ADVERTISEMENT

ಬ್ಯಾಡ್ಮಿಂಟನ್‌: ಶ್ಲೋಕ್‌ಗೆ ಪ್ರಶಸ್ತಿ ಡಬಲ್‌ ಸಂಭ್ರಮ

ಜೆಇ ವಿಲ್ಸನ್‌ ಇಂಟರ್‌ನ್ಯಾಷನಲ್‌ ಸಿರೀಸ್‌ ಬ್ಯಾಡ್ಮಿಂಟನ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:36 IST
Last Updated 22 ಜುಲೈ 2019, 19:36 IST
ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ ಶ್ಲೋಕ್‌ ರಾಮಚಂದ್ರನ್‌ ಮತ್ತು ರಿತುಪರ್ಣಾ ಪಂಡಾ ಸಂಭ್ರಮ– ಟ್ವಿಟ್ಟರ್‌ ಚಿತ್ರ
ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ ಶ್ಲೋಕ್‌ ರಾಮಚಂದ್ರನ್‌ ಮತ್ತು ರಿತುಪರ್ಣಾ ಪಂಡಾ ಸಂಭ್ರಮ– ಟ್ವಿಟ್ಟರ್‌ ಚಿತ್ರ   

ನವದೆಹಲಿ (ಪಿಟಿಐ): ಭಾರತದ ಬ್ಯಾಡ್ಮಿಂಟನ್‌ ಆಟಗಾರರು ಜೆಇ ವಿಲ್ಸನ್‌ ಇಂಟರ್‌ನ್ಯಾಷನಲ್‌ ಸಿರೀಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಶ್ಲೋಕ್‌ ರಾಮಚಂದ್ರನ್‌ ಹಾಗೂ ಎಂ.ಆರ್‌.ಅರ್ಜುನ್‌ ಪುರುಷರ ಡಬಲ್ಸ್‌ನಲ್ಲಿ ಚಾಂಪಿಯನ್‌ ಆದರು.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಋತುಪರ್ಣಾ ಪಂಡಾ ಜೊತೆಯಾಗಿ ಆಡಿದ ರಾಮಚಂದ್ರನ್‌ ಪ್ರಶಸ್ತಿಗೆ ಮುತ್ತಿಕ್ಕಿದರು. ಘಾನಾ ದೇಶದ ಅಕ್ರಾದಲ್ಲಿ ಟೂರ್ನಿ ನಡೆಯಿತು.

ಅಗ್ರ ಶ್ರೇಯಾಂಕದ ಶ್ಲೋಕ್‌ ಹಾಗೂ ಅರ್ಜುನ್‌ ಜೋಡಿಯು ಫೈನಲ್‌ ಪಂದ್ಯದಲ್ಲಿ ನೈಜೀರಿಯಾದ ಗಾಡ್ವಿನ್‌ ಒಲೊಪುವಾ ಹಾಗೂ ಅನುಒಲುವಾಪೊ ಜುವಾನ್‌ ಒಪೆಯೊರಿ ಅವರನ್ನು 21–11, 21–12 ಗೇಮ್‌ಗಳಿಂದ ಮಣಿಸಿತು. ಕೇವಲ 24 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು.

ADVERTISEMENT

ಮಿಶ್ರ ಡಬಲ್ಸ್ ವಿಭಾಗದ ಅಂತಿಮ ಪಂದ್ಯದಲ್ಲಿ ಶ್ಲೋಕ್‌ ಹಾಗೂ ಋತುಪರ್ಣಾ ಅಗ್ರಶ್ರೇಯಾಂಕದ ಭಾರತದ ಜೋಡಿ ಅರ್ಜುನ್‌ ಹಾಗೂ ಮನೀಷಾ ಕೆ. ಅವರನ್ನು 21–19, 21–15ರಿಂದ ಸೋಲಿಸಿ ಟ್ರೋಫಿ ಎತ್ತಿಹಿಡಿಯಿತು.

ಮಹಿಳಾ ಡಬಲ್ಸ್‌ನಲ್ಲಿ ಮನೀಷಾ ಹಾಗೂ ಋತುಪರ್ಣಾ ಅವರು ಚಾಂಪಿಯನ್‌ ಪಟ್ಟ ಧರಿಸಿದರು.

ಫೈನಲ್‌ ಪಂದ್ಯದಲ್ಲಿ ನೈಜೀರಿಯಾದ ಜೋಡಿ ಡೋರ್ಕಾಸ್‌ ಅಜೋಕ್‌ ಅಡ್‌ಸೋಕನ್‌ ಹಾಗೂ ಉಚೆಚುಕ್ವು ದೆಬೊರಾ ಉಕೆ ಎದುರು 21–11, 21–11ರಿಂದ ಭಾರತದ ಆಟಗಾರ್ತಿಯರು ಗೆದ್ದು ಬೀಗಿದರು. ಪುರುಷರ ಸಿಂಗಲ್ಸ್ ಪ್ರಶಸ್ತಿಯೂ ಭಾರತದ ಪಾಲಾಯಿತು. ಫೈನಲ್‌ ಪಂದ್ಯದಲ್ಲಿ ಕಿರಣ್‌ ಜಾರ್ಜ್‌ ಅವರು ಅಜರ್‌ಬೈಜಾನ್‌ನ ಏಡ್‌ ರೆಸ್ಕಿ ಡ್ವಿಕಾಯೊ ವಿರುದ್ಧ 25–23, 21–19 ರಿಂದ ಜಯಭೇರಿ ಮೊಳಗಿಸಿದರು.

ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ಭಾರತದ ಮುಗ್ದಾ ಅಗ್ರೆ ಅವರು ವಿಯೆಟ್ನಾಂನ ಥಿ ತ್ರಾಂಗ್‌ ವು ವಿರುದ್ಧ 10–21, 6–21ರಿಂದ ಮಣಿದು ರನ್ನರ್‌ಅಪ್‌ ಆದರು.

ಭಾರತದ ಸ್ಪರ್ಧಿಗಳು 2018ರಲ್ಲಿ ನಡೆದ ಚೊಚ್ಚಲ ಜೆಇ ವಿಲ್ಸನ್‌ ಟೂರ್ನಿಯಲ್ಲಿ ನಾಲ್ಕು ಚಿನ್ನ, ಮೂರು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳನ್ನು ಬಾಚಿಕೊಂಡು ಅಗ್ರಸ್ಥಾನ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.