ADVERTISEMENT

ಪಾನ್‌ ಆಫ್ರಿಕಾ ಮೋಟರ್‌ ರ‍್ಯಾಲಿ: ಸಂತೋಷ್‌ ಶ್ರೇಷ್ಠ ಸಾಧನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 19:45 IST
Last Updated 30 ಸೆಪ್ಟೆಂಬರ್ 2019, 19:45 IST
ಹೀರೊ ಮೋಟರ್‌ಸ್ಪೋರ್ಟ್ಸ್‌ ತಂಡದ ಸಿ.ಎಸ್‌.ಸಂತೋಷ್‌, ಗುರಿಯತ್ತ ಸಾಗಿದ ಕ್ಷಣ
ಹೀರೊ ಮೋಟರ್‌ಸ್ಪೋರ್ಟ್ಸ್‌ ತಂಡದ ಸಿ.ಎಸ್‌.ಸಂತೋಷ್‌, ಗುರಿಯತ್ತ ಸಾಗಿದ ಕ್ಷಣ   

ಬೆಂಗಳೂರು: ಕರ್ನಾಟಕದ ಸಿ.ಎಸ್‌.ಸಂತೋಷ್‌ ಅವರು ಪಾನ್‌ ಆಫ್ರಿಕಾ ಮೋಟರ್‌ ರ‍್ಯಾಲಿಯಲ್ಲಿ ಐದನೇ ಸ್ಥಾನ ಗಳಿಸಿದ್ದಾರೆ. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಮೊರೊಕ್ಕೊದ ಮೆರ್ಜೌಗಾದಲ್ಲಿ ಆರು ದಿನಗಳ ಕಾಲ ನಡೆದ 1,500 ಕಿಲೊ ಮೀಟರ್ಸ್‌ ದೂರದ ಈ ರ‍್ಯಾಲಿಯಲ್ಲಿ ಸಂತೋಷ್‌ ಅವರು ಹೀರೊ ಮೋಟರ್‌ಸ್ಪೋರ್ಟ್ಸ್‌ ಟೀಮ್‌ ರ‍್ಯಾಲಿ ತಂಡವನ್ನು ಪ್ರತಿನಿಧಿಸಿದ್ದರು.

ಐದು ಹಂತಗಳ ಈ ರ‍್ಯಾಲಿಯಲ್ಲಿ ಕನ್ನಡಿಗ ಸಂತೋಷ್‌, ಅಮೋಘ ಚಾಲನಾ ಕೌಶಲ ಮೆರೆದರು. ಅವರು ಒಟ್ಟು 17 ಗಂಟೆ 43 ನಿಮಿಷ 86 ಸೆಕೆಂಡುಗಳಲ್ಲಿ ರ‍್ಯಾಲಿ ಪೂರ್ಣಗೊಳಿಸಿದರು.

ADVERTISEMENT

‘ಇದು ನನ್ನ ಪಾಲಿನ ಸ್ಮರಣೀಯ ರ‍್ಯಾಲಿ. ಐದು ಹಂತಗಳಲ್ಲೂ ಅಮೋಘ ಚಾಲನಾ ಕೌಶಲ ತೋರಿದೆ. ಐದನೇ ಸ್ಥಾನ ಗಳಿಸಿದ್ದರಿಂದ ಅತೀವ ಖುಷಿಯಾಗಿದೆ. ಮುಂಬರುವ ರ‍್ಯಾಲಿ ಡು ಮಾರೊಕ್‌ ಮತ್ತು 2020ರಲ್ಲಿ ನಡೆಯುವ ಡಕಾರ್‌ ರ‍್ಯಾಲಿಗಳಲ್ಲಿ ಉತ್ತಮ ಸಾಮರ್ಥ್ಯ ತೋರಲು ಇದು ಪ್ರೇರಣೆಯಾಗಲಿದೆ’ ಎಂದು ಸಂತೋಷ್‌, ಖುಷಿ ವ್ಯಕ್ತಪಡಿಸಿದ್ದಾರೆ.

ರಾಡ್ರಿಗಸ್‌ಗೆ ಪ್ರಶಸ್ತಿ: ಹೀರೊ ಮೋಟರ್‌ಸ್ಪೋರ್ಟ್ಸ್‌ ತಂಡದ ಮತ್ತೊಬ್ಬ ಚಾಲಕ ಜಾವೊಕಿಮ್‌ ರಾಡ್ರಿಗಸ್‌ ಚಾಂಪಿಯನ್‌ ಆದರು.

ಅವರು ರ‍್ಯಾಲಿ ಪೂರ್ಣಗೊಳಿಸಲು 16 ಗಂಟೆ 21 ನಿಮಿಷ 43 ಸೆಕೆಂಡುಗಳನ್ನು ತೆಗೆದುಕೊಂಡರು.

ಸೋಲಾರಿಸ್‌ ರೇಸಿಂಗ್ ಟೀಮ್‌ನ ಜಾಕೊಪೊ ಸೆರುಟ್ಟಿ ಅವರು ರನ್ನರ್‌ ಅಪ್‌ ಆದರು. ಟೀಮ್‌ ಬುಹ್ಲರ್‌ನ ಸೆಬಾಸ್ಟಿಯನ್‌ ಬುಹ್ಲರ್‌ ಹಾಗೂ ಸೋಲಾರಿಸ್‌ ರೇಸಿಂಗ್‌ನ ಮತ್ತೊಬ್ಬ ಚಾಲಕ ಮೌರಿಜಿಯೊ ಜೆರಿನಿ ಅವರು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದರು.

ಐದನೇ ಹಂತದ ಸ್ಪರ್ಧೆಯಲ್ಲಿ ಜೆರಿನಿ, ಮೊದಲಿಗರಾಗಿ (57 ನಿಮಿಷ 29 ಸೆಕೆಂಡು) ಗುರಿ ಕ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.