ADVERTISEMENT

ಛಲದಂಕಮಲ್ಲರು ಇವರು...

ಜಿ.ಶಿವಕುಮಾರ
Published 14 ಅಕ್ಟೋಬರ್ 2018, 19:31 IST
Last Updated 14 ಅಕ್ಟೋಬರ್ 2018, 19:31 IST
ತಂಗವೇಲು ಮರಿಯಪ್ಪನ್
ತಂಗವೇಲು ಮರಿಯಪ್ಪನ್   

‘ಅಂಗವಿಕಲ ಎಂಬ ಕಾರಣಕ್ಕೆ ನೆರೆ ಹೊರೆಯ ಮಕ್ಕಳು ನನ್ನ ಜೊತೆ ಬೆರೆಯುತ್ತಿರಲಿಲ್ಲ. ನನ್ನನ್ನು ಕಂಡಾಗಲೆಲ್ಲಾ ಅಣಕಿಸುತ್ತಿದ್ದರು. ಆ ನೋವು,ಅವಮಾನವನ್ನು ಮರೆಯುವುದಕ್ಕಾಗಿಯೇ ಕ್ರೀಡೆಯಲ್ಲಿ ತೊಡಗಿಕೊಂಡೆ. ಇದರಲ್ಲೇ ಜಗಮೆಚ್ಚುವ ಸಾಧನೆ ಮಾಡಬೇಕೆಂದು ಪಣ ತೊಟ್ಟೆ. ಕಠಿಣ ಪರಿಶ್ರಮ ಮತ್ತು ಅರ್ಪಣಾ ಭಾವದಿಂದ ಗುರಿ ಮುಟ್ಟಿದೆ. ಈಗ ಎಲ್ಲರೂ ನನ್ನ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ನಾ ಕಂಡ ಕನಸು ಸಾಕಾರಗೊಂಡಿದೆ’....

ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿರುವ ಭಾರತದ ದೇವೇಂದ್ರ ಜಜಾರಿಯಾ ಹಿಂದೊಮ್ಮೆ ಆಡಿದ್ದ ಮಾತುಗಳಿವು.

ಬದುಕಿನ ಪಯಣದಲ್ಲಿ ಎದುರಾದ ಕಷ್ಟಗಳಿಗೆ ಅಂಜಿ ಅನೇಕರು ಜೀವವನ್ನೇ ಕಳೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಸವಾಲುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಸಾಧನೆಯ ಶಿಖರವೇರಿದವರೂ ನಮ್ಮ ನಡುವೆ ಇದ್ದಾರೆ. ‌ಜಜಾರಿಯಾ,ತಂಗವೇಲು ಮರಿಯಪ್ಪನ್‌,ದೀಪಾ ಮಲಿಕ್‌,ಕರ್ನಾಟಕದ ಎಚ್‌.ಎನ್‌.ಗಿರೀಶ್,ಶರತ್‌ ಗಾಯಕವಾಡ್‌ ಮತ್ತು ಆನಂದನ್‌ ಗುಣಶೇಖರನ್‌ ಅವರಂತಹವರು ಈ ಸಾಲಿಗೆ ಸೇರುತ್ತಾರೆ.

ADVERTISEMENT

ಇವರು ಅಂಗವೈಕಲ್ಯವನ್ನು ಎಂದಿಗೂ ಶಾಪವೆಂದು ಭಾವಿಸಲಿಲ್ಲ. ಬದುಕನ್ನು ಪ್ರೀತಿಸುತ್ತಾ,ಸಾಗಿದ ಹಾದಿಯಲ್ಲಿ ಸಾಧನೆಯ ಮೈಲುಗಲ್ಲುಗಳನ್ನು ಸ್ಥಾಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಸಾಧನೆಯ ಹಿಂದೆ ಕಣ್ಣೀರ ಕಥೆಗಳಿವೆ.ಅವು ಹಲವರಿಗೆ ಸ್ಫೂರ್ತಿಯ ಸೆಲೆಯಾಗಿ ಪರಿಣಮಿಸಿವೆ.

ಹೋದ ವಾರ ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್‌ ಪ್ಯಾರಾ ಕ್ರೀಡಾಕೂಟದಲ್ಲಿ ಕರ್ನಾಟಕದ ‘ಬ್ಲೇಡ್‌ ರನ್ನರ್‌’ ಆನಂದನ್‌ ಗುಣಶೇಖರನ್‌ ಕಂಚಿನ ಸಾಧನೆ ಮಾಡಿದ್ದಾರೆ.

ಭಾರತೀಯ ಸೇನೆಯಲ್ಲಿ ಲೈನ್‌ ಆಫ್‌ ಕಂಟ್ರೋಲ್‌ (ಎಲ್‌ಒಸಿ) ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಆನಂದನ್‌ ಗುಣಶೇಖರನ್‌ ಪಾಲಿಗೆ 2008ರ ಜೂನ್‌ 4 ಕರಾಳ ದಿನ. ಅಂದು ಜಮ್ಮು ಮತ್ತು ಕಾಶ್ಮೀರದ ಕುಪವಾರ ಜಿಲ್ಲೆಯ ತುಂಬಾ ಪ್ರದೇಶದಲ್ಲಿ ಆನಂದ್‌ ಪಹರೆಯಲ್ಲಿದ್ದರು. ಆ ವೇಳೆ ನೆಲಬಾಂಬ್‌ ಸ್ಫೋಟಿಸಿತ್ತು. ಆ ದುರ್ಘಟನೆಯಲ್ಲಿ ಆನಂದನ್‌ ಎಡಗಾಲು ಕಳೆದುಕೊಂಡರು. ಶಸ್ತ್ರ ಚಿಕಿತ್ಸೆಯ ವೇಳೆ ವೈದ್ಯರು ಅವರ ಮಂಡಿಯ ಕೆಳಭಾಗವನ್ನು ಕತ್ತರಿಸಿದ್ದರು. ಬದುಕು ದುರಂತಮಯವಾಯಿತಲ್ಲ ಎಂದು ಕೊರಗುತ್ತಾ ಕುಳಿತ್ತಿದ್ದ ಸಮಯದಲ್ಲಿ ಆನಂದನ್‌ ಕೈಗೆ ಪ್ರಸಿದ್ಧ ‘ಬ್ಲೇಡ್‌ ರನ್ನರ್‌’ ಆಸ್ಕರ್‌ ಪಿಸ್ಟೋರಿಯಸ್‌ ಅವರ ಸಾಧನೆಯ ಕುರಿತ ಪುಸ್ತಕ ಸಿಕ್ಕಿತ್ತು. ಅದನ್ನು ಓದಿದ ಬಳಿಕ ಅವರಲ್ಲಿ ಸಾಧನೆಯ ಛಲ ಮೂಡಿತು.

ಅಥ್ಲೆಟಿಕ್ಸ್‌ನಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಆನಂದನ್‌,ಪುಣೆಯ ಆರ್ಮಿ ಸ್ಪೋರ್ಟ್ಸ್‌ ಇನ್ಸ್‌ಟಿಟ್ಯೂಟ್‌ನಲ್ಲಿ ವಿಶೇಷ ತರಬೇತಿ ಪಡೆದರು. 2012ರಲ್ಲಿ ನಡೆದಿದ್ದ ಮುಂಬೈ ಮ್ಯಾರಥಾನ್‌ನಲ್ಲಿ (2.5 ಕಿಲೊ ಮೀಟರ್ಸ್‌) ಮರದ ಕಾಲು ಅಳವಡಿಸಿಕೊಂಡು ಓಡಿ ಮೊದಲ ಸ್ಥಾನ ಗಳಿಸಿದ್ದರು. ಅಲ್ಲಿಂದ ಅವರ ಸಾಧನೆಯ ಪಯಣ ಆರಂಭವಾಯಿತು. 2015ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ವಿಶ್ವ ಮಿಲಿಟರಿ ಕೂಟದ 200 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದ ಆನಂದನ್,2016ರಲ್ಲಿ ನಡೆದಿದ್ದ ಏಷ್ಯಾ ಒಸೀನಿಯಾ ಕೂಟದ ಟಿ–42/44/46/47 ವಿಭಾಗದ 400 ಮೀಟರ್ಸ್‌ ಓಟದಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದ್ದರು. 2017ರಲ್ಲಿ ನಡೆದಿದ್ದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನ 400 ಮೀಟರ್ಸ್‌ ಓಟದಲ್ಲೂ ಅವರಿಂದ ಬೆಳ್ಳಿಯ ಸಾಧನೆ ಮೂಡಿಬಂದಿತ್ತು.

‘ಮರದ ಕಾಲು ಅಳವಡಿಸಿಕೊಂಡು ಮನೆಗೆ ಹೋದಾಗ ಎಲ್ಲರೂ ನನ್ನ ಸ್ಥಿತಿ ನೋಡಿ ಕಣ್ಣೀರಿಟ್ಟಿದ್ದರು. ಸೇನೆಯ ಸಹವಾಸ ಬಿಟ್ಟು ಮನೆಯಲ್ಲಿ ಇದ್ದುಬಿಡು ಎಂದು ಒತ್ತಾಯಿಸಿದರು.ಅವರ ಮಾತಿಗೆ ನಾನು ಕಿವಿಗೊಡಲಿಲ್ಲ. ಅಥ್ಲೆಟಿಕ್ಸ್‌ನಲ್ಲಿ ಎತ್ತರದ ಸಾಧನೆ ಮಾಡುವ ಕನಸು ಎಡಬಿಡದೆ ಕಾಡುತ್ತಿತ್ತು. ಅಂತರ್ಜಾಲದಲ್ಲಿ ಬ್ಲೇಡ್‌ ರನ್ನರ್‌ಗಳ ಬಗ್ಗೆ ಓದಿ ತಿಳಿದುಕೊಂಡೆ. ಮೇಲಧಿಕಾರಿಗಳು 2014ರಲ್ಲಿ ಐಸ್‌ಲ್ಯಾಂಡ್‌ನಿಂದ ‘ಬ್ಲೇಡ್‌’ ತರಿಸಿಕೊಟ್ಟರು.ಅದನ್ನು ಅಳವಡಿಸಿಕೊಂಡು ಎರಡು ತಿಂಗಳು ಸತತ ಅಭ್ಯಾಸ ನಡೆಸಿದೆ. ಬಳಿಕ ಮಲೇಷ್ಯಾದಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಗ್ರ್ಯಾನ್‌ ಪ್ರಿ ಕೂಟದ 100 ಮತ್ತು 200 ಮೀಟರ್ಸ್‌ ಓಟಗಳಲ್ಲಿ ಭಾಗವಹಿಸಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಗೆದ್ದೆ. ಆ ಸಾಧನೆ ನನ್ನಲ್ಲಿ ಹೊಸ ಹುರು‍ಪು ಮೂಡುವಂತೆ ಮಾಡಿತ್ತು’ ಎಂದು ಆನಂದನ್‌ ವೆಬ್‌ಸೈಟ್‌ ಸಂದರ್ಶನವೊಂದರಲ್ಲಿ ನೆನಪಿನ ಪುಟಗಳನ್ನು ತಿರುವಿ ಹಾಕಿದ್ದರು.

2016ರ ರಿಯೊ ಪ್ಯಾರಾಲಿಂಪಿಕ್ಸ್‌ನ ಟಿ–42 ವಿಭಾಗದ ಹೈಜಂಪ್ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮಾಡಿದ್ದ ಮರಿಯಪ್ಪನ್‌ ತಂಗವೇಲು ಅವರದ್ದು ಮತ್ತೊಂದು ಬಗೆಯ ಮನಮಿಡಿಯುವ ಕಥೆ. ಮರಿಯಪ್ಪನ್‌ಗೆ ಆಗ ಐದು ವರ್ಷ ವಯಸ್ಸು. ರಸ್ತೆಯಲ್ಲಿ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಅವರ ಬಲಗಾಲು ಬಸ್‌ನ ಚಕ್ರದಡಿ ಸಿಲುಕಿತ್ತು. ಚಿಕಿತ್ಸೆ ಪಡೆದರೂ ಪ್ರಯೋಜನವಾಗಲಿಲ್ಲ. ಅಂಗ ವೈಕಲ್ಯಕ್ಕೆ ಸೆಡ್ಡು ಹೊಡೆದ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕೂಟಗಳಲ್ಲಿ ಪದಕಗಳನ್ನು ಗೆದ್ದು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದಾರೆ. 2017ರಲ್ಲಿ ಅವರಿಗೆ ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿಗಳೂ ಸಂದಿವೆ.

**
ದೇವೇಂದ್ರ ಜಜಾರಿಯಾ

ಆ ಹುಡುಗನಿಗೆ ಆಗಿನ್ನೂ ಎಂಟರ ಹರೆಯ. ಅದೊಂದು ದಿನ ಮನೆಯ ಹತ್ತಿರವಿದ್ದ ಮರವೊಂದನ್ನು ಏರಿ ತನಗರಿವಿಲ್ಲದಂತೆ ವಿದ್ಯುತ್‌ ತಂತಿಯನ್ನು ಸ್ಪರ್ಶಿಸಿಬಿಟ್ಟ. ಪರಿಣಾಮ ಆತನ ಎಡಗೈ ಸ್ವಾಧೀನ ಕಳೆದುಕೊಂಡಿತು. ಶಸ್ತ್ರ ಚಿಕಿತ್ಸೆ ನಡೆಸಿದ್ದ ವೈದ್ಯರು ಮುಂಗೈ ಕತ್ತರಿಸಿದ್ದರು. ಇದರಿಂದ ಎದೆಗುಂದದೆ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಿದ. ಪ್ರತಿಷ್ಠಿತ ರಾಜೀವ್‌ಗಾಂಧಿ ಖೇಲ್‌ ರತ್ನ ಪುರಸ್ಕಾರ ಪಡೆದ ಭಾರತದ ಮೊದಲ ಪ್ಯಾರಾ ಅಥ್ಲೀಟ್‌ ಎಂಬ ಹಿರಿಮೆ ತನ್ನದಾಗಿಸಿಕೊಂಡ. ಆ ಸಾಧಕನೇ ರಾಜಸ್ಥಾನದ ದೇವೇಂದ್ರ ಜಜಾರಿಯಾ.

ಶಾಲಾ ಕ್ರೀಡಾಕೂಟವೊಂದರ ವೇಳೆ ಹಿರಿಯ ಕೋಚ್‌ ಆರ್‌.ಡಿ.ಸಿಂಗ್‌ ಅವರು ದೇವೇಂದ್ರ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಸಾಣೆ ಹಿಡಿಯಲು ನಿರ್ಧರಿಸಿದರು. ಸಿಂಗ್‌ ಅವರ ಮಾರ್ಗದರ್ಶನದಲ್ಲಿ ಹಲವು ಕೌಶಲಗಳನ್ನು ಕಲಿತ ಜಜಾರಿಯಾ, ಪ್ಯಾರಾಲಿಂಪಿಕ್ಸ್‌ನ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದು ಹೊಸ ಭಾಷ್ಯ ಬರೆದರು.ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್‌ ಎಂಬ ಹಿರಿಮೆಗೆ ಭಾಜನರಾದರು‌. 2004ರ ಅಥೆನ್ಸ್‌ ಕೂಟದಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದ ಅವರು 2016ರ ರಿಯೊ ಕೂಟದಲ್ಲಿ 63.97 ಮೀಟರ್ಸ್‌ ಸಾಮರ್ಥ್ಯ ತೋರಿ ತಮ್ಮದೇ ದಾಖಲೆ ಉತ್ತಮಪಡಿಸಿಕೊಂಡಿದ್ದರು. ಅವರಿಗೆ 2004ರಲ್ಲಿ ಅರ್ಜುನ, 2012ರಲ್ಲಿ ಪದ್ಮಶ್ರೀ ಮತ್ತು 2017ರಲ್ಲಿ ಖೇಲ್‌ ರತ್ನ ಗೌರವಗಳು ಒಲಿದಿದ್ದವು.

**

ವರುಣ್‌ ಸಿಂಗ್‌ ಭಾಟಿ

ವರುಣ್‌, ಆರು ತಿಂಗಳ ಮಗುವಾಗಿದ್ದಾಗ ಪೋಲಿಯೊ ಲಸಿಕೆ ಹಾಕಿಸಲು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ವೈದ್ಯರು ಪೋಲಿಯೊ ಬದಲು ಇನ್ಯಾವುದೋ ಚುಚ್ಚುಮದ್ದು ನೀಡಿದ್ದರಿಂದ ವರುಣ್‌ ಎಡಗಾಲು ಊನವಾಗಿತ್ತು. ಇದರಿಂದ ಅವರು ಅಂಜಲಿಲ್ಲ. ಶಾಲಾ ದಿನಗಳಲ್ಲಿ ಬ್ಯಾಸ್ಕೆಟ್‌ಬಾಲ್‌ ಆಡುತ್ತಿದ್ದ ಅವರು ಕ್ರಮೇಣ ಹೈಜಂಪ್‌ನತ್ತ ಆಕರ್ಷಿತರಾದರು. 2014ರ ಏಷ್ಯನ್‌ ಪ್ಯಾರಾ ಕೂಟದ ಟಿ–42 ವಿಭಾಗದಲ್ಲಿ ಐದನೇ ಸ್ಥಾನ ಗಳಿಸಿ ಗಮನ ಸೆಳೆದರು. ನಂತರ ಹಲವು ಅಂತರರಾಷ್ಟ್ರೀಯ ಕೂಟಗಳಲ್ಲಿ ಪದಕಗಳನ್ನು ಗೆಲ್ಲುತ್ತಾ ಸಾಗಿದ ವರುಣ್‌,2016ರ ಪ್ಯಾರಾಲಿಂಪಿಕ್ಸ್‌ನಲ್ಲಿ ಹೆಜ್ಜೆಗುರುತು ಮೂಡಿಸಿದರು. 1.86 ಮೀಟರ್ಸ್‌ ಸಾಮರ್ಥ್ಯ ತೋರಿ ಕಂಚಿನ ಪದಕ ಜಯಿಸಿದ್ದರು. 2017ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲೂ ಕಂಚಿನ ಸಾಧನೆ ಮಾಡಿದರು.

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಮಹಿಳಾ ಅಥ್ಲೀಟ್‌ ದೀಪಾ ಮಲಿಕ್‌,ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಗಮನ ಸೆಳೆದಿದ್ದ ಮಧ್ಯಮ ಅಂತರದ ಅಂಧ ಓಟಗಾರ ಅಂಕುರ್‌ ಧಾಮಾ, ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಡಿಸ್ಕಸ್‌ ಥ್ರೋ ಸ್ಪರ್ಧೆಯ ಎಫ್‌–55 ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಹಿರಿಮೆ ಹೊಂದಿರುವ ಕರಮ್‌ಜ್ಯೋತಿ ದಲಾಲ್‌ ಅವರ ಯಶೋಗಾಥೆಗಳೂ ಎಲ್ಲರಿಗೂ ಪ್ರೇರಣೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.