ದೋಹಾ: ಭಾರತದ ತಾರೆಯರಾದ ಮಣಿಕಾ ಬಾತ್ರಾ ಮತ್ತು ಮಾನವ್ ಠಕ್ಕರ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದರು.
ಮಹಿಳೆಯರ ಸಿಂಗಲ್ಸ್‌ನಲ್ಲಿ 22ನೇ ಶ್ರೇಯಾಂಕದ ಮಣಿಕಾ ಮೊದಲ ಸುತ್ತಿನಲ್ಲಿ 4-0 (11-5, 11-6, 11-8, 11-2) ಯಿಂದ ನೈಜೀರಿಯಾದ ಫಾತಿಮಾ ಬೆಲ್ಲೊ ಅವರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದರು. ಕೇವಲ 24 ನಿಮಿಷದಲ್ಲಿ ಎದುರಾಳಿ ಆಟಗಾರ್ತಿಯನ್ನು ಮಣಿಕಾ ಹಿಮ್ಮೆಟ್ಟಿಸಿದರು. 64ರ ಘಟ್ಟದಲ್ಲಿ ಭಾರತದ ಆಟಗಾರ್ತಿಗೆ ಕೊರಿಯಾದ ಪಾರ್ಕ್ ಗಹಿಯೋನ್ ಎದುರಾಳಿಯಾಗಿದ್ದಾರೆ.
ಭಾರತದ ಅಗ್ರಮಾನ್ಯ ಪುರುಷರ ಸಿಂಗಲ್ಸ್ ಆಟಗಾರ ಮಾನವ್ ಆರಂಭಿಕ ಸುತ್ತಿನಲ್ಲಿ 4-1 (11-3, 11-8, 6-11, 11-7, 14-12) ರಿಂದ ನ್ಯೂಜಿಲೆಂಡ್‌ನ ತಿಮೋಥಿ ಚೋಯ್ ಅವರನ್ನು ಸೋಲಿಸಿದರು.
ಉದಯೋನ್ಮುಖ ಆಟಗಾರ ಅಂಕುರ್ ಭಟ್ಟಾಚಾರ್ಜಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು. 18 ವರ್ಷ ವಯಸ್ಸಿನ ಅಂಕುರ್ 1-4 (11-4, 7-11, 9-11, 10-12, 8-11) ರಿಂದ ಹಾಂಗ್‌ಕಾಂಗ್‌ನ ಲ್ಯಾಮ್ ಸಿಯು ಹ್ಯಾಂಗ್ ವಿರುದ್ಧ ಸೋಲು ಕಂಡರು.
ಪುರುಷರ ಡಬಲ್ಸ್‌ನಲ್ಲಿ ಒಂಬತ್ತನೇ ಶ್ರೇಯಾಂಕದ ಮನುಷ್ ಶಾ ಮತ್ತು ದಿಯಾ ಚಿಟಾಲೆ ಜೋಡಿಯು ಶುಭಾರಂಭ ಮಾಡಿತು. ಭಾರತದ ಆಟಗಾರರರು 3-0 (11-2, 11-7, 11-6) ಯಿಂದ ಅಲ್ಜೀರಿಯಾದ ಮೆಹದಿ ಬೌಲೌಸ್ಸಾ ಮತ್ತು ಮಲಿಸ್ಸಾ ನಸ್ರಿ ವಿರುದ್ಧ ಗೆಲುವು ಸಾಧಿಸಿದರು.
ಅನುಭವಿ ಹರ್ಮೀತ್ ದೇಸಾಯಿ ಮತ್ತು ಸತ್ಯನ್ ಜ್ಞಾನಶೇಖರನ್ ಜೋಡಿಗೆ ನಿರಾಸೆಯಾಯಿತು. ಈ ಜೋಡಿಯು ಆರಂಭಿಕ ಸುತ್ತಿನಲ್ಲಿ 1-3 (9-11, 12-10, 14-16, 10-12) ರಿಂದ ಆಸ್ಟ್ರಿಯಾದ ಮಾಸಿಜ್ ಕೊಲೊಡ್ಜಿಜೆಕ್ ಮತ್ತು ಮೊಲ್ಡೊವಾದ ವ್ಲಾಡಿಸ್ಲಾವ್ ಉರ್ಸು ವಿರುದ್ಧ ಮುಗ್ಗರಿಸಿತು.
ಮಿಶ್ರ ಡಬಲ್ಸ್‌ನಲ್ಲಿ ಯಶಸ್ವಿನಿ ಘೋರ್ಪಡೆ ಅವರೊಂದಿಗೆ ಕಣಕ್ಕೆ ಇಳಿದಿದ್ದ ದೇಸಾಯಿ ಅವರಿಗೆ ಆಘಾತವಾಯಿತು. 14ನೇ ಶ್ರೇಯಾಂಕದ ಭಾರತದ ಜೋಡಿಯು 2-0 ಮುನ್ನಡೆ ಪಡೆದು, ನಂತರ ಲಯ ಕಳೆದುಕೊಂಡಿತು. 2-3 (11-8, 11-6, 10-12, 8-11, 10-12)ರಿಂದ ಫ್ರಾನ್ಸ್‌ನ ತಿಬಾಲ್ಟ್ ಪೊರೆಟ್ ಮತ್ತು ಲಿಯಾನಾ ಹೊಚಾರ್ಟ್ ಜೋಡಿಗೆ ಮಣಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.