ADVERTISEMENT

ಮೊಬೈಲ್‌ ತೊಡಕಾಗದಿರಲಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:30 IST
Last Updated 15 ಡಿಸೆಂಬರ್ 2013, 19:30 IST

‘ಯಾರಾದರೂ ತರಗತಿಯ ಒಳಗೆ ಮೊಬೈಲ್‌ ತಂದರೆ ನೋಡಿ, ನಾನು ಕ್ಲಾಸನ್ನೇ ತೆಗೆದುಕೊಳ್ಳು­ವುದಿಲ್ಲ’– ಶಿಸ್ತಿಗೆ ಹೆಸರಾದ ಉಪ­ನ್ಯಾ­ಸಕರೊಬ್ಬರು ಕಾಲೇಜು ವಿದ್ಯಾರ್ಥಿ­ಗಳಿಗೆ ನೀಡಿದ ಎಚ್ಚರಿಕೆ ಇದು. ‘ಅಲ್ಲಾ ಸಾರ್‌, ನಮ್ಮ ಕ್ಲಾಸಿನ ಎಲ್ಲ ವಿದ್ಯಾರ್ಥಿಗಳ ಹತ್ತಿರವೂ ಮೊಬೈಲ್‌ ಇದೆ. ಅಂಥಾದ್ದರಲ್ಲಿ ಯಾರೊಬ್ಬರೂ ತರಬಾರದು ಅಂದರೆ ಏನರ್ಥ? ಈಗಿನ ಕಾಲದಲ್ಲಿ ಮೊಬೈಲ್‌ ಇಲ್ಲದೆ ಒಂದು ಕ್ಷಣವೂ ಇರಲಾಗುವುದಿಲ್ಲ.

ಒಂದು ಪೀರಿಯಡ್‌ ಅಂದರೆ ಬರೋಬ್ಬರಿ ಒಂದು ಗಂಟೆ. ಅಷ್ಟು ಹೊತ್ತು ಮೊಬೈಲ್‌ ಇಲ್ಲದೇ ಹೋದರೆ ಏನು ಗತಿ? ನೀವು ಕ್ಲಾಸ್‌ ತೆಗೆದುಕೊಳ್ಳದಿದ್ದರೂ ಚಿಂತೆ ಇಲ್ಲ. ನಾವಂತೂ ಮೊಬೈಲ್‌ ತರದೆ ಬಿಡುವುದಿಲ್ಲ’– ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಹೇಳಿದ ಮಾತುಗಳಿವು. ಉಪನ್ಯಾಸಕರೂ ತಾವು ಆಡಿದ ಮಾತಿಗೆ ಗಂಟುಬಿದ್ದರು. ವಿದ್ಯಾರ್ಥಿಗಳೂ ತಮ್ಮ ಮಾತಿನಿಂದ ಹಿಂದೆ ಸರಿಯಲಿಲ್ಲ. ಮೊಬೈಲ್‌ ವಿಷಯ ಪ್ರಾಂಶುಪಾಲರನ್ನು ಮುಟ್ಟಿತು. ಪಾಪ ಆ ಪ್ರಾಂಶುಪಾಲರು ತಾನೇ ಯಾರ ಪರವಾಗಿ ಎಂದು ಮಾತನಾ­ಡುತ್ತಾರೆ? ‘ನಿಮ್ಮ ಸಮಸ್ಯೆಯನ್ನು ನೀವು ನೀವೇ ಬಗೆಹರಿಸಿಕೊಳ್ಳಿ’ ಎಂದುಬಿಟ್ಟರು.

ದಿನಗಳು ಉರುಳಿದವು. ಹಾವೂ ಸಾಯಲಿಲ್ಲ, ಕೋಲೂ ಮುರಿಯಲಿಲ್ಲ. ಉಪನ್ಯಾಸಕರೂ ಸೋಲಲಿಲ್ಲ, ವಿದ್ಯಾರ್ಥಿಗಳೂ ಹಿಂಜರಿಯಲಿಲ್ಲ. ಒಂದು ದಿನ ಉಪನ್ಯಾಸಕರಿಗೆ ವರ್ಗಾವಣೆಯ ಆದೇಶ ಬಂದುಬಿಟ್ಟಿತು. ‘ಮೊಬೈಲ್‌ ವಿಚಾರವಾಗಿ ಮನಸ್ತಾಪ ಮಾಡಿಕೊಂಡು ಎಷ್ಟೊಂದು ತರಗತಿಗಳನ್ನು ಹಾಳು ಮಾಡಿಕೊಂಡುಬಿಟ್ಟೆವಲ್ಲ’ ಎಂದು ವಿದ್ಯಾರ್ಥಿಗಳು ಪಶ್ಚಾತ್ತಾಪಪಟ್ಟರು.

ಉಪನ್ಯಾಸಕರಲ್ಲಿ ಕ್ಷಮಾಪಣೆ ಕೋರಿದರು. ಬೀಳ್ಕೊಡುಗೆ ನೀಡುವುದಾಗಿ ಕೇಳಿ­ಕೊಂಡರು. ವಿದ್ಯಾರ್ಥಿಗಳ ವರ್ತನೆಯಿಂದ ನೊಂದುಹೋಗಿದ್ದ ಉಪನ್ಯಾಸಕರು ‘ನೀವೂ ಬೇಡ ನಿಮ್ಮ ಬೀಳ್ಕೊಡುಗೆಯೂ ಬೇಡ’ ಎಂದುಬಿಟ್ಟರು. ಇಂತಹ ಪ್ರಕರಣಗಳು ಈಗ ಕಾಲೇಜುಗಳಲ್ಲಿ ಸಾಮಾನ್ಯವಾಗಿವೆ. ಇದರಿಂದ ವಿದ್ಯಾರ್ಥಿಗಳಿಗೆ ಮೊಬೈಲ್‌ ಅತ್ಯಗತ್ಯವೇ, ಹಿಂದಿನವರೆಲ್ಲ ಮೊಬೈಲ್‌ ಬಳಸದೇ ತಮ್ಮ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಮುಗಿಸಲಿಲ್ಲವೇ ಎಂಬ ಪ್ರಶ್ನೆಗಳು ಮೂಡುತ್ತವೆ.

ಸ್ವಲ್ಪ ಹಣ ಖರ್ಚು ಮಾಡಿದರೂ ಸಾಕು ಹೆಸರಾಂತ ಲೇಖಕರು ಬರೆದಿರುವ ಪಠ್ಯಪುಸ್ತಕಗಳು ದೊರಕುತ್ತವೆ. ಆದರೆ ಪಠ್ಯಪುಸ್ತಕಗಳನ್ನು ಕೊಳ್ಳಲು ಹಿಂದೇಟು ಹಾಕುವ ವಿದ್ಯಾರ್ಥಿಗಳು, ನಾಲ್ಕಾರು ಸಾವಿರ ರೂಪಾಯಿ ಕೊಟ್ಟು ಮೊಬೈಲ್‌ ಖರೀದಿಸುತ್ತಾರೆ. ಗಂಟೆಗಟ್ಟಲೆ ಕೆಲಸಕ್ಕೆ ಬಾರದ ಮಾತುಗಳನ್ನು ಆಡುತ್ತಾರೆ. ಅಪ್ಪ– ಅಮ್ಮ ಕೊಟ್ಟ ದುಡ್ಡಿನಲ್ಲಿ ತಮ್ಮ ಹೊಟ್ಟೆಗೆ ಏನನ್ನು ಹಾಕಿಕೊಳ್ಳದಿದ್ದರೂ ಮೊಬೈಲ್‌ ಹೊಟ್ಟೆಯನ್ನು ಮಾತ್ರ ತಪ್ಪದೇ ಕರೆನ್ಸಿಯಿಂದ ತುಂಬಿಸುತ್ತಾರೆ.

ಸಂಪರ್ಕ ಸಾಧನವಾಗಲಿ ಎನ್ನುವ ಆಶಯದಿಂದ  ಅಲೆಗ್ಸಾಂಡರ್‌ ಗ್ರಹಾಂಬೆಲ್‌ ದೂರವಾಣಿಯನ್ನು ಕಂಡುಹಿಡಿದರು. ಸ್ಥಿರವಾಗಿ ಒಂದು ಕಡೆ ಕುಳಿತಿರುತ್ತಿದ್ದ ದೂರವಾಣಿ, ನಂತರದ ದಿನಗಳಲ್ಲಿ ರೂಪಾಂತರ ಹೊಂದಿ ಸಂಚಾರಿ ದೂರವಾಣಿ, ಅರ್ಥಾತ್‌ ಮೊಬೈಲ್‌ ಆಗಿ ಪರಿವರ್ತನೆ ಹೊಂದಿತು. ಅದೀಗ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಜೇಬಿನಲ್ಲೂ ಮನೆ ಮಾಡಿಕೊಂಡಿದೆ.

ಮೊಬೈಲ್‌ ವರವೂ ಹೌದು, ಶಾಪವೂ ಹೌದು. ಮರ್ಕಟ ಮನಸ್ಸಿನ ವಿದ್ಯಾರ್ಥಿ­ಗಳ ಪಾಲಿಗೆ ಕಂಟಕವೂ ಹೌದು. ತರಗತಿಯನ್ನಾದರೂ ಬಿಟ್ಟೇವು ಮೊಬೈಲ್‌ ಬಿಡೆವು ಎನ್ನುವ ಧೋರಣೆ ಖಂಡಿತವಾಗಿಯೂ ಸರಿಯಲ್ಲ. ಹೀಗಾಗಿ ವಿದ್ಯಾರ್ಥಿಗಳು ಮೊಬೈಲ್‌ ಬಳಸುವಾಗ ಸಾಕಷ್ಟು ಜಾಗ್ರತೆ ವಹಿಸಬೇಕು. ಅದು ತಮ್ಮ ಶೈಕ್ಷಣಿಕ ಹಾದಿಗೆ ತೊಡಕಾಗದಂತೆ  ಎಚ್ಚರಿಕೆ ವಹಿಸಬೇಕು.
–ಎಸ್ಸೆನ್ಕೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.