ADVERTISEMENT

ಲಾನ್‌ ಬಾಲ್ಸ್‌: ಪುರುಷರ ತಂಡಕ್ಕೆ ಬೆಳ್ಳಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 15:35 IST
Last Updated 6 ಆಗಸ್ಟ್ 2022, 15:35 IST
ಲಾನ್‌ ಬಾಲ್ಸ್‌ ತಂಡ
ಲಾನ್‌ ಬಾಲ್ಸ್‌ ತಂಡ   

ಬರ್ಮಿಂಗ್‌ಹ್ಯಾಮ್: ಭಾರತ ಪುರುಷರ ತಂಡದವರು ಲಾನ್‌ ಬಾಲ್ಸ್‌ ಸ್ಪರ್ಧೆಯ ಫೋರ್ಸ್‌ ವಿಭಾಗದಲ್ಲಿ ಬೆಳ್ಳಿ ಗೆದ್ದರು.

ಶನಿವಾರ ನಡೆದ ಫೈನಲ್‌ನಲ್ಲಿ ಭಾರತ 5–18 ರಲ್ಲಿ ನಾರ್ತರ್ನ್‌ ಐರ್ಲೆಂಡ್‌ ಎದುರು ಪರಾಭವಗೊಂಡಿತು. ಲಾನ್‌ ಬಾಲ್ಸ್‌ನಲ್ಲಿ ಭಾರತಕ್ಕೆ ದೊರೆತ ಎರಡನೇ ಪದಕ ಇದು. ಮಹಿಳಾ ತಂಡದವರು ಫೋರ್ಸ್‌ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಆದರೆ ಪುರುಷರ ತಂಡ ಚಿನ್ನದ ಸಾಧನೆ ಮಾಡಲು ವಿಫಲವಾಯಿತು.

ಸುನಿಲ್‌ ಬಹಾದೂರ್‌, ನವನೀತ್‌ ಸಿಂಗ್‌, ಚಂದನ್‌ ಕುಮಾರ್‌ ಸಿಂಗ್‌ ಮತ್ತು ದಿನೇಶ್‌ ಕುಮಾರ್‌ ಅವರನ್ನೊಳಗೊಂಡ ಭಾರತ ತಂಡ ಸೆಮಿಫೈನಲ್‌ನಲ್ಲಿ 13–12 ರಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಿಸಿತ್ತು.

ADVERTISEMENT

ಫೈನಲ್‌ನಲ್ಲಿ ಭಾರತ ತಂಡ ನಿಖರ ಪ್ರದರ್ಶನ ನೀಡುವಲ್ಲಿ ಎಡವಿತು. ಮೊದಲ ನಾಲ್ಕು ಸುತ್ತುಗಳ ಬಳಿಕ ಬಳಿಕ ಐರ್ಲೆಂಡ್‌ 7–0 ರಲ್ಲಿ ಮುನ್ನಡೆ ಪಡೆಯಿತು. ಭಾರತಕ್ಕೆ ಖಾತೆ ತೆರೆಯಲು ಆಗಲಿಲ್ಲ.

ಐದು ಸುತ್ತುಗಳ ಬಳಿಕ ಭಾರತಕ್ಕೆ ಮೊದಲ ಪಾಯಿಂಟ್‌ ಲಭಿಸಿತು. 10 ಸುತ್ತುಗಳು ಕೊನೆಗೊಂಡಾಗ ಐರ್ಲೆಂಡ್‌ 12–5 ರಲ್ಲಿ ಮೇಲುಗೈ ಸಾಧಿಸಿತು. ನಿಖರ ಪ್ರದರ್ಶನ ಮುಂದುವರಿಸಿದ ಸಾಮ್ ಬರ್ಕ್ಲೆ, ಆ್ಯಡಮ್‌ ಮೆಕೋವನ್, ಇಯಾನ್‌ ಮೆಕ್‌ಲೂರ್‌ ಮತ್ತು ಮಾರ್ಟಿನ್‌ ಮೆಕ್‌ಹ್ಯೂ ಅವರು ಮತ್ತೆ ಆರು ಪಾಯಿಂಟ್‌ ಕಲೆಹಾಕಿ ಚಿನ್ನ ತಮ್ಮದಾಗಿಸಿಕೊಂಡರು.

ನಾರ್ತರ್ನ್‌ ಐರ್ಲೆಂಡ್‌ ಲಾನ್‌ ಬಾಲ್ಸ್‌ನಲ್ಲಿ 1998ರ ಬಳಿಕ ಇದೇ ಮೊದಲ ಬಾರಿ ಚಿನ್ನ ಗೆದ್ದ ಸಾಧನೆ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.