ಟೇಬಲ್ ಟೆನಿಸ್
ಕಠ್ಮಂಡು: ಭಾರತದ ಉದಯೋನ್ಮುಖ ಆಟಗಾರರು ಇಲ್ಲಿ ನಡೆದ ದಕ್ಷಿಣ ಏಷ್ಯಾ ಯೂತ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ 13 ಚಿನ್ನ ಮತ್ತು ಮೂರು ಬೆಳ್ಳಿ ಪದಕಗಳನ್ನು ಗೆದ್ದುಕೊಂಡರು.
ಯೂತ್ ಏಷ್ಯನ್ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನ ವಿವಿಧ ವಿಭಾಗಗಳ ಸ್ಪರ್ಧೆಗಳಲ್ಲಿ ಕೂಟದ ಕೊನೆಯ ದಿನವಾದ ಭಾನುವಾರ ಭಾರತದ ತಂಡವು ಪ್ರಾಬಲ್ಯ ಮೆರೆಯಿತು.
19 ವರ್ಷದೊಳಗಿನ ಬಾಲಕಿಯರು, 15 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರ ವಿಭಾಗಗಳಲ್ಲಿ ತಲಾ ಮೂರು ಚಿನ್ನದ ಪದಕಗಳನ್ನು ಭಾರತ ಗೆದ್ದಿತು. 19 ವರ್ಷದೊಳಗಿನ ಮತ್ತು 15 ವರ್ಷದೊಳಗಿನ ಡಬಲ್ಸ್, ಮಿಶ್ರ ಡಬಲ್ಸ್‌ನ ಎಲ್ಲಾ ಆರು ವಿಭಾಗಗಳಲ್ಲೂ ಭಾರತ ಪ್ರಶಸ್ತಿ ಜಯಿಸಿತು.
19 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ ಸ್ಪರ್ಧೆಗಳಲ್ಲಿ ಎಲ್ಲಾ ನಾಲ್ಕು ಚಿನ್ನದ ಪದಕಗಳನ್ನು ಭಾರತದ ಸ್ಪರ್ಧಿಗಳು ತನ್ನದಾಗಿಸಿಕೊಂಡರು. ಬಾಲಕರ ಫೈನಲ್‌ನಲ್ಲಿ ಕುಶಾಲ್ ಚೋಪ್ಡಾ 3-1ರಿಂದ ಸ್ವದೇಶದ ಆರ್. ಬಾಲಮುರುಗನ್ ಅವರನ್ನು ಸೋಲಿಸಿ ಚಿನ್ನ ಗೆದ್ದರು. ಬಾಲಕಿಯರ ಫೈನಲ್‌ನಲ್ಲಿ ಅನನ್ಯಾ ಚಾಂಡೆ 3-1ರಿಂದ ಸ್ವದೇಶದ ಪೃಥಾ ವರ್ತಿಕರ್ ಅವರನ್ನು ಸೋಲಿಸಿದರು.
ತಂಡ ವಿಭಾಗದ ಫೈನಲ್‌ನಲ್ಲಿ ಪೃಥಾ ವರ್ತಿಕರ್, ಅನನ್ಯಾ ಚಾಂಡೆ, ಹಾರ್ದಿ ಪಟೇಲ್ ಮತ್ತು ದಿಯಾ ಬ್ರಹ್ಮಚಾರಿ ಅವರನ್ನು ಒಳಗೊಂಡ 19 ವರ್ಷದೊಳಗಿನವರ ಬಾಲಕಿಯರ ತಂಡವು 3-1 ಅಂತರದಿಂದ ನೇಪಾಳವನ್ನು ಸೋಲಿಸಿತು.
15 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಪ್ರತೀತಿ ಪೌಲ್, ಆರುಷಿ ನಂದಿ, ಅದ್ವಿಕಾ ಅರ್ವಲ್ ಮತ್ತು ತನ್ಮಯಿ ಸಾಹಾ ಅವರ ತಂಡವು 3-0ಯಿಂದ ಶ್ರೀಲಂಕಾ ತಂಡವನ್ನು ಮಣಿಸಿ ಚಿನ್ನ ಗೆದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.