ADVERTISEMENT

ರಾಷ್ಟ್ರೀಯ ಕುಸ್ತಿ: ರೋಹಿತ್, ಪ್ರವೀಣ್‌ ಚಾಂಪಿಯನ್‌

ರೈಲ್ವೇಸ್‌ಗೆ ಸಮಗ್ರ ಪ್ರಶಸ್ತಿ; ಸರ್ವಿಸಸ್‌ ರನ್ನರ್ ಅಪ್: ವಿಶಾಲ್‌, ರಾಹುಲ್‌ಗೆ ಚಿನ್ನದ ಪದಕ

ಪಿಟಿಐ
Published 24 ಜನವರಿ 2021, 15:44 IST
Last Updated 24 ಜನವರಿ 2021, 15:44 IST
ವಿಶಾಲ್ ಕಳಿರಾಮನ್ –ಟ್ವಿಟರ್ ಚಿತ್ರ
ವಿಶಾಲ್ ಕಳಿರಾಮನ್ –ಟ್ವಿಟರ್ ಚಿತ್ರ   

ನೋಯ್ಡಾ: ಹರಿಯಾಣದ ರೋಹಿತ್, ‍ಪುರುಷರ ರಾಷ್ಟ್ರೀಯ ಫ್ರೀಸ್ಟೈಲ್‌ ಕುಸ್ತಿ ಚಾಂಪಿಯನ್‌ಷಿಪ್‌ನ 65 ಕೆಜಿ ವಿಭಾಗದಲ್ಲಿ ಚಾಂಪಿಯನ್ ಆದರು. 86 ಕೆಜಿ ವಿಭಾಗದ ಪ್ರಶಸ್ತಿ ದೆಹಲಿಯ ಪ್ರವೀಣ್ ಚಾಹರ್ ಅವರ ಮುಡಿಗೇರಿತು. ಭಾನುವಾರ ಮುಕ್ತಾಯಗೊಂಡ ಚಾಂಪಿಯನ್‌ಷಿಪ್‌ನಲ್ಲಿ ಶ್ರವಣ್‌ ಅವರನ್ನು ಮಣಿಸಿ ರೋಹಿತ್ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು. ಅಮಿತ್ ಮತ್ತು ಅನುಜ್ ಕಂಚಿನ ಪದಕ ಗಳಿಸಿದರು.

70 ಕೆಜಿ ವಿಭಾಗದಲ್ಲಿ ರೈಲ್ವೇಸ್‌ ವಿಶಾಲ್ ಕಳಿರಾಮನ್ ಚಿನ್ನದ ಪದಕ ಗೆದ್ದುಕೊಂಡರು. ರೈಲ್ವೇಸ್‌ನ ಪ್ರವೀಣ್ ವಿರುದ್ಧ ಅವರು ಜಯ ಗಳಿಸಿದರು. ಕರಣ್ ಮತ್ತು ಸುಶೀಲ್ ಕಂಚಿನ ಪದಕ ಗಳಿಸಿದರು. 79 ಕೆಜಿ ವಿಭಾಗದ ಚಿನ್ನ ರೈಲ್ವೇಸ್‌ನ ರಾಹುಲ್ ರಾಠಿ ಪಾಲಾಯಿತು. ತಮ್ಮದೇ ತಂಡದ ಪೈಲ್ವಾನ್ ಎದುರು ಅವರು ಗೆದ್ದಿದ್ದರು. ಸರ್ವಿಸಸ್‌ನ ವೀರ್‌ ದೇವ್ ಗುಲಿಯಾ ಮತ್ತು ಪ್ರದೀಪ್ ಕಂಚಿನ ಪದಕ ಗಳಿಸಿದರು.

ಮಹಾರಾಷ್ಟ್ರದ ವಿಠಲ್ ವಿರುದ್ಧ ಗೆಲುವು ಸಾಧಿಸಿ 86 ಕೆಜಿ ವಿಭಾಗದಲ್ಲಿ ಪ್ರವೀಣ್ ಚಾಹರ್ ಚಾಂಪಿಯನ್ ಆದರು. ಕಂಚಿನ ಪದಕ ರೈಲ್ವೇಸ್‌ನ ದೀಪಕ್ ಮತ್ತು ಸರ್ವಿಸಸ್‌ನ ಸಂಜೀತ್‌ ಪಾಲಾಯಿತು. ಸರ್ವಿಸಸ್‌ನ ಮೋನು ವಿರುದ್ಧ ಗೆದ್ದ ರೈಲ್ವೇಸ್‌ನ ಸತ್ಯಾವರ್ತ್ ಕಾಡಿಯನ್ 97 ಕೆಜಿ ವಿಭಾಗದ ಚಿನ್ನ ತಮ್ಮದಾಗಿಸಿಕೊಂಡರು. ಹರಿಯಾಣದ ಸುಮಿತ್ ಗುಲಿಯಾ ಮತ್ತು ದೆಹಲಿಯ ಆಶಿಶ್‌ಗೆ ಕಂಚಿನ ಪದಕ ಒಲಿಯಿತು.

ADVERTISEMENT

192 ಪಾಯಿಂಟ್ ಕಲೆ ಹಾಕಿದ ರೈಲ್ವೇಸ್ ಸಮಗ್ರ ಪ್ರಶಸ್ತಿ ಗಳಿಸಿದರೆ 162 ಪಾಯಿಂಟ್‌ಗಳೊಂದಿಗೆ ಸರ್ವಿಸಸ್‌ ರನ್ನರ್ ಅಪ್ ಆಯಿತು. ಹರಿಯಾಣ (138 ಪಾಯಿಂಟ್ಸ್‌) ಮೂರನೇ ಸ್ಥಾನ ಗಳಿಸಿತು. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿರುವ ಬಜರಂಗ್ ಪೂನಿಯಾ (65 ಕೆಜಿ) ಮತ್ತು ದೀಪಕ್ ಪೂನಿಯಾ (86 ಕೆಜಿ) ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರಲಿಲ್ಲ.

ಫೆಡರೇಷನ್ ಬಳಿ ವಿವರಣೆ ಕೇಳಿದ ಸಾಯ್‌

ಚಾಂಪಿಯನ್‌ಷಿಪ್‌ ಸಂದರ್ಭದಲ್ಲಿ ಕೋವಿಡ್‌–19 ನಿಯಮಾವಳಿ ಉಲ್ಲಂಘನೆ ಆಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕುಸ್ತಿ ಫೆಡರೇಷನ್‌ ಬಳಿ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ವಿವರಣೆ ಕೇಳಿದೆ. ‘ಸ್ಪರ್ಧೆಯ ಸಂದರ್ಭದಲ್ಲಿ ಎಸ್‌ಒಪಿಯನ್ನು ಸಮರ್ಪಕವಾಗಿ ಜಾರಿಗೊಳಿಸಲಾಗಿದೆಯೇ ಇಲ್ಲವೇ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಕುಸ್ತಿ ಫೆಡರೇಷನ್‌ಗೆ ಸೂಚಿಸಲಾಗಿದೆ’ ಎಂದು ಸಾಯ್ ಮಹಾನಿರ್ದೇಶಕ ಸಂದೀಪ್ ಪ್ರಧಾನ್ ತಿಳಿಸಿದ್ದಾರೆ.

ಎಲ್ಲ ಕ್ರೀಡಾ ಫೆಡರೇಷನ್‌ಗಳು ಕೋವಿಡ್‌–19 ನಿಯಮಾವಳಿಗಳನ್ನು ಸರಿಯಾಗಿ ಜಾರಿಗೆ ತರುವಂತೆ ನೋಡಿಕೊಳ್ಳಬೇಕು ಎಂದು ಭಾರತ ಒಲಿಂಪಿಕ್ ಸಂಸ್ಥೆಗೆ ಸಾಯ್ ಸೂಚಿಸಿದೆ. ಎರಡು ದಿನ ನಡೆದ ಕುಸ್ತಿ ಚಾಂಪಿಯನ್‌ಷಿಪ್‌ ಮೂಲಕ ಕೋವಿಡ್‌ ಕಾಲದಲ್ಲಿ ಭಾರತದಲ್ಲಿ ಇದೇ ಮೊದಲ ಬಾರಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಒಂದು ನಡೆದಂತೆ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.