ADVERTISEMENT

ಪ್ರಾದೇಶಿಕ ಭಾಷೆಗಳಲ್ಲೂ ಕಿರುಬ್ಲಾಗಿಂಗ್

ಜೋಮನ್ ವರ್ಗಿಸ್
Published 3 ಮೇ 2011, 19:30 IST
Last Updated 3 ಮೇ 2011, 19:30 IST

ಪ್ರಾದೇಶಿಕ ಭಾಷೆಗಳಲ್ಲಿ ‘ಕಿರು ಬ್ಲಾಗಿಂಗ್’ ಹೆಚ್ಚು ಜನಪ್ರಿಯಗೊಳ್ಳುತ್ತಿರುವ ಕಾಲವಿದು. ಸಾವಿರಾರು ಜನರು ತಮ್ಮ ಮಾತೃಭಾಷೆಗಳಲ್ಲೇ ಆನ್‌ಲೈನ್‌ನಲ್ಲಿ ಸಂವಹನ ಸೇತುವೆ ಕಟ್ಟುತ್ತಿದ್ದಾರೆ. ತಂತ್ರಜ್ಞಾನದೊಂದಿಗೆ ಭಾಷೆಯೂ ಬೆಳೆಯುತ್ತಿದೆ. ಕೆಲ ಭಾಷೆಗಳು ಸಾಯುತ್ತಿವೆ, ಪ್ರಾದೇಶಿಕ ಭಾಷೆಗಳನ್ನು ಬಳಸುವರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ಹೊತ್ತಿನಲ್ಲಿ ಇದು ಇಷ್ಟೊಂದು ಉತ್ತಮ ಬೆಳವಣಿಗೆ.
 

ಆಧುನಿಕ ತಂತ್ರಜ್ಞಾನ ಜಗತ್ತನ್ನು ದಿನೇ ದಿನೇ ಕಿರಿದುಗೊಳಿಸುತ್ತಲೇ ಹೊರಟಿದೆ. ಜಗತ್ತು ಹೆಚ್ಚು ಹೆಚ್ಚು ಕಿರಿದುಗೊಳ್ಳುತ್ತಾ ಹೋದಂತೆ ತಂತ್ರಜ್ಞಾನಕ್ಕೆ ಅಬ್ಬರಕ್ಕೆ ಸಿಲುಕಿ ಸ್ಥಳೀಯ ಸಂಸ್ಕೃತಿ, ಭಾಷೆಗಳು ನಾಶವಾಗುತ್ತಿದೆ ಎನ್ನುವ ಆರೋಪವೂ ಕೇಳಿಬರುತ್ತಿದೆ. ವಿಶೇಷವಾಗಿ  ಅಲ್ಪಸಂಖ್ಯಾತ ಮತ್ತು ಅಳಿವಿನಂಚಿನಲ್ಲಿರುವ ಭಾಷೆಗಳು ತಂತ್ರಜ್ಞಾನದಿಂದ ಹೆಚ್ಚು ಅಪಾಯವನ್ನು ಎದುರಿಸುತ್ತಿವೆ ಎನ್ನುವ ಮಾತುಗಳಿವೆ.

ಇದು ತಂತ್ರಜ್ಞಾನದ ಒಂದು ಮುಖ. ಮತ್ತೊಂದೆಡೆ ಇದೇ ತಂತ್ರಜ್ಞಾನವೇ ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಇತ್ತೀಚೆಗೆ ಕಿರು ಬ್ಲಾಗಿಂಗ್ (Micro-blogging) ವ್ಯಾಪಕವಾಗಿ ಬಳಕೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಸಾಮಾಜಿಕ ತಾಣಗಳು ಪ್ರಾದೇಶಿಕ ಭಾಷೆಗಳಲ್ಲಿ ಕಿರು ಬ್ಲಾಗಿಂಗ್ ಸೇವೆಗಳನ್ನು ವಿಸ್ತರಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ.

ವ್ಯಕ್ತಿಯೊಬ್ಬನಿಗೆ ಹಲವು ಭಾಷೆಗಳು ತಿಳಿದಿದ್ದರೂ, ಆತ ತನ್ನ ಮೂಲ ಭಾಷೆಯಲ್ಲೇ ಮಾತನಾಡುವುದನ್ನು ಹೆಚ್ಚು ಇಷ್ಟಪಡುತ್ತಾನೆ. ಮಾತೃಭಾಷೆಯೊಂದಿಗಿನ ಭಾವನಾತ್ಮಕ ಸಂಬಂಧ ಮತ್ತು ಆ ಭಾಷೆಯೆಡೆಗಿನ ಪ್ರೀತಿ ಈ ಅಭಿಮಾನಕ್ಕೆ ಕಾರಣ ಇರಬಹುದು. ಆಧುನಿಕ ಸಂವಹನವೂ ಇದರಿಂದ ಹೊರತಾಗಿಲ್ಲ.   ನೀವು  Indigenoustweets.com  ಗೆ ಭೇಟಿ ನೀಡಿದರೆ ಅಲ್ಲಿ ಜಗತ್ತಿನ 68 ಬಾಷೆಗಳಲ್ಲಿ ಬರೆದಿರುವ ಕಿರು ಬ್ಲಾಗ್ ಬರಹಗಳ ಕೊಂಡಿಗಳನ್ನು ನೋಡಬಹುದು. ಇದು ಲಕ್ಷಾಂತರ ಬಳಕೆದಾರರನ್ನು ಸಂಪರ್ಕಿಸುತ್ತದೆ.

ಇವೆಲ್ಲಾ ಅಳವಿನಂಚಿನಲ್ಲಿರುವ ಸ್ಥಳೀಯ ಭಾಷೆಗಳು. ಕುತೂಹಲಕ್ಕೆ ಈ ತಾಣ ಪ್ರವೇಶಿಸಿದರೆ ಅಲ್ಲಿ ಕಾಂಗೊ ದೇಶದ ಈಶಾನ್ಯ ಭಾಗದ ಜನರು ಮಾತನಾಡುವ ‘ಲಿಂಗಲ’ ಅಥವಾ ನಗಲ ಎನ್ನುವ ಸ್ಥಳೀಯ ಭಾಷೆಯ ‘ಟ್ವೀಟ್’ಗಳಿದ್ದವು. ಈ ಭಾಷೆಯಲ್ಲಿ ದಾಖಲಾಗಿರುವ 1729 ಟ್ವೀಟ್‌ಗಳನ್ನು ಈ ತಾಣದಲ್ಲಿ ದಾಖಲಿಸಲಾಗಿದೆ.

ಈ ‘ಲಿಂಗಲ’ ಎನ್ನುವುದು ಕಾಂಗೊ ಭಾಷೆಯ ಉಪಭಾಷೆ. ಇಂತಹ 250ಕ್ಕೂ ಹೆಚ್ಚು ಉಪಭಾಷೆಗಳನ್ನು ಮಧ್ಯ ಮತ್ತು ದಕ್ಷಿಣ ಆಫ್ರಿಕಾದ ಜನರು ಮಾತನಾಡುತ್ತಾರೆ. ಇನ್ನೊಂದು ಭಾಷೆ ‘ಆಪಾನ್ ಒರಮೊ’ ಎನ್ನುವುದು. ಇಥಿಯೋಪಿಯಾ, ಕಿನ್ಯಾ ಮತ್ತು ಸೋಮಾಲಿಯಾಗಳ ಜನರು ಈ  ಪ್ರಾಚೀನ ಭಾಷೆಯನ್ನು ಮಾತನಾಡುತ್ತಾರೆ. 

‘ಆಪಾನ್ ಒರಮೊ’ ಭಾಷೆಯಲ್ಲಿ ಟ್ವೀಟ್ ಮಾಡುವರ ಸಂಖ್ಯೆ ಒಂದು ಸಾವಿರಕ್ಕೂ ಹೆಚ್ಚಿದೆ. ಹೀಗೆ ಹುಡುಕುತ್ತಾ ಹೋದರೆ, ಕ್ರೆಯೊಲ್ ಐಸೈನ್, ಪ್ರೈಸ್ಕ್, ಹೌಸ, ಅಕನ್, ರುಮಾನಿ, ದೌಲೊ ಹೀಗೆ ಹಲವು ಪ್ರಾದೇಶಿಕ ಭಾಷೆಗಳ ಟ್ವೀಟ್‌ಗಳನ್ನು ಸಂಪರ್ಕಿಸಬಹುದು.

ನೇಪಾಳಿ ಭಾಷೆಯಲ್ಲಿ ಟ್ವೀಟ್ ಮಾಡುವ 17ಜನರನ್ನು ಈ ತಾಣದಲ್ಲಿ ಪಟ್ಟಿ ಮಾಡಲಾಗಿದೆ. ಕನ್ನಡ ಟ್ವೀಟ್‌ಗಳೇನಾದರೂ ಈ ತಾಣದಲ್ಲಿ ಕಾಣಿಸುತ್ತಿವೆಯೇ ಎಂದು ಹುಡುಕಿದರೆ ನಿರಾಶೆ.

ಆದರೂ, ಒಮ್ಮೆ ಊಹಿಸಿ ನೋಡಿ. ಜಗತ್ತಿನ ಸಾವಿರಾರು ಸ್ಥಳೀಯ ಭಾಷೆಗಳು ಆನ್‌ಲೈನ್‌ನಲ್ಲಿ ಎಷ್ಟೊಂದು ಸುಂದರ ಸಂವಹನ ಕ್ರಾಂತಿ ನಡೆಸುತ್ತಿದೆ. ಇವುಗಳಲ್ಲಿ ಹಲವು ಭಾಷೆಗಳಿಗೆ ಲಿಪಿಯೇ ಇಲ್ಲ.! ಭಾಷೆ ಸಾಯುತ್ತಿದೆ, ಪ್ರಾದೇಶಿಕ ಭಾಷೆಗಳನ್ನು ಬಳಸುವರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ಹೊತ್ತಿನಲ್ಲಿ ಇದು ಇಷ್ಟೊಂದು ಉತ್ತಮ ಬೆಳವಣಿಗೆ.

ಇಂತದೊಂದು ಸುಂದರ ತಾಣವನ್ನು ಅಭಿವೃದ್ಧಿಪಡಿಸಿದವರು ಅಮೆರಿಕದ ಸೆಂಟ್ ಲೂಯಿಸ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಉಪನ್ಯಾಸಕ ಕೆವಿನ್ ಸ್ಕ್ಯಾನಲ್. ಆನ್‌ಲೈನ್‌ನಲ್ಲಿ ಮೂಲ ಭಾಷೆಯಲ್ಲೇ ಸಂವಹನ ನಡೆಸುವ ಸಾವಿರರಾರು ಜನರನ್ನು ಕಂಡು ಕೆವಿನ್‌ಗೆ ಇಂಥದೊಂದು ಯೋಜನೆ ಹೊಳೆದಿದೆ. ಐರಿಶ್ ಭಾಷೆಯಲ್ಲೇ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡುವರ ಸಂಖ್ಯೆ ಸಾವಿರಕ್ಕೂ ಹೆಚ್ಚಿದೆ ಎನ್ನುತ್ತಾರೆ ಕೆವಿನ್.

ಈಶಾನ್ಯ ಫ್ರಾನ್ಸ್‌ನ ‘ಬಾಸ್ಕ್ಯೂ’ ಭಾಷೆಯಲ್ಲಿ ಟ್ವೀಟ್‌ಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಸದ್ಯ ಈ ಭಾಷಾ ಬಳಕೆದಾರರ ಸಂಖ್ಯೆ ಟ್ವಿಟ್ಟರ್‌ನಲ್ಲಿ 3ಸಾವಿರಕ್ಕೂ ಹೆಚ್ಚಿದೆ. ನಾವು ಈಗಾಗಲೇ 68 ಸ್ಥಳೀಯ ಭಾಷೆಗಳನ್ನು ಪತ್ತೆ ಹಚ್ಚಿದ್ದೇವೆ. ಮುಂದಿನ 8 ವರ್ಷಗಳಲ್ಲಿ ಆನ್‌ಲೈನ್ ಭಾಷಾ ಸಮುದಾಯಗಳ ನೆರವಿನೊಂದಿಗೆ ಪ್ರಪಂಚದ 500ಕ್ಕೂ ಹೆಚ್ಚು ಸ್ಥಳೀಯ ಭಾಷೆಗಳನ್ನು ಈ ತಾಣಕ್ಕೆ ಸೇರ್ಪಡೆಗೊಳಿಸಲಾಗುವುದು ಎನ್ನುತ್ತಾರೆ ಕೆವಿನ್, 

 ಸದ್ಯ ಟ್ವಿಟ್ಟರ್‌ನಲ್ಲಿ ನೋಂದಾಯಿತಗೊಂಡಿರುವ 6,878 ಜನರು ತಮ್ಮ ಮೂಲ ಭಾಷೆಯಲ್ಲೇ ಸಂವಹನ ನಡೆಸುತ್ತಾರೆ ಎನ್ನುವುದನ್ನು ಕೆವಿನ್ ಪತ್ತೆ ಹಚ್ಚಿದ್ದಾರೆ. ಆಸ್ಟ್ರೇಲಿಯಾದ ನ್ಯೂ ಸೌತ್‌ವೇಲ್ಸ್‌ನ ಚಿಕ್ಕ ಪ್ರದೇಶವೊಂದರ ಜನರು ಮಾತನಾಡುವ ಅಳಿವಿನಂಚಿನಲ್ಲಿರುವ ಪುಟಾಣಿ ಭಾಷೆ ‘ಗ್ಯಾಮಿಲರೈಗೆ’ಒಬ್ಬನೇ ಒಬ್ಬ ಟ್ವಿಟ್ಟರ್ ಬಳಕೆದಾರ ಇದ್ದಾನೆ ಎನ್ನುತ್ತಾರೆ ಅವರು. ‘ಸಾಮಾಜಿಕ ತಾಣಗಳು ಇಂಗ್ಲೀಷ್ ಮತ್ತು ಜಾಗತಿಕ ಭಾಷಾ ಸಂಸ್ಕೃತಿಯನ್ನು ಮಾತ್ರ ಮೇಲ್ದರ್ಜೆಗೆ ಏರಿಸುತ್ತಿವೆ’ ಎನ್ನುವ ಕೆವಿನ್, ಅಲ್ಪಸಂಖ್ಯಾತ ಭಾಷೆಗಳನ್ನು ರಕ್ಷಿಸಲು ಮತ್ತು ಇಂತಹ ಭಾಷೆಗಳನ್ನು ಮಾತನಾಡುವವರನ್ನು ಪರಸ್ಪರ ಸಂಪರ್ಕಿಸಲು ಈ ತಾಣ ಹುಟ್ಟುಹಾಕಿದ್ದೇನೆ ಎನ್ನತ್ತಾರೆ.

ಕೆವಿನ್ ಪ್ರಯತ್ನದ ನಂತರ ‘ಟ್ವಿಟ್ಟರ್’ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳು ಸ್ಥಳೀಯ ಭಾಷೆಗಳಿಗಿರುವ ಈ ವಿಪುಲ ಅವಕಾಶಗಳತ್ತ ಬೆರಗುಗಣ್ಣಿನಿಂದ ನೋಡುತ್ತಿವೆ.

ಆದರೆ, ದೊಡ್ಡ ಪ್ರಮಾಣದ ಜನಸಮುದಾಯವನ್ನು ಏಕಕಾಲಕ್ಕೆ ತಲುಪಲು ಬಳಕೆದಾರರು ‘ಇಂಗ್ಲೀಷ್’ ಅಥವಾ ಇತರೆ ಜಾಗತಿಕ ಭಾಷೆಗಳನ್ನು ಬಳಸುತ್ತಿದ್ದಾರೆ. ಆದರೆ, ಇದೇ ವ್ಯಕ್ತಿಗಳು ತಮ್ಮ ಕುಟುಂಬವರ್ಗ ಮತ್ತು ಸ್ನೇಹಿತರನ್ನು ಸಂಪರ್ಕಿಸಲು ಪ್ರಯತ್ನಿಸುವಾಗ ಪ್ರಾದೇಶಿಕ ಭಾಷೆಯನ್ನೇ ಬಳಸುತ್ತಾರೆ.

ಈ ತಾಣವೂ ತುಂಬ ಸರಳವಾಗಿದೆ. ಇಲ್ಲಿ ನೀಡಿರುವ ಪಟ್ಟಿಯಲ್ಲಿ ಬೇಕಾದ ಭಾಷೆಯನ್ನು ಕ್ಲಿಕ್ಕಿಸಿದರೆ, ಅದು ನೇರವಾಗಿ, ಆ ಭಾಷೆಗಳಲ್ಲಿ ಟ್ವೀಟ್ ಮಾಡುವರ ಪಟ್ಟಿಯನ್ನು ಸಂಪರ್ಕಿಸುತ್ತದೆ. ‘ಜನರು ಹೆಚ್ಚು ಸಹಜವಾಗಿ ಮತ್ತು ಖುಷಿಯಿಂದ ಸಾಮಾಜಿಕ ಸಂವಹನ ತಾಣಗಳನ್ನು ಬಳಸಿಕೊಳ್ಳಲು ಪ್ರಾದೇಶಿಕ ಭಾಷಾ ಸಂವಹನ ಹೆಚ್ಚಬೇಕು ಎನ್ನುತ್ತಾರೆ ಕೆವಿನ್. ಈ ಮಾತಿನಲ್ಲಿ ಜಗತ್ತಿನ ಸಾವಿರಾರು ಭಾಷೆ ಮತ್ತು ಸಂಸ್ಕೃತಿಯೆಡೆಗಿನ  ಪ್ರೀತಿ ಮತ್ತು ಕಾಳಜಿಯೂ ವ್ಯಕ್ತವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT