ADVERTISEMENT

ಪ್ರೊ ಕಬಡ್ಡಿ ಲೀಗ್‌: ಅಭಿಷೇಕ್‌ ಆಟದಲ್ಲಿ ಅರಳಿದ ಜಯ

ಮುಂಬಾ ಎದುರು ಫಾರ್ಚೂನ್‌ಜೈಂಟ್ಸ್‌ಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 18:15 IST
Last Updated 22 ಸೆಪ್ಟೆಂಬರ್ 2019, 18:15 IST
ಯು ಮುಂಬಾ ತಂಡದ ಅಭಿಷೇಕ್‌ ಸಿಂಗ್‌ (ಕಪ್ಪು ಪೋಷಾಕು) ಗುಜರಾತ್‌ ಆವರಣದಲ್ಲಿ ಪಾಯಿಂಟ್‌ ಗಳಿಸಲು ಪ್ರಯತ್ನಿಸಿದರು
ಯು ಮುಂಬಾ ತಂಡದ ಅಭಿಷೇಕ್‌ ಸಿಂಗ್‌ (ಕಪ್ಪು ಪೋಷಾಕು) ಗುಜರಾತ್‌ ಆವರಣದಲ್ಲಿ ಪಾಯಿಂಟ್‌ ಗಳಿಸಲು ಪ್ರಯತ್ನಿಸಿದರು   

ಜೈಪುರ: ಮಿಂಚಿನ ವೇಗದ ರೇಡ್‌ಗಳ ಮೂಲಕ ಎದುರಾಳಿ ತಂಡದ ರಕ್ಷಣಾಕೋಟೆಯನ್ನು ಧ್ವಂಸಗೊಳಿಸಿದ ಅಭಿಷೇಕ್‌ ಸಿಂಗ್‌ ಅವರು ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳನ್ನು ರಂಜಿಸಿದರು.

ಅಭಿಷೇಕ್‌ ಅವರ ಸೂಪರ್‌–10 ಸಾಧನೆಯ ಬಲದಿಂದ ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್‌ ಏಳನೇ ಆವೃತ್ತಿಯ ಪಂದ್ಯದಲ್ಲಿ 31–25 ಪಾಯಿಂಟ್ಸ್‌ನಿಂದ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ಈ ಬಾರಿ ಪ್ಲೇ ಆಫ್‌ ಪ್ರವೇಶಿಸುವ ಕನಸನ್ನು ಜೀವಂತವಾಗಿಟ್ಟುಕೊಂಡಿತು.

22 ಬಾರಿ ದಾಳಿಗಿಳಿದಿದ್ದ ಅಭಿಷೇಕ್‌ 10 ಟಚ್‌ ಮತ್ತು ಒಂದು ಬೋನಸ್‌ ಪಾಯಿಂಟ್ ಗಳಿಸಿ ಗಮನ ಸೆಳೆದರು.

ADVERTISEMENT

ರಕ್ಷಣಾ ವಿಭಾಗದಲ್ಲಿ ಸುರಿಂದರ್‌ ಸಿಂಗ್‌ ಮತ್ತು ಹರೇಂದ್ರ ಕುಮಾರ್‌ ಮಿಂಚಿದರು. ಇವರು ಕ್ರಮವಾಗಿ ನಾಲ್ಕು ಮತ್ತು ಮೂರು ಪಾಯಿಂಟ್ಸ್‌ ಹೆಕ್ಕಿದರು. ಸಂದೀಪ್‌ ನರ್ವಾಲ್‌ (3) ಕೂಡಾ ಪರಿಣಾಮಕಾರಿಯಾಗಿ ಆಡಿದರು.

ಗುಜರಾತ್‌ ಪರ ದಾಳಿಗಿಳಿದ ನಾಯಕ ರೋಹಿತ್‌ ಗುಲಿಯಾ ಮೊದಲ ರೇಡ್‌ನಲ್ಲೇ ಪಾಯಿಂಟ್‌ ಗಳಿಸಿದರು. ನಂತರ ಮುಂಬಾ ತಂಡದ ಆಟಗಾರರು ಮಿಂಚಿದರು. ನಾಲ್ಕನೇ ನಿಮಿಷದ ವೇಳೆಗೆ ಉಭಯ ತಂಡಗಳು 2–2ರಿಂದ ಸಮಬಲ ಹೊಂದಿದ್ದವು. ನಂತರ ಮುಂಬಾ ಮೇಲುಗೈ ಸಾಧಿಸಿತು. ಮೊದಲಾರ್ಧದ ಆಟ ಮುಗಿಯಲು ಎಂಟು ನಿಮಿಷಗಳು ಬಾಕಿ ಇದ್ದಾಗ ಎದುರಾಳಿ ತಂಡದ ಆವರಣ ಖಾಲಿ ಮಾಡಿದ ಮುಂಬಾ 11–6 ಮುನ್ನಡೆ ಪಡೆಯಿತು. ನಂತರ ಗುಜರಾತ್‌ ತಂಡ ತಿರುಗೇಟು ನೀಡಿತು. 17ನೇ ನಿಮಿಷದಲ್ಲಿ ಸೂಪರ್‌ ರೇಡ್‌ ಮಾಡಿದ ರೋಹಿತ್‌ ಗುಲಿಯಾ ತಂಡಕ್ಕೆ 16–14 ಮುನ್ನಡೆ ತಂದುಕೊಟ್ಟರು.

ದ್ವಿತೀಯಾರ್ಧದ ಆರಂಭದಲ್ಲಿ ಉಭಯ ತಂಡಗಳು ಸಮಬಲದಿಂದ ಸೆಣಸಿದವು. ನಂತರ ಗುಣಮಟ್ಟದ ಸಾಮರ್ಥ್ಯ ತೋರಿದ ಮುಂಬಾ ಆಟ ಗಾರರು ಗೆಲುವಿನ ತೋರಣ ಕಟ್ಟಿದರು.

ರೋಚಕ ಹೋರಾಟ ಕಂಡುಬಂದ ದಿನದ ಇನ್ನೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್‌ 41–40 ಪಾಯಿಂಟ್ಸ್‌ನಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಮಣಿಸಿತು. ಬೆಂಗಾಲ್‌ ತಂಡದ ಮಣಿಂದರ್‌ ಸಿಂಗ್‌ ಮತ್ತೊಮ್ಮೆ ಮಿಂಚಿದರು. 19 ರೇಡಿಂಗ್‌ ಪಾಯಿಂಟ್ಸ್‌ ಕಲೆಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.