ADVERTISEMENT

ಧ್ವನಿ ತಂತ್ರಜ್ಞಾನದ ಚಮತ್ಕಾರ..!

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 19:30 IST
Last Updated 10 ಏಪ್ರಿಲ್ 2012, 19:30 IST

`ಆ್ಯಪಲ್ ಐಫೋನ್-4ಎಸ್~ನಲ್ಲಿರುವ `ಸಿರಿ~ ತಂತ್ರಾಂಶದ (Speech Interpretation and Recognit-ion Interface) ಕುರಿತು ಕೇಳಿರುತ್ತೀರಿ. ಈ  `ಸಿರಿ~ಯನ್ನು ಪ್ರಾರಂಭದಲ್ಲಿ ಅಭಿವೃದ್ಧಿಪಡಿಸಿದ್ದು  `ಎಸ್‌ಆರ್‌ಐ~ ಇಂಟರ್‌ನ್ಯಾಷನಲ್ ಎನ್ನುವ ಕ್ಯಾಲಿಫೋರ್ನಿಯಾ ಮೂಲದ ಕಂಪನಿ. 2010ರಲ್ಲಿ  `ಆ್ಯಪಲ್~ ಇದನ್ನು ಸ್ವಾಧೀನಪಡಿಸಿಕೊಂಡಿತು.
 
ಅನೇಕರು `ಸಿರಿ~ ಮಹಿಮೆಯಿಂದಲೇ `ಐಫೋನ್ 4ಎಸ್~ ಖರೀದಿಸಲು ಮುಂದಾಗುತ್ತಿದ್ದಾರೆ ಎನ್ನುತ್ತದೆ ಇತ್ತೀಚಿನ ಮಾರುಕಟ್ಟೆ ಸಮೀಕ್ಷೆ. ಈ ಅಪ್ಲಿಕೇಷನ್ ನಿಮ್ಮ ಧ್ವನಿಯನ್ನು ಗುರುತಿಸುತ್ತದೆ. `ಎಸ್‌ಎಂಎಸ್~ ಟೈಪ್ ಮಾಡುವ ಬದಲು ಇಂತವರಿಗೆ ಇಂತಹ ಸಂದೇಶ ಕಳುಹಿಸು ಎಂದು ಮಾತಿನಲ್ಲಿ ಹೇಳಿದರೆ ಸಾಕು. `ಸಿರಿ~ ತಾನಾಗಿಯೇ ಟೈಪಿಸಿ ಸಂದೇಶ ಕಳುಹಿಸಿರುತ್ತದೆ.  ನಿಮ್ಮ ಧ್ವನಿ ಅರ್ಥಮಾಡಿಕೊಳ್ಳುವ ತಂತ್ರಾಂಶ ನೀವು ಹೇಳಿದ ಕೆಲಸ ಮಾಡುತ್ತದೆ. ಇದು `ಸಿರಿ~ ಸೊಬಗು.

`ಸಿರಿ~ಯನ್ನು ಪಕ್ಕಕ್ಕಿರಿಸಿ `ನ್ಯುಯಾನ್ಸ್ ಕಮ್ಯುನಿಕೇಷನ್~ಗೆ ಹೊರಳೋಣ. ನ್ಯುಯಾನ್ಸ್ ಕೂಡ ಕಂಪ್ಯೂಟರ್ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವ ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪನಿ. ಧ್ವನಿ ಮತ್ತು ದೃಶ್ಯಗಳಿಗೆ ಸಂಬಂಧಿಸಿದ ಸಾವಿರಾರು ಅಪ್ಲಿಕೇಷನ್ಸ್‌ಗಳನ್ನು ಈ ಕಂಪನಿ ಈಗಾಗಲೇ ಅಭಿವೃದ್ಧಿಪಡಿಸಿದೆ.

ಅನಧಿಕೃತ ಮೂಲಗಳ ಪ್ರಕಾರ `ಐಫೋನ್ ಸಿರಿ~ಗೆ ಸರ್ವರ್ ನೆರವು ನೀಡಿರುವುದು `ನ್ಯುಯಾನ್ಸ್~ ಸಂಸ್ಥೆಯಂತೆ. 2005ರಲ್ಲಿ ನ್ಯುಯಾನ್ಸ್‌ನ್ನು ಸ್ಕ್ಯಾನ್‌ಸಾಫ್ಟ್ ಎನ್ನುವ ಕಂಪನಿ ಸ್ವಾಧೀನಪಡಿಸಿಕೊಂಡಿತು. ಈ ಕಂಪನಿ ಕೂಡ ಧ್ವನಿ ಪತ್ತೆ ಹೆಚ್ಚುವ ತಂತ್ರಾಂಶ ಅಭಿವೃದ್ಧಿಪಡಿಸುವ ಕಂಪನಿ. ಈಗ ಇವೆರಡು ಸಂಸ್ಥೆಗಳು ಜಂಟಿಯಾಗಿ ಹೊಸ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸುತ್ತಿದೆ.

ಹಾಗೆ ಸುಮ್ಮನೆ ಊಹಿಸಿಕೊಳ್ಳಿ. ನೀವು ಹೊರಗೆ ಸುತ್ತಾಡಿಕೊಂಡು ನಿಮ್ಮ ಮನೆಗೆ ಬರುತ್ತೀರಿ. ಟಿವಿಯ ಎದುರಿಗೆ ಕುಳಿತು ಟಿವಿ ಆನ್ ಎನ್ನುತ್ತೀರಿ. ತಕ್ಷಣವೇ ಟಿವಿ ಚಾಲನೆಗೊಳ್ಳುತ್ತದೆ. `ಬಿಬಿಸಿ~ ಚಾನೆಲ್ ಎನ್ನುತ್ತೀರಿ, ಮರುಕ್ಷಣವೇ `ಬಿಬಿಸಿ~ ತೆರೆಯ ಮೇಲೆ ಮೂಡುತ್ತದೆ. `

ಸಿಎನ್‌ಎನ್~ಗೆ ಹೋಗು ಎನ್ನುತ್ತೀರಿ. `ಸಿಎನ್‌ಎನ್~ನಲ್ಲಿ ಸುದ್ದಿ ಮೂಡುತ್ತದೆ. ಡಿಸ್ಕವರಿ, ಅನಿಮಲ್ ಪ್ಲಾನೆಟ್, ಸ್ಟಾರ್ ನ್ಯೂಸ್ ಹೀಗೆ ನೀವು ಯಾವ ಚಾನಲ್ ಹೆಸರು ಹೇಳುತ್ತೀರೋ, ಆಯಾ ಚಾನೆಲ್‌ಗಳು  ನಿಮ್ಮ ಟಿವಿ ಪರದೆಯಲ್ಲಿ ಬದಲಾಗುತ್ತಾ ಹೋಗುತ್ತವೆ.

ಈ ಕಾರ್ಯಕ್ರಮವನ್ನು `ರೆಕಾರ್ಡ್~ ಮಾಡಿಕೋ ಎಂದು ಹೇಳಿದರೆ, ಅದು  `ರೆಕಾರ್ಡ್~ ಆಗಿರುತ್ತದೆ. ಟಿವಿ ಅಷ್ಟೇ ಅಲ್ಲ, ನೀವು ಓಡಿಸುವ ಕಾರು, ನಿಮ್ಮ ಕಂಪ್ಯೂಟರ್, ಪ್ರಿಡ್ಜ್, ಕಾಫಿ ಮೇಕರ್, ಆವನ್, ಅಲಾರಾಂ ವ್ಯವಸ್ಥೆ ಹೀಗೆ ಪ್ರತಿಯೊಂದು ಉಪಕರಣಗಳೂ ನಿಮ್ಮ ಮಾತು ಕೇಳಿ, ನೀವು ಹೇಳಿದಂತೆ ಮಾಡುತ್ತವೆ. ಕುತೂಹಲ ಎನಿಸುತ್ತಿದೆ ಅಲ್ಲವೇ?  ಹೌದು.

ಇದು   ನ್ಯುಯಾನ್ಸ್ ಕಂಪನಿ ಅಭಿವೃದ್ಧಿಪಡಿಸಿದ ಧ್ವನಿ ಪತ್ತೆ ಹಚ್ಚುವ (speechrecog­nition)ಅಪ್ಲಿಕೇಷನ್‌ನ ಚಮತ್ಕಾರ. ಇತ್ತೀಗಷ್ಟೇ ಕಂಪೆನಿ `ಟಿವಿ~ಗಾಗಿ ಅಭಿವೃದ್ಧಿಪಡಿಸಿರುವ `ಡ್ರ್ಯಾಗನ್ ಟಿವಿ~ ಎನ್ನುವ ಅಪ್ಲಿಕೇಷನ್‌ನ ಪ್ರಯೋಗಾರ್ಥ ಪರೀಕ್ಷೆ ನಡೆಸಿ, ಯಶಸ್ಸು ಕಂಡಿದೆ.

`ಮನುಷ್ಯನ ಧ್ವನಿಯನ್ನು ಸ್ಮಾರ್ಟ್‌ಫೋನ್‌ಗಳು ಮಾತ್ರ ಗುರುತಿಸುವುದಿಲ್ಲ. ಟೆಲಿವಿಷನ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳು ಕೂಡ ನಿಮ್ಮ ಧ್ವನಿ ಗುರುತಿಸಿ, ನೀವು ಹೇಳಿದ ಹಾಗೆ ಕೇಳುವಂತೆ ಮಾಡಬಹುದು ಎನ್ನುತ್ತಾರೆ  ನ್ಯೂಯಾನ್ಸ್ ಸಂಸ್ಥೆಯ ಮುಖ್ಯ ತಾಂತ್ರಿಕ ಅಧಿಕಾರಿ ವ್ಯಾಡ್ಲ್ ಸೆಜೊನಾ.

ಹಾಗೆ ನೋಡಿದರೆ, ಮನುಷ್ಯ ಯಂತ್ರದೊಂದಿಗೆ ಮಾತನಾಡುವ ಕಲ್ಪನೆ ಇಂದು ನಿನ್ನೆಯದಲ್ಲ. ಥಾಮಸ್ ಆಲ್ವಾ ಎಡಿಸನ್ ಫೋನೋಗ್ರಾಫ್ ಅಭಿವೃದ್ಧಿ ಪಡಿಸಿದ ಕಾಲದಿಂದಲೂ ಇದೆ. 1980ರ ದಶಕದ ನಂತರ ಮನುಷ್ಯನ ಧ್ವನಿ ಗುರುತಿಸಿ, ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವ ಉಪಕರಣಗಳ ಅಭಿವೃದ್ಧಿಯಾಯಿತು.
 
ಹಾಗೂ ಈ ತಂತ್ರಜ್ಞಾನಕ್ಕೆ ವಾಣಿಜ್ಯ ಬೇಡಿಕೆ ಬಂತು. ಧ್ವನಿಯನ್ನು ಪಠ್ಯ ರೂಪಕ್ಕೆ ಪರಿವರ್ತಿಸಬಲ್ಲ ತಂತ್ರಾಂಶಗಳೂ ಬಂದವು. ಈಗಂತೂ ಧ್ವನಿ ಪತ್ತೆ ತಂತ್ರಜ್ಞಾನವನ್ನು ಹಲವು ಗ್ರಾಹಕ ಸೇವಾ ವಲಯಗಳಲ್ಲಿ ಬಳಸುತ್ತಾರೆ. ಧ್ವನಿ ಆಧಾರಿತ ಸರ್ಚ್ ಎಂಜಿನ್ ಬಂದರೆ ಅದು ಗೂಗಲ್ ಅನ್ನು ಕೂಡ ಹಿಂದಿಕ್ಕುತ್ತದೆ ಎನ್ನುತ್ತಾರೆ ವೆಬ್ ತಜ್ಞರು.

ಧ್ವನಿ ತಂತ್ರಜ್ಞಾನವು ಮುಂಬರುವ ದಿನಗಳಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಮಾರುಕಟ್ಟೆಯನ್ನೇ ಬದಲಿಸಲಿದೆ ಎನ್ನುತ್ತಾರೆ ನ್ಯುಯಾನ್ಸ್‌ನ ಮುಖ್ಯ ಅಧಿಕಾರಿಯೊಬ್ಬರು. ಈ ದೂರದೃಷ್ಟಿ ಇಟ್ಟುಕೊಂಡೇ ಕಂಪನಿ ಧ್ವನಿ ಆಧಾರಿತ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿರುವ ಸುಮಾರು 40 ಕ್ಕೂ ಹೆಚ್ಚು ಚಿಕ್ಕಪುಟ್ಟ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಂಡಿದೆ.

ಸದ್ಯಕ್ಕೆ 8 ಸಾವಿರಕ್ಕೂ ಹೆಚ್ಚು ತಂತ್ರಜ್ಞರನ್ನು ಒಳಗೊಂಡಿರುವ ನ್ಯುಯಾನ್ಸ್ ತಂಡ ಮುಂದೊಂದು ದಿನ ಯಂತ್ರ ಮತ್ತು ಮಾನವನ ನಡುವೆ ಧ್ವನಿಯ ಮೂಲಕ ಸಂವಹನ ಸೇತುವೆ ಕಟ್ಟಲಿದೆ ಎನ್ನುತ್ತಾರೆ ತಜ್ಞರು. ಸದ್ಯ ಈ ಕ್ರಾಂತಿಯು ಚಿಕ್ಕ ಪ್ರಮಾಣದಲ್ಲಿದ್ದರೂ, ಮುಂದೊಂದು ದಿನ ಗೂಗಲ್, ಅಮೇಜಾನ್, ಮೈಕ್ರೋಸಾಫ್ಟ್‌ನ ದೈತ್ಯ ಸಂಸ್ಥೆಗಳನ್ನೂ ಕೂಡ `ನ್ಯುಯಾನ್ಸ್~ ಹಿಂದಿಕ್ಕಬಹದು ಎನ್ನುತ್ತಾರೆ ಅಮೆರಿಕದ ಕ್ವೀನ್ಸ್ ಕಾಲೇಜಿನ ಕಂಪ್ಯೂಟರ್ ಪ್ರಾಧ್ಯಾಪಕ ಆಂಡ್ರೋ ರೋಸನ್‌ಬರ್ಗ್. 
 
ಧ್ವನಿ ಗುರುತಿಸುವ ಅಪ್ಲಿಕೇಷನ್ಸ್‌ಗಳು ಎಷ್ಟೇ ಬಂದರೂ, ಇಲ್ಲಿ ಕೂಡ ಭದ್ರತೆಯದ್ದೇ ಸಮಸ್ಯೆ. ಇಂತಹ ತಂತ್ರಜ್ಞಾನವನ್ನು ಸಾರ್ವಜನಿಕವಾಗಿ ಬಳಸಬಹುದೇ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. 

2020ರ ವೇಳಗೆ ಕಂಪ್ಯೂಟರ್ ಬಳಕೆಯಲ್ಲಿ ಸಂಪೂರ್ಣವಾಗಿ ಧ್ವನಿ  ಆಧಾರಿತ ತಂತ್ರಜ್ಞಾನವೇ ಬರಲಿದೆ. ಆಗ ನೀವು ಈಗ ಬಳಸುತ್ತಿರುವ `ಮೌಸ್~ಗೆ ಜಾಗವೇ ಇರುವುದಿಲ್ಲ. ನಿಮ್ಮ ಮಾತನ್ನು ಕೇಳಿಸಿಕೊಂಡು ಕಂಪ್ಯೂಟರ್ ಕೆಲಸ ಮಾಡುತ್ತದೆ. ನೀವು ಹೇಳಿದ್ದನ್ನು ಟೈಪ್ ಮಾಡುತ್ತದೆ. ಕೀ-ಬೋರ್ಡ್ ಅಗತ್ಯ ಕೂಡ ಬರುವುದಿಲ್ಲ ಎನ್ನುತ್ತಾರೆ `ನ್ಯುಯಾನ್ಸ್~ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಪೌಲ್ ರಿಚಿ.
`ಬಳಕೆದಾರರರು ಇಂತಹ ಧ್ವನಿ ಅಪ್ಲಿಕೇಷನ್ ಬಳಸುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು.

ಸಾರ್ವಜನಿಕ ಬಳಕೆಗೆ ಮೊದಲು ಸುರಕ್ಷತೆಗೆ ಸಂಬಂಧಿಸಿದಂತೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ ಎನ್ನುತ್ತಾರೆ ಅವರು. ಸದ್ಯ `ನ್ಯುಯಾನ್ಸ್~ ಬಳಿ ಲಕ್ಷಾಂತರ ಜನರ ಧ್ವನಿ ಸಂಗ್ರಹವಿದೆ.  `ಡ್ರಾಗನ್ ಗೂ~ ನಂತಹ ಅಪ್ಲಿಕೇಷನ್ ಯೂನಿಕ್ ಕೋಡ್ ತಂತ್ರಜ್ಞಾನದ  ಮೂಲಕ ಧ್ವನಿಯನ್ನು ಗುರುತಿಸುತ್ತದೆ. ಯಂತ್ರವು ಮನುಷ್ಯನ ಇತರೆ ಜೈವಿಕ ಗುಣಲಕ್ಷಣಗಳನ್ನು ಗುರುತಿಸುವಂತೆ ಧ್ವನಿಯನ್ನೂ ಗುರುತಿಸಬಲ್ಲದು ಎನ್ನುತ್ತಾರೆ ಫೆಡರಲ್ ಟ್ರೇಡ್ ಕಮೀಷನ್‌ನ ಗ್ರಾಹಕ ವಿಭಾಗದ ಮುಖ್ಯಸ್ಥ ಡೇವಿಡ್ ವ್ಲ್ಯಾಡೆಕ್.

ಕಳೆದ ವರ್ಷ `ನ್ಯುಯಾನ್ಸ್~ ಆಂಡ್ರಾಯ್ಡ ಮತ್ತು ಐಫೋನ್ ಬಳಕೆದಾರರಿಗಾಗಿ `ಡ್ರಾಗನ್ ಗೂ~ ಎನ್ನುವ ಧ್ವನಿ ಗುರುತಿಸುವ ಅಪ್ಲಿಕೇಷನ್ ಬಿಡುಗಡೆ ಮಾಡಿತ್ತು. ಇದು ಇದುವರೆಗೆ ಸುಮಾರು ಲಕ್ಷಗಟ್ಟಲೆ ಬಾರಿ ಡೌನ್‌ಲೋಡ್ ಆಗಿದೆ. ಉದಾಹರಣೆಗೆ ಈ ಅಪ್ಲಿಕೇಷನ್ ತೆರೆದು, ನನ್ನ ತಲೆ ಮೇಲೆ ಎಷ್ಟು ವಿಮಾನ ಹಾರುತ್ತಿದೆ ಎಂದರೆ, ಮರು ಕ್ಷಣವೇ ಆಗಸದಲ್ಲಿ ಹಾರುತ್ತಿರುವ ವಿಮಾನಗಳು, ಅದರ ವೇಳಾ ಪಟ್ಟಿ, ದರ ವಿವರ ಇತ್ಯಾದಿ ಮಾಹಿತಿಗಳ ಗುಚ್ಚವೇ ತೆರೆದುಕೊಳ್ಳುತ್ತದೆ. ಹೇಗಿದೆ ಧ್ವನಿ ತಂತ್ರಜ್ಞಾನ ಚಮತ್ಕಾರ..

ಸಿರಿಗೆ ಗೂಗಲ್ ಅಸಿಸ್ಟೆಂಟ್: ಆ್ಯಪಲ್ ಐಫೋನ್‌ನಲ್ಲಿ `ಸಿರಿ~ ಸಾಕಷ್ಟು ಜನಪ್ರಿಯವಾಗಿರುವ ಹಿನ್ನೆಲೆಯಲ್ಲಿ, ಗೂಗಲ್ ಇದಕ್ಕೆ ಪರ್ಯಾಯವಾಗಿ `ಆಂಡ್ರಾಯ್ಡ ಅಸಿಸ್ಟೆಂಟ್~ ಹೆಸರಿನ ಅಪ್ಲಿಕೇಷನ್ ಅಭಿವೃದ್ಧಿಪಡಿಸುತ್ತಿದೆ.  ವರ್ಚಾಂತ್ಯಕ್ಕೆ ಈ ಅಪ್ಲಿಕೇಷನ್ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.   ್ಝ
    ವಿವಿಧ ಮೂಲಗಳಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.