ಬರ್ಮಿಂಗ್‌ಹ್ಯಾಮ್: ಗಾಯದ ಸಮಸ್ಯೆ, ಲಯಕ್ಕೆ ಪರದಾಟ– ಇವೆಲ್ಲದರ ಮಧ್ಯೆ ಭಾರತದ ಬ್ಯಾಡ್ಮಿಂಟನ್ ಪಟುಗಳು, ಮಂಗಳವಾರ ಇಲ್ಲಿ ಆರಂಭವಾಗುವ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್ಸ್‌ನಲ್ಲಿ ಸತ್ವಪರೀಕ್ಷೆ ಎದುರಿಸುತ್ತಿದ್ದಾರೆ.
1980ರಲ್ಲಿ ಪ್ರಕಾಶ್ ಪಡುಕೋಣೆ ಮತ್ತು 2001ರಲ್ಲಿ ಪುಲ್ಲೇಲ ಗೋಪಿಚಂದ್ ಅವರನ್ನು ಬಿಟ್ಟರೆ ಭಾರತದ ಯಾರೂ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿಲ್ಲ. ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಷಿಪ್ ನಂತರದ ಸ್ಥಾನ ಈ ಟೂರ್ನಿಗಿದೆ.
ಹಿಂದಿನ ಎರಡು ದಶಕಗಳಲ್ಲಿ ದೇಶದ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಪಿ.ವಿ.ಸಿಂಧು, ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಅವರಂಥ ತಾರೆಗಳು ಉದಯಿಸಿದ್ದಾರೆ. ಈ ತಾರೆಗಳು ಹಲವು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನೂ ಗೆದ್ದಿದ್ದಾರೆ. ಆದರೆ ಇದುವರೆಗೆ ಯಾರಿಗೂ ಆಲ್ ಇಂಗ್ಲೆಂಡ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.
ಸೈನಾ ಮತ್ತು ಲಕ್ಷ್ಯ ಸೇನ್ ಪ್ರಶಸ್ತಿ ಸನಿಹಕ್ಕೆ ಬಂದಿದ್ದರು. ಕ್ರಮವಾಗಿ 2015 ಮತ್ತು 2022ರಲ್ಲಿ ರನ್ನರ್ ಅಪ್ ಆಗಿದ್ದರು. ಡಬಲ್ಸ್‌ನಲ್ಲಿ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಅವರು ಸತತ ಎರಡು ಬಾರಿ ಸೆಮಿಫೈನಲ್ ತಲುಪಿದ್ದೂ ಇದೆ.
ಈ ಬಾರಿಯೂ ಭಾರತದ ಸ್ಪರ್ಧಿಗಳು ಗಾಯದ ಆತಂಕ ಮತ್ತು ಫಾರ್ಮಿನ ಕೊರತೆ ಮಧ್ಯೆ ಬಂದಿಳಿದಿದ್ದಾರೆ. ಸಿಂಧು ಅವರಿಗೆ ಗಾಯದ ಸಮಸ್ಯೆಯಿದೆ. ಪ್ರಣಯ್ ಅವರು ಚಿಕುನ್‌ಗುನ್ಯಾ ನಂತರ ಎಂದಿನ ಲಯಕ್ಕೆ ಹಿಂದಿರುಗಿಲ್ಲ. ಲಕ್ಷ್ಯ ಸೇನ್ ಅವರೂ ಪರದಾಡುತ್ತಿದ್ದಾರೆ. ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಅವರ ತಂದೆ ಕಳೆದ ತಿಂಗಳು ನಿಧನರಾಗಿದ್ದು, ಅವರೂ ಹಿಂದಿನ ವೈಭವ ಕಾಣುತ್ತಿಲ್ಲ.
29 ವರ್ಷ ವಯಸ್ಸಿನ ಸಿಂಧು ಹ್ಯಾಮ್‌ಸ್ಟ್ರಿಂಗ್ (ಮೊಣಕಾಲಿನ ಸ್ನಾಯುರಜ್ಜು) ನೋವಿನಿಂದ ಚೇತರಿಸಿಕೊಂಡು ಬಂದಿದ್ದಾರೆ. ಅವರು ಕಳೆದ ತಿಂಗಳು ನಡೆದ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಷಿಪ್‌ನಲ್ಲಿ ಆಡಿರಲಿಲ್ಲ. ಇಲ್ಲಿ ಮೊದಲ ಸುತ್ತಿನಲ್ಲಿ ಅವರ ಎದುರಾಳಿ ಕೊರಿಯಾದ ಗಾ ಯುನ್ ಕಿಮ್. ಎಂಟರ ಘಟ್ಟದವರೆಗೆ ಮುಂದುವರಿದಲ್ಲಿ ಅವರಿಗೆ ಇಂಡೊನೇಷ್ಯಾದ ಪ್ರಬಲ ಆಟಗಾರ್ತಿ ಜಾರ್ಜಿಯಾ ಮರಿಸ್ಕಾ ತಂಜುಂಗ್ ಎದುರಾಗಬಹುದು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಲಕ್ಷ್ಯ ಸೇನ್, ಹಿಂದಿನ ವರ್ಷ ಈ ಟೂರ್ನಿಯ ಸೆಮಿಫೈನಲ್ ತಲುಪಿದ್ದರು. ಆದರೆ ಈ ಋತುವಿನಲ್ಲಿ 23 ವರ್ಷ ವಯಸ್ಸಿನ ಲಕ್ಷ್ಯ, ಹಲವು ಟೂರ್ನಿಗಳಲ್ಲಿ ಮೊದಲ ಅಥವಾ ಎರಡನೇ ಸುತ್ತಿನಲ್ಲಿ ಹೊರಬಿದ್ದಿದ್ದಾರೆ. ಜಪಾನ್‌ನ ಕೋಕಿ ವತಾನಬೆ ಅವರ ಮೊದಲ ಸುತ್ತಿನ ಎದುರಾಳಿ. ಗೆದ್ದಲ್ಲಿ ಇಂಡೊನೇಷ್ಯಾದ ಜೊನಾಥನ್ ಕ್ರಿಸ್ಟಿ ಎದುರಾಗುವ ಸಂಭವವಿದೆ.
ವಿಶ್ವ ಕ್ರಮಾಂಕದಲ್ಲಿ ಈಗ 30ನೇ ಸ್ಥಾನಕ್ಕೆ ಸರಿದಿರುವ, 32 ವರ್ಷ ವಯಸ್ಸಿನ ಪ್ರಣಯ್ ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಟೊಮಾ ಜೂನಿಯರ್ ಪೊಪೊವ್ ಅವರನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ.
ಏಳನೇ ಶ್ರೇಯಾಂಕದ ಪಡೆದಿರುವ ಸಾತ್ವಿಕ್ –ಚಿರಾಗ್ ಶೆಟ್ಟಿ ಜೋಡಿ ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ಡೇನಿಯಲ್ ಲಂಡ್‌ಗ್ರಾಡ್– ಮಾಡ್ಸ್ ವೆಸ್ಟರ್‌ಗಾರ್ಡ್ ಎದುರು ಆಡಲಿದೆ. ಮಹಿಳಾ ವಿಭಾಗದಲ್ಲಿ ಒಂಬತ್ತನೇ ಶ್ರೇಯಾಂಕದ ಪಡೆದಿರುವ ಟ್ರೀಸಾ–ಗಾಯತ್ರಿ ಜೋಡಿ, ಚೀನಾ ತೈಪಿಯ ಶುವೊ ಯುನ್ ಸುಂಗ್– ಚೀನ್ ಹುಯಿ ಯು ವಿರುದ್ಧ ಆಡಲಿದೆ. ಅಶ್ವಿನಿ ಪೊನ್ನಪ್ಪ– ತನಿಶಾ ಕ್ರಾಸ್ಟೊ ಜೋಡಿಯೂ ಇಲ್ಲಿ ಆಡುತ್ತಿದೆ. ಮಾಳವಿಕಾ ಬನ್ಸೋಡ್ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಸಿಂಗಪುರದ ಜಿಯಾ ಮಿನ್ ಯೊ ವಿರುದ್ಧ ಆಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.