ADVERTISEMENT

ಕುಸ್ತಿ: ಸೋನಮ್‌ಗೆ ಮಣಿದ ಸಾಕ್ಷಿ

ಪಿಟಿಐ
Published 26 ಫೆಬ್ರುವರಿ 2020, 19:22 IST
Last Updated 26 ಫೆಬ್ರುವರಿ 2020, 19:22 IST
ಸೋನಮ್‌ ಮಲಿಕ್‌ (ಕೆಂಪು ಪೋಷಾಕು)
ಸೋನಮ್‌ ಮಲಿಕ್‌ (ಕೆಂಪು ಪೋಷಾಕು)   

ಲಖನೌ : ಯುವ ಪೈಲ್ವಾನಳಾದ ಸೋನಮ್‌ ಮಲಿಕ್‌, ಒಲಿಂಪಿಕ್‌ ಪದಕ ವಿಜೇತೆಸಾಕ್ಷಿ ಮಲಿಕ್‌ ವಿರುದ್ಧ ಸತತ ಎರಡನೇ ಗೆಲುವನ್ನು ದಾಖಲಿಸಿ ಮುಂದಿನ ತಿಂಗಳ ಒಲಿಂಪಿಕ್ಸ್‌ ಕುಸ್ತಿ ಕ್ವಾಲಿಫೈಯರ್ಸ್‌ನಲ್ಲಿ ಭಾಗವಹಿಸುವ ಭಾರತ ತಂಡದಲ್ಲಿ ಸ್ಥಾನ ಪಡೆದರು.

ಬುಧವಾರ ನಡೆದ ಟ್ರಯಲ್ಸ್‌ನಲ್ಲಿ ಸೋನಮ್‌ ಎದುರಾಳಿಯನ್ನು ‘ಚಿತ್‌’ ಮಾಡಿ ಗೆಲುವನ್ನು ದಾಖಲಿಸಿದರು. ಸೆಣಸಾಟ ಮುಗಿಯಲು ಒಂದು ನಿಮಿಷ ಉಳಿದಿರುವಾಗ 1–2 ರಿಂದ ಹಿಂದೆಯಿದ್ದರೂ ಸೋನಮ್‌ ಎದೆಗುಂದಲಿಲ್ಲ.

ಏಷ್ಯನ್‌ ಒಲಿಂಪಿಕ್‌ ಕ್ವಾಲಿಫೈಯರ್ಸ್‌ ಮಾರ್ಚ್‌ 27 ರಿಂದ 29ರವರೆಗೆ ಕಿರ್ಗಿಸ್ತಾನದ ಬಿಷೆಕ್‌ನಲ್ಲಿ ನಡೆಯಲಿದೆ. ಇದರಲ್ಲಿ ಫೈನಲ್‌ ಪ್ರವೇಶಿಸಿದವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆಯುತ್ತಾರೆ.

ADVERTISEMENT

‌ಇತ್ತೀಚೆಗೆ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಗಮನಾರ್ಹ ಸಾಧನೆ ತೋರದ ಕಾರಣ ಮರಳಿ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುವಂತೆ ಸೋನಮ್‌ ಅವರಿಗೆ ಸೂಚಿಸಲಾಗಿತ್ತು.

ಮೊದಲ ಸೆಣಸಾಟದಲ್ಲಿ ರಾಧಿಕಾ ವಿರುದ್ಧ ಜಯಗಳಿಸಿದ್ದ 18 ವರ್ಷದ ಸೋನಮ್‌, ಎದುರಾಳಿಯ ಖ್ಯಾತಿಗೆ ಕ್ಯಾರೇ ಎನ್ನದೇ ಮುಂದುವರಿದರು. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಸ್ವರ್ಣ ಗೆದ್ದ ಸರಿತಾ ಮೊರ್‌ ಅವರನ್ನೂ (3–1) ಮಣಿಸಿದ ಸೋನಮ್‌, ಅಂತಿಮವಾಗಿರಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸಾಕ್ಷಿ ಮೇಲೆಯೂ ಗೆಲುವಿನ ಓಟ ಮುಂದುವರಿಸಿದರು. 62 ಕೆ.ಜಿ. ವಿಭಾಗದಲ್ಲಿ ಒಂಬತ್ತು ಮಂದಿ ಕುಸ್ತಿಪಟುಗಳು ಕಣಕ್ಕಿಳಿದಿದ್ದರು. ಇವರಲ್ಲಿ 2018ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದ ಪೂಜಾ ಧಂಡ ಸಹ ಒಳಗೊಂಡಿದ್ದರು.

76 ಕೆ.ಜಿ. ವಿಭಾಗದ ಟ್ರಯಲ್ಸ್‌ನಲ್ಲಿ ಕಿರಣ್‌ ಜಯಶಾಲಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.