ ಸಾಧನೆ 203 ಕೆಜಿ ಆಗಿತ್ತು. 2019ರ ಆವೃತ್ತಿಯಲ್ಲಿ ಅವರು ಕೂದಲೆಳೆ ಅಂತರದಲ್ಲಿ ಕಂಚಿನ ಪದಕದಿಂದ ವಂಚಿತರಾಗಿದ್ದರು.

ADVERTISEMENT

ಮಣಿಪುರದ ಚಾನು ಬೆನ್ನುನೋವಿನಿಂದ ಬಳಲಿ 2018ರಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದರು. ಗುಣಮುಖರಾದ ನಂತರ ಉತ್ತಮ ಸಾಮರ್ಥ್ಯ ತೋರುತ್ತಿದ್ದಾರೆ. 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರು ಒಟ್ಟು 201 ಕೆಜಿ ಭಾರ ಎತ್ತಿ ಗಮನ ಸೆಳೆದಿದ್ದರು.

ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ 203 ಕೆಜಿ ಭಾರ ಎತ್ತಿರುವ ಅವರು ಬೆನ್ನುನೋವಿಗೆ ಅಮೆರಿಕದಲ್ಲಿ ಡಾ.ಆ್ಯರನ್ ಹಾರ್ಷಿಗ್‌ ಅವರ ಬಳಿ ಚಿಕಿತ್ಸೆ ಪಡೆದುಕೊಂಡಿದ್ದರು. ಪುರುಷರ ಪೈಕಿ 2018ರ ಯೂತ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಜೆರೆಮಿ ಲಾಲ್‌ರಿನ್ವಾಂಗ ಅವರ ಮೇಲೆ ನಿರೀಕ್ಷೆ ಮೂಡಿದೆ. ಅವರು ಕೂಡ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಮಿಜೋರಾಂನ ಈ ವೇಟ್‌ಲಿಫ್ಟರ್‌ ಕೊನೆಯದಾಗಿ ಪಾಲ್ಗೊಂಡ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ದಾಖಲೆಯ ಭಾರ ಎತ್ತಿದ್ದರು. 306 ಕೆಜಿ ಭಾರ ಎತ್ತಿದ ಅವರು ತಮ್ಮದೇ ಹೆಸರಿನಲ್ಲಿದ್ದ ಯೂತ್ ವಿಶ್ವ ಚಾಂಪಿಯನ್‌ಷಿಪ್‌ ಮತ್ತು ಏಷ್ಯನ್ ಕೂಟದ ದಾಖಲೆ ಮುರಿದಿದ್ದರು.

ಸ್ನೇಹಾ ಸೊರೇನ್ (49 ಕೆಜಿ), ಜಿಲ್ಲಿ ದಲಬೆಹೆರಾ (45 ಕೆಜಿ), ಪಿ.ಅನುರಾಧಾ (87 ಕೆಜಿ), ಅಚಿಂತಾ ಶೇವುಲಿ (73 ಕೆಜಿ) ಮತ್ತು ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಎರಡು ಬಾರಿ ಚಿನ್ನ ಗೆದ್ದಿರುವ ಸತೀಶ್‌ ಶಿವಲಿಂಗಂ (81 ಕೆಜಿ) ಕೂಡ ಸ್ಪರ್ಧಾ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.