ADVERTISEMENT

ಸಿಂಗಪುರ ಓಪನ್‌ ಬ್ಯಾಡ್ಮಿಂಟನ್‌: ಸಿಂಧು, ಸೈನಾ ಮೇಲೆ ಗಮನ

ಇಂದಿನಿಂದ ಪಂದ್ಯಗಳು ಆರಂಭ

ಪಿಟಿಐ
Published 8 ಏಪ್ರಿಲ್ 2019, 16:02 IST
Last Updated 8 ಏಪ್ರಿಲ್ 2019, 16:02 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ಸಿಂಗಪುರ: ಭಾರತದ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್‌ ಮಂಗಳವಾರದಿಂದ ನಡೆಯುವ ಸಿಂಗಪುರ ಓಪನ್‌ನಲ್ಲಿ ಪ್ರಶಸ್ತಿ ಜಯಿಸುವತ್ತ ಚಿತ್ತ ನೆಟ್ಟಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ಸಾಧನೆ ಮಾಡಿರುವ ಸಿಂಧು, ಈ ಋತುವಿನಲ್ಲಿ ಸತತವಾಗಿ ನಿರಾಸೆ ಕಂಡಿದ್ದು ಇಲ್ಲಿ ಪ್ರಶಸ್ತಿ ಗೆದ್ದು ಹಿಂದಿನ ಕಹಿ ಮರೆಯಲು ಕಾತರರಾಗಿದ್ದಾರೆ.

ಹೋದ ವರ್ಷ ನಡೆದಿದ್ದ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದ ಸಿಂಧು, ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದರು. ಮಲೇಷ್ಯಾ ಓಪನ್‌ನಲ್ಲಿ ಎರಡನೇ ಸುತ್ತಿನಲ್ಲಿ ಸೋತಿದ್ದ ಭಾರತದ ಆಟಗಾರ್ತಿ, ಇಂಡಿಯಾ ಓಪನ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದರು.

ADVERTISEMENT

ಸಿಂಗ‍ಪುರ ಓಪನ್‌ನಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ಸಿಂಧು, ಮೊದಲ ಸುತ್ತಿನಲ್ಲಿ ಇಂಡೊನೇಷ್ಯಾದ ಲಿನ್ನಿ ಅಲೆಕ್ಸಾಂಡ್ರ ಮೆನಾಕಿ ಎದುರು ಆಡಲಿದ್ದಾರೆ.

ಸೈನಾ ನೆಹ್ವಾಲ್ ಕೂಡಾ ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದಾರೆ. ಟೂರ್ನಿಯಲ್ಲಿ ಆರನೇ ಶ್ರೇಯಾಂಕ ಹೊಂದಿರುವ ಸೈನಾ ಆರಂಭಿಕ ಸುತ್ತಿನಲ್ಲಿ ಡೆನ್ಮಾರ್ಕ್‌ನ ಲಿನೆ ಹೊಜಮಾರ್ಕ್‌ ಜಾಯೆರ್ಸ್‌ಫೆಡ್ತ್‌ ವಿರುದ್ಧ ಹೋರಾಡಲಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿರುವ ಶ್ರೀಕಾಂತ್, ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದ ಆಟಗಾರನ ವಿರುದ್ಧ ಸೆಣಸಲಿದ್ದಾರೆ.

ಎಚ್‌.ಎಸ್‌.ಪ್ರಣಯ್‌, ಫ್ರಾನ್ಸ್‌ನ ಬ್ರೈಸ್‌ ಲೆವರ್ಡೆಜ್‌ ಎದುರೂ, ಬಿ.ಸಾಯಿ ಪ್ರಣೀತ್‌, ಜಪಾನ್‌ನ ಕೆಂಟೊ ಮೊಮೊಟಾ ಮೇಲೂ ಪೈಪೋಟಿ ನಡೆಸಲಿದ್ದಾರೆ.

ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ–ಎನ್‌.ಸಿಕ್ಕಿ ರೆಡ್ಡಿ, ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ–ಬಿ.ಸುಮೀತ್‌ ರೆಡ್ಡಿ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್‌ ಜೆರಿ ಚೋಪ್ರಾ–ಎನ್‌.ಸಿಕ್ಕಿ ರೆಡ್ಡಿ ಅವರು ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.