ADVERTISEMENT

ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ಕನ್ನಡಿಗ ಅರ್ಜುನ್‌, ಸುನಿಲ್‌ಗೆ ಕಂಚು

ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ನೀರಜ್‌ಗೆ ಒಲಿದ ಪದಕ

ಪಿಟಿಐ
Published 19 ಏಪ್ರಿಲ್ 2022, 14:08 IST
Last Updated 19 ಏಪ್ರಿಲ್ 2022, 14:08 IST
ಅರ್ಜುನ್ ಹಲಕುರ್ಕಿ– ಪಿಟಿಐ ಸಂಗ್ರಹ ಚಿತ್ರ
ಅರ್ಜುನ್ ಹಲಕುರ್ಕಿ– ಪಿಟಿಐ ಸಂಗ್ರಹ ಚಿತ್ರ   

ಉಲಾನ್‌ಬಾತರ್‌,ಮಂಗೋಲಿಯಾ: ಕರ್ನಾಟಕದ ಅರ್ಜುನ್ ಹಲಕುರ್ಕಿ ಸೇರಿ ಭಾರತದ ಮೂವರು ಕುಸ್ತಿಪಟುಗಳು ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ ಗ್ರೀಕೊ ರೋಮನ್ ವಿಭಾಗದಲ್ಲಿ ಮಂಗಳವಾರ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಸುನಿಲ್ ಹಾಗೂ ನೀರಜ್‌ ಕಂಚು ಗೆದ್ದ ಭಾರತದ ಇನ್ನಿಬ್ಬರು ಪೈಲ್ವಾನರು.

55 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ಅರ್ಜುನ್‌, ಕಂಚಿನ ಪದಕದ ಪ್ಲೇ ಆಫ್‌ನಲ್ಲಿ ಸ್ಥಳೀಯ ಪೈಲ್ವಾನ ದವಾಬಂಡಿ ಮುಂಕ್‌ ಎರ್ಡನ್‌ ಸವಾಲು ಮೀರಿದರು. ಅರ್ಜುನ್‌ಗೆ 10–7ರಿಂದ ಜಯ ಒಲಿಯಿತು.

ADVERTISEMENT

ಕ್ವಾರ್ಟರ್‌ಫೈನಲ್ ಬೌಟ್‌ನಲ್ಲಿ ಅರ್ಜುನ್‌ ಕಜಕಸ್ತಾನದ ಅಮಂಗಾಲಿ ಬೆಕ್‌ಬೊಲಾತೊವ್‌ ಎದುರು ಸೋತಿದ್ದರು.ಬೆಕ್‌ಬೊಲಾತೊವ್‌ ಫೈನಲ್ ತಲುಪಿದ್ದರಿಂದ ಅರ್ಜುನ್‌ಗೆ ಪ್ಲೇ ಆಫ್‌ ಆಡುವ ಅವಕಾಶ ಸಿಕ್ಕಿತ್ತು.

2020ರ ಆವೃತ್ತಿಯಲ್ಲೂ ಕರ್ನಾಟಕದ ಕುಸ್ತಿಪಟುವಿಗೆ ಕಂಚು ಒಲಿದಿತ್ತು.

87 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸುನಿಲ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಬಾರಿ ‘ಪೋಡಿಯಂ ಫಿನಿಶ್‘ ಮಾಡಿದರು. 2020ರ ಆವೃತ್ತಿಯಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ್ದ ಅವರು, ಈ ಆವೃತ್ತಿಯ ಕಂಚಿನ ಪದಕದ ಬೌಟ್‌ನಲ್ಲಿ ಮಂಗೋಲಿಯಾದ ಬಾತ್‌ಬಯಾರ್‌ ಲೂಟ್‌ಬಯಾರ್ ಅವರನ್ನು ಮಣಿಸಿದರು. ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಅವರಿಗೆ ಜಯ ಒಲಿಯಿತು.

ಸೆಮಿಫೈನಲ್‌ನಲ್ಲಿ ಸುನಿಲ್‌ ಉಜ್ಬೆಕಿಸ್ತಾನದ ಜಲ್ಗಾಸ್‌ಬಾಯ್‌ ಬೆರ್ಡಿಮುರೊತೊವ್ ವಿರುದ್ಧ ಸೋತಿದ್ದರು. ಮೊದಲ ಸುತ್ತಿನಲ್ಲಿ ಭಾರತದ ಪೈಲ್ವಾನಗೆ ಜಪಾನ್‌ನ ಮಸಾಟೊ ಸುಮಿ ಎದುರು ಗೆಲುವು ಲಭಿಸಿತ್ತು.

63 ಕೆಜಿ ವಿಭಾಗದ ಬೌಟ್‌ನಲ್ಲಿ ನೀರಜ್‌ 7–4ರಿಂದಉಜ್ಬೆಕಿಸ್ತಾನದಇಸ್ಲಾಮ್‌ಜಾನ್‌ ಬಖ್ರಮೊವ್‌ ಅವರನ್ನು ಚಿತ್ ಮಾಡಿದರು. ಕ್ವಾರ್ಟರ್‌ಫೈನಲ್‌ನಲ್ಲಿ ಕಿರ್ಗಿಸ್ತಾನದ ತೈನಾರ್‌ ಶರ್ಶೆನ್‌ಬೆಕೊವ್ ಎದುರು ನೀರಜ್ ಸೋತಿದ್ದರು. ಈ ವಿಭಾಗದಲ್ಲಿ ತೈನಾರ್ ಚಿನ್ನ ಗೆದ್ದರು. ನೀರಜ್‌ಗೆ ಪ್ಲೇ ಆಫ್‌ನಲ್ಲಿ ಕಣಕ್ಕಿಳಿಯುವ ಅವಕಾಶ ಲಭಿಸಿತ್ತು.

ಸಜನ್ ಭನ್ವಾಲ್‌ (77 ಕೆಜಿ ವಿಭಾಗ) ಕಂಚಿನ ಪದಕದ ಬೌಟ್‌ನಲ್ಲಿ ಜಪಾನ್‌ನ ಕೊಡಾಯ್‌ ಸಕುರಬಾ ವಿರುದ್ಧ ಸೋತರೆ, ಮತ್ತು ಪ್ರೇಮ್ ಕುಮಾರ್ (130 ಕೆಜಿ) ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.