ADVERTISEMENT

ಸ್ವೆಟೆಕ್ ಜಯದ ಓಟ ಅಬಾಧಿತ

ವಿಂಬಲ್ಡನ್ ಟೆನಿಸ್ ಟೂರ್ನಿ: ನಡಾಲ್‌ಗೆ ಪ್ರಯಾಸದ ಗೆಲುವು

ಏಜೆನ್ಸೀಸ್
Published 1 ಜುಲೈ 2022, 16:12 IST
Last Updated 1 ಜುಲೈ 2022, 16:12 IST
ಇಗಾ ಸ್ವೆಟೆಕ್‌ ಚೆಂಡು ಹಿಂದಿರುಗಿಸಿದ ಪರಿ– ಎಎಫ್‌ಪಿ ಚಿತ್ರ
ಇಗಾ ಸ್ವೆಟೆಕ್‌ ಚೆಂಡು ಹಿಂದಿರುಗಿಸಿದ ಪರಿ– ಎಎಫ್‌ಪಿ ಚಿತ್ರ   

ಲಂಡನ್‌: ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಪೋಲೆಂಡ್ ಆಟಗಾರ್ತಿ ಇಗಾ ಸ್ವೆಟೆಕ್‌ ಸತತ 37ನೇ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದರು. ಸ್ಪೇನ್‌ ದಿಗ್ಗಜ ರಫೆಲ್‌ ನಡಾಲ್ ಮತ್ತೊಂದು ಪ್ರಯಾಸದ ಗೆಲುವು ದಾಖಲಿಸಿದರು.

ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟೆನಿಸ್‌ ಟೂರ್ನಿಯಲ್ಲಿ ಸ್ವೆಟೆಕ್‌ ಮತ್ತು ನಡಾಲ್‌ ಕ್ರಮವಾಗಿ ಮಹಿಳೆ ಮತ್ತು ಪುರುಷರ ಸಿಂಗಲ್ಸ್ ವಿಭಾಗಗಳಲ್ಲಿ ಮೂರನೇ ಸುತ್ತು ತಲುಪಿದರು.

ಎರಡನೇ ಸುತ್ತಿನ ಹಣಾಹಣಿಯಲ್ಲಿ ನೆದರ್ಲೆಂಡ್ಸ್‌ನ ಲೇಸ್ಲಿ ಪಟ್ಟಿನಾಮಾ ಕರ್ಕೋವ್‌ ಎದುರು ಕಣಕ್ಕಿಳಿದಿದ್ದ ಸ್ವೆಟೆಕ್‌6-4, 4-6, 6-3ರಿಂದ ಜಯ ಒಲಿಸಿಕೊಂಡರು.

ADVERTISEMENT

ಸತತ ನಾಲ್ಕು ಗೇಮ್‌ಗಳ ಜಯದ ಬಲದೊಂದಿಗೆ ಪೋಲೆಂಡ್‌ ಆಟಗಾರ್ತಿ ಮೊದಲ ಸೆಟ್‌ಅನ್ನು ತಮ್ಮದಾಗಿಸಿಕೊಂಡರು. ಎರಡನೇ ಸೆಟ್‌ನಲ್ಲಿ ಲೇಸ್ಲಿ ತಿರುಗೇಟು ನೀಡಿದರು. ಸ್ವೆಟೆಕ್ ಸರ್ವ್ ಬ್ರೇಕ್ ಮಾಡಿದ ಅವರು ಅದೇ ಲಯದೊಂದಿಗೆ ಸೆಟ್‌ ಗೆದ್ದು ಬೀಗಿದರು.ರಂಗೇರಿದ ಮೂರನೇ ಸೆಟ್‌ನಲ್ಲಿ ತಮ್ಮ ಅನುಭವವನ್ನು ಸಾಣೆ ಹಿಡಿದ ಸ್ವೆಟೆಕ್‌ ಪಾರಮ್ಯ ಮೆರೆದರು. ಈ ಜಯದೊಂದಿಗೆ ಸತತ 37 ಪಂದ್ಯ ಗೆದ್ದು ಮಾರ್ಟಿನಾ ಹಿಂಗಿಸ್‌ (1997ರಲ್ಲಿ) ದಾಖಲೆ ಸರಿಗಟ್ಟಿದರು.

ಜಿದ್ದಾಜಿದ್ದಿನ ಹಣಾಹಣಿಯಲ್ಲಿ ನಡಾಲ್‌6-4, 6-4, 4-6, 6-3ರಿಂದ ಲಿಥುವೇನಿಯಾದ ರಿಕಾರ್ಡಸ್ ಬೆರೆಂಕಿಸ್ ಎದುರು ಗೆದ್ದರು.

ಕಿರ್ಗಿಯೊಸ್‌ಗೆ 7 ಲಕ್ಷ ದಂಡ: ಕ್ರೀಡಾಸ್ಫೂರ್ತಿಗೆ ವಿರುದ್ಧ ನಡವಳಿಕೆ ತೋರಿದ ಆಸ್ಟ್ರೇಲಿಯಾ ಆಟಗಾರ ನಿಕ್ ಕಿರ್ಗಿಯೋಸ್‌ಗೆ ₹ 7.90 ಲಕ್ಷ ದಂಡ ವಿಧಿಸಲಾಗಿದೆ. ಟೂರ್ನಿಯ ಇತಿಹಾಸದಲ್ಲಿಯೇ ಅತಿ ಹೆಚ್ಚಿನ ದಂಡದ ಪ್ರಮಾಣವಾಗಿದೆ. ಮೊದಲ ಸುತ್ತಿನ ಪಂದ್ಯದ ವೇಳೆ ತನ್ನನ್ನು ಕೆಣಕಿದ ಪ್ರೇಕ್ಷಕನತ್ತ ಕಿರ್ಗಿಯೊಸ್ ಉಗುಳಿದ್ದರು.

ನೋವು ಮರೆಸಿದ ಜಯ

ಲಂಡನ್‌ (ಎಎಫ್‌ಪಿ): ಅಮೂಲ್ಯ ಮೂರು ವರ್ಷಗಳನ್ನು ಗಾಯ ಮತ್ತು ನೋವಿನಲ್ಲಿಯೇ ಕಳೆದ ನೆದರ್ಲೆಂಡ್ಸ್‌ ಹುಡುಗ ಟಿಮ್ ವ್ಯಾನ್‌ ರಿಜ್‌ಥೊವನ್‌ ವಿಂಬಲ್ಡನ್ ಟೆನಿಸ್‌ ಟೂರ್ನಿಯಲ್ಲಿ ಪ್ರೀಕ್ವಾರ್ಟರ್‌ಫೈನಲ್ ತಲುಪಿದ ಸಂತಸ ಅನುಭವಿಸಿದ್ದಾರೆ.

25 ವರ್ಷದಟಿಮ್, ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಮುಖ್ಯ ಸುತ್ತಿನಲ್ಲಿ ಆಡುತ್ತಿದ್ದಾರೆ. ಪುರುಷರ ಸಿಂಗಲ್ಸ್ ಮೂರನೇ ಸುತ್ತಿನಲ್ಲಿ ಅವರು6-4, 6-3, 6-4ರಿಂದ ಜಾರ್ಜಿಯಾದ ನಿಕೊಲಾಜ್ ಬಾಸಿಲ್‌ಶ್ವಿಲಿ ಎದುರು ಗೆದ್ದರು. ಇದಕ್ಕೂ ಮೊದಲು ಅಮೆರಿಕದ 15ನೇ ಶ್ರೇಯಾಂಕದ ಆಟಗಾರ ಅಮೆರಿಕದ ರೆಲಿ ಒಪೆಲ್ಕಾಗೆ ಸೋಲುಣಿಸಿದ್ದರು.

18 ವರ್ಷದವರಿದ್ದಾಗ ತೊಡೆ, ಮಣಿಕಟ್ಟು ಮತ್ತು ಬೆನ್ನುನೋವುಗಳುಟಿಮ್ ಅವರನ್ನು ಕಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.