ಫೇಸ್‌ಬುಕ್‌ನಲ್ಲಿದ್ದೀರಾ? ಇದು ಎಲ್ಲರೂ ಈಗ ಸಾಮಾನ್ಯವಾಗಿ ಕೇಳುವ ಪ್ರಶ್ನೆ. ಫೇಸ್‌ಬುಕ್ ಸಾಮಾಜಿಕ ಜಾಲತಾಣ ಬಳಸದವರು ಯಾರಿದ್ದಾರೆ? ಎಲ್ಲೋ ಕಳಚಿಕೊಂಡ ಸ್ನೇಹಬಂಧಕ್ಕೆ ಫೇಸ್‌ಬುಕ್‌ನಿಂದ ಬೆಸುಗೆ ಸಾಧ್ಯ.
ಕಾಲೇಜಿನ, ಪ್ರೌಢಶಾಲೆಯ ಹಳೆಯ ಸಹಪಾಠಿಗಳು, ವಿದೇಶದಲ್ಲೆಲ್ಲೋ ನೆಲೆಸಿದ ಸ್ನೇಹಿತರೊಂದಿಗಿನ ಸ್ನೇಹ ಸಂಬಂಧ ಮತ್ತೊಮ್ಮೆ ಚಿಗುರಲು ಫೇಸ್‌ಬುಕ್ ಕಾರಣವಾಗುತ್ತದೆ.
ಸರಿ, ನೀವು ಫೇಸ್‌ಬುಕ್‌ನಲ್ಲಿದ್ದೀರಾ? ಹಾಗಿದ್ದಲ್ಲಿ ನೀವು ಅದರಲ್ಲಿ ನಿಮ್ಮ ಯಾವ ಭಾವಚಿತ್ರವನ್ನು ಪೋಸ್ಟ್ ಮಾಡಿದ್ದೀರಿ? ಅಥವಾ ಲಗತ್ತಿಸಿದ್ದೀರಿ? ನಿಮ್ಮ ಭಾವಚಿತ್ರ ನಿಮ್ಮ ಬಗೆಗೆ ಏನನ್ನು ತಿಳಿಸುತ್ತದೆ? ಒಮ್ಮೆ ತಪಾಸಣೆ ನಡೆಸಿ. ನಿಮ್ಮ ಭಾವಚಿತ್ರ ನಿಮಗೇ ಖುಷಿ ನೀಡದಿದ್ದಲ್ಲಿ ಅದನ್ನು ಬದಲಾಯಿಸಿ.
ಅತ್ಯಂತ ಸುಂದರ ಹಾಗೂ ಆಕರ್ಷಕವಾದದ್ದನ್ನು ಲಗತ್ತಿಸಿ. ಏಕೆಂದರೆ ಇಂತಹ ಸಾಮಾಜಿಕ ಸಂಪರ್ಕ ತಾಣಗಳ ಬಳಕೆದಾರರು ನೀವು ಬರೆದಿರುವ ಬರಹಕ್ಕಿಂತಲೂ ನಿಮ್ಮ ಚಿತ್ರಗಳನ್ನು ನೋಡಿ ನಿಮ್ಮ ವ್ಯಕ್ತಿತ್ವ ಅಳೆಯುತ್ತಾರೆ ಎಂದು ಈ ಕುರಿತು ಅಧ್ಯಯನ ನಡೆಸಿದ ಅಮೆರಿಕದ ಒಹಿಯೊ ಸ್ಟೇಟ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ನಾವು ಲಗತ್ತಿಸುವ ಭಾವಚಿತ್ರವೇ ವೀಕ್ಷಕರಲ್ಲಿ ನಮ್ಮ ಕುರಿತಾಗಿನ ಭಾವನೆಗಳನ್ನು ಹೊರಹೊಮ್ಮಿಸುವುದರಿಂದ ಬೇರೆ ವಿಶೇಷಣಗಳ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಉದಾಹರಣೆಗೆ ಫೇಸ್‌ಬುಕ್‌ನಲ್ಲಿ ಲಗತ್ತಿಸಿದ ಭಾವಚಿತ್ರವನ್ನು ನೋಡಿ ವಿದ್ಯಾರ್ಥಿಗಳ ಗುಂಪು ಆತನೊಬ್ಬ ಸ್ನೇಹಜೀವಿ ಎಂದು ಪ್ರತಿಕ್ರಿಯಿಸಿದರಂತೆ. ಆದರೆ, ಆತ ಮಾತ್ರ ತನ್ನ ಕುರಿತಾಗಿನ ಬರಹದಲ್ಲಿ ತಾನೊಬ್ಬ ಅಂತರ್ಮುಖಿ ಎಂದು ಬರೆದುಕೊಂಡಿದ್ದನಂತೆ. ಕೆಲವೊಮ್ಮೆ ಫೇಸ್‌ಬುಕ್‌ನಲ್ಲಿ ಪ್ರೊಫೈಲ್ ಚಿತ್ರದ ಜಾಗದಲ್ಲಿ ವಿಭಿನ್ನ ಭಾವಗಳ ಚಿತ್ರಗಳು ಕಾಣಿಸಿಕೊಂಡಾಗ ವ್ಯಕ್ತಿತ್ವ ಅರಿಯಲು ಬರಹಗಳತ್ತ ಗಮನ ಕೊಡಲೇ ಬೇಕಾಗುತ್ತದೆ ಎನ್ನುತ್ತಾರೆ ಸಂಶೋಧಕರು.
`ಸಾಮಾಜಿಕ ಜಾಲ ತಾಣಗಳನ್ನು ಸಂದರ್ಶಿಸುವವರಿಗೆ ನಾವು ಲಗತ್ತಿಸುವ ಭಾವಚಿತ್ರಗಳು ನಮ್ಮ ಬಗೆಗಿನ ಭಾವನೆಗಳನ್ನು ಪ್ರತಿಬಿಂಬಿಸುವ ಮೊದಲ ಹೆಜ್ಜೆಯಾಗಿದೆ~ ಎಂದು ಪ್ರಮುಖ ಬರಹಗಾರ ಬ್ರಾಂಡನ್ ವ್ಯಾನ್‌ಡರ್ ಹೀಡ್ ಅವರನ್ನು ಉಲ್ಲೇಖಿಸಿ ಡೈಲಿ ಮೇಲ್ ವರದಿ ಮಾಡಿದೆ.
ನಿಮ್ಮ ಸಕಾರಾತ್ಮಕ ಗುಣಗಳನ್ನು ಬಣ್ಣಿಸುವ ಚಿತ್ರವನ್ನೇ ಜನ ಇಷ್ಟಪಡುತ್ತಾರೆ. ಒಂದು ವೇಳೆ ಚಿತ್ರ ನಕಾರಾತ್ಮಕ ಅಭಿಪ್ರಾಯವನ್ನು ಬೀರುತ್ತಿದ್ದಲ್ಲಿ ಜನ ನಿಮ್ಮನ್ನು ಅರಿಯಲು ಇತರ ಮಾರ್ಗಗಳನ್ನು ಆಶ್ರಯಿಸುತ್ತಾರೆ ಎಂದು ವ್ಯಾನ್‌ಡರ್ ತಿಳಿಸುತ್ತಾರೆ.
ಸುಮಾರು 195 ಕಾಲೇಜು ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು. ಈ ವಿದ್ಯಾರ್ಥಿಗಳಿಗೆ ಪ್ರೊಫೈಲ್‌ಗಳಲ್ಲಿ ಕಂಡುಬರುವ ಭಾವಚಿತ್ರ ಮತ್ತು ಬರಹವನ್ನು ನೋಡಿ ಅವರು ಎಷ್ಟು ಸ್ನೇಹಪರರು ಎಂಬುದನ್ನು ಗುರುತಿಸಿ ಒಂದರಿಂದ ಏಳರವರೆಗೆ ಅಂಕಗಳನ್ನು ನೀಡುವಂತೆ ತಿಳಿಸಲಾಗಿತ್ತು.
ಸ್ನೇಹಿತರ ಜತೆ ರಾತ್ರಿ ವೇಳೆಯ ಪಾರ್ಟಿಯಲ್ಲಿ ಸಂತಸದಿಂದಿದ್ದ ಚಿತ್ರವಿರುವ ಪ್ರೊಫೈಲ್‌ಗೆ ವಿದ್ಯಾರ್ಥಿಗಳು ಹೆಚ್ಚಿನ ಅಂಕ ನೀಡಿದ್ದಲ್ಲದೆ ಹೆಚ್ಚಿನ ಸಂಖ್ಯೆಯ ಸ್ನೇಹಿತರನ್ನು ಹೊಂದಿರುವ ಆತ ಅತ್ಯಂತ ಸಂತಸದ ವ್ಯಕ್ತಿ ಎಂದು ಬಣ್ಣಿಸಿದ್ದರಂತೆ.
ವಿರೋಧಾಭಾಸ ಏನೆಂದರೆ ಆತ ತಾನು ಅಂತರ್ಮುಖಿ ಎಂದೇ ಬರೆದುಕೊಂಡಿದ್ದ. ಇದೇ ವೇಳೆ ಚಿತ್ರದಲ್ಲಿ ಅಂತರ್ಮುಖಿಯಾಗಿ ಕಂಡುಬಂದಿದ್ದ ಚಿತ್ರಗಳತ್ತ ವಿದ್ಯಾರ್ಥಿಗಳು ಗಮನಹರಿಸಲೇ ಇಲ್ಲ.
ಬರಹದಲ್ಲಿ ಅಂತರ್ಮುಖಿ ಎಂದು ಬರೆದಿದ್ದವರನ್ನು ವಿದ್ಯಾರ್ಥಿಗಳು ಅಂತರ್ಮುಖಿಯನ್ನಾಗಿಯೇ ಗುರುತಿಸಿದ್ದರು. ಇದೇ ವೇಳೆ ಬರಹದಲ್ಲಿ ಸ್ನೇಹಜೀವಿ ಎಂದು ಬರೆದಿದ್ದವರನ್ನು ಸ್ವಲ್ಪ ಮಟ್ಟಿಗೆ ಅಂತರ್ಮುಖಿ ಎಂದು ಗುರುತಿಸಿದ್ದಾರೆ.
ಇದು ಜನರು ಬರಹಗಳಿಗಿಂತ ಚಿತ್ರಕ್ಕೇ ಹೆಚ್ಚು ಪ್ರಾಮುಖ್ಯ ಕೊಡುತ್ತಾರೆ ಎನ್ನುವುದು ಸ್ಪಷ್ಟಪಡಿಸುತ್ತದೆ.
ಸಾಮಾನ್ಯವಾಗಿ ಫೇಸ್‌ಬುಕ್‌ನಂತಹ ಎಲ್ಲರೂ ವೀಕ್ಷಿಸುವ ತಾಣಗಳಲ್ಲಿ ಜನರು ಸಂತಸದಿಂದಿರುವ ಚಿತ್ರಗಳನ್ನೇ ಲಗತ್ತಿಸಲು ನಿರೀಕ್ಷಿಸುತ್ತಾರೆ ಎಂದೂ ಸಂಶೋಧಕರು ಅಭಿಪ್ರಾಯಪಡುತ್ತಾರೆ.
ಹಾಗಾದರೆ ಇನ್ನೇಕೆ ತಡ, ಫೇಸ್‌ಬುಕ್ ಸಂದರ್ಶಿಸುವ ಎಲ್ಲರೂ ನಿಮ್ಮನ್ನು ಕುರಿತು ಸಕಾರಾತ್ಮಕ ಭಾವನೆ ತಳೆಯುವ ಸಲುವಾಗಿ ನಿಮ್ಮ ಅತ್ಯುತ್ತಮ ಚಿತ್ರವನ್ನೇ ಲಗತ್ತಿಸಿ. ನೀವೂ ಸಂತಸದಿಂದರಿ, ಹಾಗೆಯೇ ಇತರರನ್ನೂ ಖುಷಿಪಡಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.