ADVERTISEMENT

ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್: ಸಿಂಧುಗೆ ಜಯ; ಶ್ರೀಕಾಂತ್‌ಗೆ ನಿರಾಸೆ

ಪಿಟಿಐ
Published 29 ಜನವರಿ 2021, 16:41 IST
Last Updated 29 ಜನವರಿ 2021, 16:41 IST
ಕಿದಂಬಿ ಶ್ರೀಕಾಂತ್‌–ಎಎಫ್‌ಪಿ ಚಿತ್ರ
ಕಿದಂಬಿ ಶ್ರೀಕಾಂತ್‌–ಎಎಫ್‌ಪಿ ಚಿತ್ರ   

ಬ್ಯಾಂಕಾಕ್‌ (ಪಿಟಿಐ): ಈಗಾ ಗಲೇಟೂರ್ನಿಯಿಂದ ಹೊರಬಿದ್ದಿರುವ, ಭಾರತದ ಪಿ.ವಿ.ಸಿಂಧು, ಬಿಡಬ್ಲ್ಯುಎಫ್‌ ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಕ್ರವಾರ ’ಸಮಾಧಾ ನಕರ‘ ಜಯ ಗಳಿಸಿದರು. ಆದರೆ ಕಿದಂಬಿ ಶ್ರೀಕಾಂತ್, ಮೂರನೇ ಸುತ್ತಿನ ಪಂದ್ಯದಲ್ಲೂ ನಿರಾಸೆ ಅನುಭವಿಸಿದರು.

ಸಿಂಧು ಅವರು ಟೂರ್ನಿಯ ಮೂರನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ 21–18, 21–15ರಿಂದ ಥಾಯ್ಲೆಂಡ್‌ನ ಪಾರ್ನ್‌ಪವೀ ಚೋಚುವಾಂಗ್ ಎದುರು ಜಯ ಸಾಧಿಸಿದರು.

‘ಟೂರ್ನಿಯಲ್ಲಿ ಉತ್ತಮ ಅಂತ್ಯ ಸಿಕ್ಕಿತು. ಈ ಹಿಂದಿನ ಪಂದ್ಯದಲ್ಲೂ ನನಗೆ ಗೆಲುವಿನ ಅವಕಾಶ ಇತ್ತು. ಆದರೆ ದುರದೃಷ್ಟವಶಾತ್‌, ತಾಯ್‌ ಜು ಎದುರಿನ ಪಂದ್ಯದಲ್ಲಿ ಸೋತೆ. ಇದೊಂದು ಉತ್ತಮ ಪಂದ್ಯವಾಗಿತ್ತು‘ ಎಂದು ಸಿಂಧು ಹೇಳಿದ್ದಾರೆ.

ADVERTISEMENT

ಪಂದ್ಯದ ಮೊದಲ ಗೇಮ್‌ನಲ್ಲಿ 9–5ರಿಂದ ಮುನ್ನಡೆ ಗಳಿಸಿದ ಸಿಂಧು, ವಿರಾಮದ ವೇಳೆಗೆ ಎರಡು ಪಾಯಿಂಟ್ಸ್‌ನಿಂದ ಮುಂದಿದ್ದರು.

ಬಳಿಕ ತಿರುಗೇಟು ನೀಡಿದ ಚೋಚುವಾಂಗ್‌ 15–14ರ ಮುನ್ನಡೆ ಸಾಧಿಸಿದರು. ನಂತರ ಉತ್ತಮ ಸಾಮರ್ಥ್ಯ ತೋರಿದ ಭಾರತದ ಆಟಗಾರ್ತಿ ಗೇಮ್ ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌ನ ಆರಂಭದಲ್ಲೇ 6–0 ಮುನ್ನಡೆ ಗಳಿಸಿದ ಸಿಂಧು, ಬಳಿಕ ಅದೇ ಲಯದೊಂದಿಗೆ ಮುಂದುವರಿದು ಗೇಮ್‌ನೊಂದಿಗೆ ಪಂದ್ಯವನ್ನೂ ವಶಪಡಿಸಿಕೊಂಡರು.

ಶ್ರೀಕಾಂತ್ ಅವರು 21–12, 18–21, 19–21ರಿಂದ ಹಾಂಗ್‌ ಕಾಂಗ್‌ನ ಎನ್‌ಜಿ ಕಾ ಲಾಂಗ್ ಆ್ಯಗ್ನಸ್ ಎದುರು ಮಣಿದರು.

ವಿಶ್ವ ಕ್ರಮಾಂಕದಲ್ಲಿ 14ನೇ ಸ್ಥಾನದ ಲ್ಲಿರುವ ಶ್ರೀಕಾಂತ್ ಅಭಿಯಾನವೂ ಟೂರ್ನಿಯಲ್ಲಿ ಅಂತ್ಯವಾಗಿದೆ. ಬಿ ಗುಂಪಿನ ಈ ಸೆಣಸಿನಲ್ಲಿ ಭಾರತದ ಆಟಗಾರ ಮೊದಲ ಗೇಮ್ ಜಯಿಸಿ ಭರವಸೆ ಮೂಡಿಸಿದ್ದರು. ಆದರೆ ಸತತ ಎರಡು ಗೇಮ್‌ಗಳನ್ನು ತನ್ನದಾಗಿಸಿಕೊಂಡ ಆ್ಯಗ್ನಸ್‌ ಗೆಲುವಿನ ನಗೆ ಬೀರಿದರು. ಒಂದು ತಾಸು ಐದು ನಿಮಿಷಗಳಲ್ಲಿ ಪಂದ್ಯ ಮುಗಿಯಿತು.

ಇದರೊಂದಿಗೆ ಉಭಯ ಆಟಗಾರರ ನಡುವೆ ನಡೆದ ನಾಲ್ಕು ಪಂದ್ಯಗಳ ಪೈಕಿ ತಲಾ ಎರಡೆರಡು ಪಂದ್ಯ ಗೆದ್ದುಕೊಂಡಂತಾಗಿದೆ.

ಗುರುವಾರ ನಡೆದ ಪಂದ್ಯದಲ್ಲಿ ತೈವಾನ್‌ನ ವಾಂಗ್‌ ಜು ವೇ ಎದುರಿನ ಸೋಲಿನೊಂದಿಗೆ ಶ್ರೀಕಾಂತ್ ಅವರ ಸೆಮಿಫೈನಲ್ ಪ್ರವೇಶದ ಆಸೆ ಕಮರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.