ADVERTISEMENT

ಭಾರತಕ್ಕೆ ಆರಂಭಿಕ ಆಘಾತ

ಸುದೀರ್‌ಮನ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿ: ಮಲೇಷ್ಯಾಗೆ ಗೆಲುವು

ಏಜೆನ್ಸೀಸ್
Published 21 ಮೇ 2019, 17:42 IST
Last Updated 21 ಮೇ 2019, 17:42 IST
ಭಾರತದ ಪಿ.ವಿ.ಸಿಂಧು ಷಟಲ್‌ ಹಿಂತಿರುಗಿಸಲು ಪ್ರಯತ್ನಿಸಿದರು –ಎಎಫ್‌ಪಿ ಚಿತ್ರ
ಭಾರತದ ಪಿ.ವಿ.ಸಿಂಧು ಷಟಲ್‌ ಹಿಂತಿರುಗಿಸಲು ಪ್ರಯತ್ನಿಸಿದರು –ಎಎಫ್‌ಪಿ ಚಿತ್ರ   

ಶಾಂಘೈ: ಭಾರತ ತಂಡದವರು ಸುದೀರ್‌ಮನ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಆರಂಭಿಕ ಆಘಾತ ಕಂಡಿದ್ದಾರೆ.

ಮಂಗಳವಾರ ನಡೆದ 1–ಡಿ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಭಾರತ 2–3ಯಿಂದ ಮಲೇಷ್ಯಾಕ್ಕೆ ಮಣಿದಿದೆ.

ಈ ಸೋಲಿನಿಂದಾಗಿ ಭಾರತದ ಕ್ವಾರ್ಟರ್‌ ಫೈನಲ್‌ ಹಾದಿ ದುರ್ಗಮ ಎನಿಸಿದೆ. ಬುಧವಾರದ ಹಣಾಹಣಿಯಲ್ಲಿ ಹತ್ತು ಬಾರಿಯ ಚಾಂಪಿಯನ್‌ ಚೀನಾವನ್ನು ಮಣಿಸಿದರೆ ಮಾತ್ರ ತಂಡವು ಎಂಟರ ಘಟ್ಟ ಪ್ರವೇಶಿಸಬಹುದಾಗಿದೆ.

ADVERTISEMENT

ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಕಣಕ್ಕಿಳಿದಿದ್ದ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ ಸಾಯಿರಾಜ್‌ ರಂಕಿರೆಡ್ಡಿ ಅವರು ಭಾರತಕ್ಕೆ ಗೆಲುವಿನ ಆರಂಭ ನೀಡಿದರು.

ಅಶ್ವಿನಿ ಮತ್ತು ಸಾತ್ವಿಕ್‌ 16–21, 21–17, 24–22ರಲ್ಲಿ ಗೋಹ್‌ ಸೂನ್‌ ಹುವಾತ್‌ ಮತ್ತು ಲಿಯಾ ಶೆವೊನ್‌ ಜೆಮಿ ಅವರನ್ನು ಮಣಿಸಿದರು. ಈ ಹೋರಾಟ ಒಂದು ಗಂಟೆ 10 ನಿಮಿಷ ನಡೆಯಿತು.

ಪುರುಷರ ಸಿಂಗಲ್ಸ್‌ನಲ್ಲಿ ಮಲೇಷ್ಯಾ ತಂಡದ ಲೀ ಜೀ ಜಿಯಾ ಪಾರಮ್ಯ ಮೆರೆದರು. ಅವರು 21–13, 21–15 ನೇರ ಗೇಮ್‌ಗಳಿಂದ ಸಮೀರ್‌ ವರ್ಮಾ ಅವರನ್ನು ಸೋಲಿಸಿ ತಂಡವು 1–1ರಿಂದ ಸಮಬಲ ಸಾಧಿಸಲು ನೆರವಾದರು.

48 ನಿಮಿಷಗಳ ಹೋರಾಟದಲ್ಲಿ ಸಮೀರ್‌, ಗುಣಮಟ್ಟದ ಆಟ ಆಡಲು ವಿಫಲರಾದರು.

ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದ ಪಿ.ವಿ.ಸಿಂಧು 21–12, 21–8ರಲ್ಲಿ ಗೋಹ್‌ ಜಿನ್‌ ವೀ ಎದುರು ಗೆದ್ದು ತಂಡಕ್ಕೆ 2–1 ಮುನ್ನಡೆ ತಂದುಕೊಟ್ಟರು.

ಭಾರತದ ಆಟಗಾರ್ತಿ ಕೇವಲ 35 ನಿಮಿಷಗಳಲ್ಲಿ ಪಂದ್ಯ ಗೆದ್ದು ಸಂಭ್ರಮಿಸಿದರು.ಸಿಂಧು, ಚುರುಕಿನ ಸರ್ವ್‌ ಮತ್ತು ಆಕರ್ಷಕ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ಪುರುಷರ ಡಬಲ್ಸ್‌ನಲ್ಲಿ ಭಾರತಕ್ಕೆ ನಿರಾಸೆ ಕಾಡಿತು. ಮನು ಅತ್ರಿ ಮತ್ತು ಬಿ.ಸುಮೀತ್‌ ರೆಡ್ಡಿ 20–22, 19–21ರಲ್ಲಿ ಆ್ಯರನ್‌ ಚಿಯಾ ಮತ್ತು ಟಿಯೊ ಯೀ ಎದುರು ಸೋತರು. ಹೀಗಾಗಿ ಪಂದ್ಯವು 2–2ರಿಂದ ಸಮಬಲವಾಯಿತು.

ಕುತೂಹಲ ಕೆರಳಿಸಿದ್ದ ಮಹಿಳಾ ಡಬಲ್ಸ್‌ನಲ್ಲೂ ಭಾರತ ತಂಡ ಎಡವಿತು.

ನಿರೀಕ್ಷೆಯ ನೊಗ ಹೊತ್ತು ಅಂಗಳಕ್ಕಿಳಿದಿದ್ದ ಅಶ್ವಿನಿ ‍ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ 11–21, 19–21ರಲ್ಲಿ ಚೌ ಮೀ ಕುವಾನ್‌ ಮತ್ತು ಲೀ ಮೆಂಗ್‌ ಯೀನ್‌ ಎದುರು ಪರಾಭವಗೊಂಡರು. ಈ ಹೋರಾಟ 42 ನಿಮಿಷ ನಡೆಯಿತು.

ಮೊದಲ ಗೇಮ್‌ನಲ್ಲಿ ಪರಿಣಾಮಕಾರಿ ಆಟ ಆಡಲು ವಿಫಲವಾದ ಭಾರತದ ಜೋಡಿ, ಎರಡನೇ ಗೇಮ್‌ನಲ್ಲಿ ಎದುರಾಳಿಗಳಿಗೆ ತೀವ್ರ ಪೈಪೋಟಿ ಒಡ್ಡಿತ್ತು. ಆದರೆ ನಿರ್ಣಾಯಕ ಘಟ್ಟದಲ್ಲಿ ಅಶ್ವಿನಿ ಮತ್ತು ಸಿಕ್ಕಿ ಎಡವಟ್ಟು ಮಾಡಿದರು. ಆದ್ದರಿಂದ ಗೆಲುವಿನ ಕನಸು ಕಮರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.