ನವದೆಹಲಿ: ಭಾರತವನ್ನು ಜಾಗತಿಕ ಕ್ರೀಡಾ ಶಕ್ತಿಕೇಂದ್ರವನ್ನಾಗಿಸುವ ಗುರಿಹೊಂದಿರುವ ರಾಷ್ಟ್ರೀಯ ಕ್ರೀಡಾ ನೀತಿಗೆ ಕೇಂದ್ರ ಸಚಿವ ಸಂಪುಟ ಸಭೆ ಮಂಗಳವಾರ ಅನುಮೋದನೆ ನೀಡಿತು.
ಈ ಹಿಂದೆ 2001ರಲ್ಲಿ ಕ್ರೀಡಾನೀತಿ ರೂಪಿಸಲಾಗಿತ್ತು. ಹೊಸ ನೀತಿಯು 2036ರ ಒಲಿಂಪಿಕ್ ಕ್ರೀಡೆಗಳು ಸೇರಿದಂತೆ ಪ್ರಮುಖ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರಬಲ ಶಕ್ತಿಯನ್ನಾಗಿ ರೂಪಿಸುವ ಮಾರ್ಗಸೂಚಿ ಹೊಂದಿದೆ.
ಕೇಂದ್ರ ಸಚಿವಾಲಯಗಳು, ನೀತಿ ಆಯೋಗ, ರಾಜ್ಯ ಸರ್ಕಾರಗಳು, ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು, ಕ್ರೀಡಾಪಟುಗಳು, ವಿಷಯತಜ್ಞರು ಮತ್ತು ಭಾಗೀದಾರರ ಜೊತೆ ಸಮಾಲೋಚಿಸಿದ ನಂತರ ಕ್ರೀಡಾನೀತಿಯನ್ನು ರೂಪಿಸಲಾಗಿದೆ.
‘ನಾವು ಹಿಂದಿನ 10 ವರ್ಷಗಳ ಅನುಭವ ಬಳಸಿಕೊಂಡಿದ್ದು, ಹೊಸ ನೀತಿಯು ಕ್ರೀಡೆಗಳ ಸಬಲೀಕರಣದ ಗುರಿಹೊಂದಿದೆ. ಭಾರತವನ್ನು 2047ರ ಒಳಗೆ ಜಗತ್ತಿನ ಐದು ಅಗ್ರ ರಾಷ್ಟ್ರಗಳಲ್ಲಿ ಒಂದಾಗಿಸುವ ಉದ್ದೇಶವನ್ನು ಹೊಂದಿ’ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಜಾಗತಿಕ ಕ್ರೀಡಾ ವೇದಿಕೆಗಳಲ್ಲಿ ಶ್ರೇಷ್ಠತೆ, ಆರ್ಥಿಕ ಅಭಿವೃದ್ಧಿಗೆ ಕ್ರೀಡೆಗಳನ್ನು ಬಳಸಿಕೊಳ್ಳುವಿಕೆ, ಸಾಮಾಜಿಕ ಅಭಿವೃದ್ಧಿಯಲ್ಲಿ ಕ್ರೀಡೆಗಳ ಒಳಗೊಳ್ಳುವಿಕೆ, ಕ್ರೀಡೆಯನ್ನು ರಾಷ್ಟ್ರೀಯ ಆಂದೋಲನವಾಗಿ ಮಾಡುವುದು, 2020ರ ಎನ್‌ಇಪಿಗೆ ಅನುಗುಣವಾಗಿ ಕ್ರೀಡೆಯನ್ನು ಬೆಳೆಸುವುದು – ಇವು ಹೊಸ ಕ್ರೀಡಾನೀತಿಯ ಪ್ರಮುಖ ಅಂಶಗಳಾಗಿವೆ.
ಈ ನೀತಿಯನ್ನು ‘ಪರಿವರ್ತನೆಯ ಹೆಜ್ಜೆ’ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಬಣ್ಣಿಸಿದ್ದಾರೆ. ‘ಈ ಮೈಲಿಗಲ್ಲು ಯೋಜನೆ ಕ್ರೀಡಾ ಸಂಸ್ಕೃತಿಯನ್ನು ತಳಮಟ್ಟದಲ್ಲಿ ಉತ್ತೇಜಿಸಲು, ಅಥ್ಲೀಟುಗಳ ಅಭಿವೃದ್ಧಿಗೆ ಬೆಂಬಲ ನೀಡಲು ಮತ್ತು ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ದೇಶವನ್ನು ಪ್ರಬಲ ಶಕ್ತಿಯನ್ನಾಗಿ ರೂಪಿಸಲು ದೂರದೃಷ್ಟಿಯ ಕಾರ್ಯತಂತ್ರ ಹೊಂದಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.