ADVERTISEMENT

ರಾಷ್ಟ್ರೀಯ ಮಹಿಳಾ ಕುಸ್ತಿ: ದಿವ್ಯಾ ಕಾಕ್ರನ್‌ಗೆ ಆಘಾತ ನೀಡಿದ ರಜಿನಿ

ಹರಿಯಾಣದ ಅನಿತಾಗೆ ಚಿನ್ನ

ಪಿಟಿಐ
Published 31 ಜನವರಿ 2021, 14:18 IST
Last Updated 31 ಜನವರಿ 2021, 14:18 IST
ದಿವ್ಯಾ ಕಾಕ್ರನ್‌ (ಕೆಂಪು ಪೋಷಾಕು)– ಪಿಟಿಐ ಸಂಗ್ರಹ ಚಿತ್ರ
ದಿವ್ಯಾ ಕಾಕ್ರನ್‌ (ಕೆಂಪು ಪೋಷಾಕು)– ಪಿಟಿಐ ಸಂಗ್ರಹ ಚಿತ್ರ   

ಆಗ್ರಾ: ಏಷ್ಯನ್ ಚಾಂಪಿಯನ್‌ ದಿವ್ಯಾ ಕಾಕ್ರನ್‌ ಅವರು ರಾಷ್ಟ್ರೀಯ ಮಹಿಳಾ ಕುಸ್ತಿ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದರು. ಭಾನುವಾರ ಇಲ್ಲಿ ನಡೆದ 68 ಕೆಜಿ ಬೌಟ್‌ನಲ್ಲಿ ಅವರು ಉತ್ತರ ಪ್ರದೇಶದ ರಜಿನಿ ಎದುರು 6–8ರಿಂದ ಸೋತರು.

ಎರಡು ತಿಂಗಳ ಹಿಂದೆ ದಿವ್ಯಾ ಕೋವಿಡ್‌–19 ಪಿಡುಗಿನಿಂದ ಬಳಲಿದ್ದರು. ಹೋದ ವರ್ಷದ ಫೆಬ್ರುವರಿಯಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಅವರು ಚಿನ್ನದ ಪದಕ ಗೆದ್ದುಕೊಂಡಿದ್ದರು.

ದಿವ್ಯಾ ಅವರನ್ನು ಮಣಿಸಿದ ರಜಿನಿ ಬೆಳ್ಳಿ ಪದಕ ಗೆದ್ದುಕೊಂಡರು. 68 ಕೆಜಿ ವಿಭಾಗದ ಚಿನ್ನದ ಪದಕವು ಹರಿಯಾಣದ ಅನಿತಾ ಪಾಲಾಯಿತು. ದೆಹಲಿಯ ರೌನಕ್ ಗುಲಿಯಾ ಹಾಗೂ ಭಾರತೀಯ ರೇಲ್ವೆಯ ರಿತು ಮಲಿಕ್‌ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.

ADVERTISEMENT

53 ಕೆಜಿ ವಿಭಾಗದಲ್ಲಿ ಮಹಾರಾಷ್ಟ್ರದ ನಂದಿನಿ ಅವರಿಗೆ ಚಿನ್ನದ ಪದಕ ಒಲಿಯಿತು. ದೆಹಲಿಯ ಮಮತಾ ರಾಣಿ ಬೆಳ್ಳಿ, ಮಣಿಪುರದ ಪಿ.ವಿದ್ಯಾರಾಣಿ ಮತ್ತು ಮಧ್ಯಪ್ರದೇಶದ ಪೂಜಾ ಜಾಟ್‌ ಕಂಚಿನ ಪದಕಗಳ ಒಡತಿಯರಾದರು.

ಭಾರತೀಯ ರೇಲ್ವೆಯ ಸರಿತಾ ಅವರು 59 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಬೆಳ್ಳಿ ಪದಕವು ಹರಿಯಾಣದ ಸಂಜು ದೇವಿ ಪಾಲಾದರೆ, ದೆಹಲಿಯ ನೇಹಾ ಹಾಗೂ ಹರಿಯಾಣದ ಅಂಜಲಿ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.

65 ಕೆಜಿ ವಿಭಾಗದ ಚಿನ್ನವು ರೇಲ್ವೆ ತಂಡದ ಮತ್ತೊಬ್ಬ ಪಟು ನಿಶಾ ಅವರ ಪಾಲಾಯಿತು. ಫೈನಲ್‌ನಲ್ಲಿ ಅವರು ರಾಜಸ್ತಾನದ ಮೋನಿಕಾ ಅವರನ್ನು ಮಣಿಸಿದರು. ಪಂಜಾಬ್‌ನ ಜಸ್‌ಪ್ರೀತ್ ಕೌರ್‌ ಹಾಗೂ ರೇಲ್ವೆಯ ನಿಕ್ಕಿ ಕಂಚಿನ ಪದಕಗಳನ್ನು ಗೆದ್ದುಕೊಂಡರು.

76 ಕೆಜಿ ವಿಭಾಗದಲ್ಲೂ ರೇಲ್ವೆ ಪ್ರಾಬಲ್ಯ ಮೆರೆಯಿತು. ಆ ತಂಡದ ಕಿರಣ್‌ ಚಿನ್ನ ಮುಡಿಗೇರಿಸಿಕೊಂಡರು. ಹಿಮಾಚಲ ಪ್ರದೇಶದ ರಾಣಿ ಬೆಳ್ಳಿ, ಹರಿಯಾಣದ ಪೂಜಾ ಮತ್ತು ಉತ್ತರಾಖಂಡದ ಕಾಜಲ್‌ ಕಂಚಿನ ಪದಕಗಳನ್ನು ಗಳಿಸಿದರು.

ಚಾಂಪಿಯನ್‌ಷಿಪ್‌ನ ಅಂತ್ಯದಲ್ಲಿ ಒಟ್ಟು 200 ಪಾಯಿಂಟ್ಸ್ ಕಲೆಹಾಕಿದ ಹರಿಯಾಣ ತಂಡ ಅಗ್ರಸ್ಥಾನ ತನ್ನದಾಗಿಸಿಕೊಂಡಿತು. ರೇಲ್ವೆ (163) ಹಾಗೂ ದೆಹಲಿ (119) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.