ADVERTISEMENT

20 ಕಿ.ಮೀ.ನಡಿಗೆ ಸ್ಪರ್ಧೆ: ಒಲಿಂಪಿಕ್ಸ್ ಅರ್ಹತೆ ಗಳಿಸಿದ ಭಾವನಾ

ಅವಕಾಶ ಕಳೆದುಕೊಂಡ ಪ್ರಿಯಾಂಕಾ

ಪಿಟಿಐ
Published 15 ಫೆಬ್ರುವರಿ 2020, 19:30 IST
Last Updated 15 ಫೆಬ್ರುವರಿ 2020, 19:30 IST
ಭಾವನಾ ಜಾಟ್‌ (ಬಲ)
ಭಾವನಾ ಜಾಟ್‌ (ಬಲ)   

ರಾಂಚಿ: ಭಾರತದ ಭಾವನಾ ಜಾಟ್‌ ಅವರು 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಟೋಕಿಯೊ ಒಲಿಂಪಿಕ್ಸ್‌ ಟಿಕೆಟ್‌ ಗಿಟ್ಟಿಸಿದ್ದಾರೆ. ಇಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಅವರು ರಾಷ್ಟ್ರೀಯ ದಾಖಲೆಯೊಂದಿಗೆ ಅಗ್ರಸ್ಥಾನ ಗಳಿಸಿದರು.

ರಾಜಸ್ತಾನದ ಈ ಅಥ್ಲೀಟ್‌ 1 ತಾಸು 29.54 ನಿಮಿಷಗಳಲ್ಲಿ ಗುರಿ ತಲುಪಿದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆ ಕೂಡ. ಒಲಿಂಪಿಕ್‌ ಅರ್ಹತೆಗೆ 1 ತಾಸು 31 ನಿಮಿಷಗಳ ಗುರಿ ನಿಗದಿಪಡಿಸಲಾಗಿತ್ತು.

ಹೋದ ವರ್ಷದ ಅಕ್ಟೋಬರ್‌ನಲ್ಲಿ ಭಾವನಾ,1 ತಾಸು 38.30 ನಿಮಿಷಗಳಲ್ಲಿ ಸ್ಪರ್ಧೆ ಮುಗಿಸಿದ್ದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.

ADVERTISEMENT

‘1 ತಾಸು 28 ನಿ.– 1 ತಾಸು 29 ನಿಮಿಷದ ಒಳಗೆ ಸ್ಪರ್ಧೆ ಮುಗಿಸುವುದು ನನ್ನ ಉದ್ದೇಶವಾಗಿತ್ತು. ಹೋದ ಮೂರು ತಿಂಗಳು ಕಠಿಣ ತರಬೇತಿ ನಡೆಸಿದ್ದೆ. ಸಾಧನೆಗೆ ಬೆಂಬಲವಾಗಿ ನಿಂತ ಪೋಷಕರು ಹಾಗೂ ರೇಲ್ವೆ ಇಲಾಖೆಗೆ ಧನ್ಯವಾದಗಳು’ ಎಂದು ರೇಲ್ವೆ ಉದ್ಯೋಗಿಯಾಗಿರುವ ಭಾವನಾ ಹರ್ಷ ವ್ಯಕ್ತಪಡಿಸಿದ್ದಾರೆ.

ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ರಿಯಾಂಕಾ ಗೋಸ್ವಾಮಿ ಕೂದಲೆಳೆ ಅಂತರದಲ್ಲಿ ಒಲಿಂಪಿಕ್ಸ್ ಅರ್ಹತೆ ಅವಕಾಶ ಕಳೆದುಕೊಂಡರು. ಅವರು ನಿಗದಿತ ಗೆರೆ ಮುಟ್ಟಿದ್ದು 1 ತಾಸು 31.36 ನಿಮಿಷಗಳಲ್ಲಿ.

2020ರ ಒಲಿಂಪಿಕ್‌ ಕ್ರೀಡೆಗಳು ಜುಲೈ 24ರಿಂದ ಆಗಸ್ಟ್‌ 9ರವರೆಗೆ ಜಪಾನ್‌ನ ಟೋಕಿಯೊದಲ್ಲಿ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.