ADVERTISEMENT

ಮುಗಿದ ಡಿಸ್ಕವರಿ ಹಾರಾಟ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 19:30 IST
Last Updated 15 ಮಾರ್ಚ್ 2011, 19:30 IST


ಹ್ಯೂಸ್ಟನ್... ಕೊನೆಯ ಬಾರಿಗೆ ಡಿಸ್ಕವರಿಯ ಚಕ್ರ ನಿಲ್ಲುತ್ತಿದೆ...’
-ಕಮಾಂಡರ್ ಸ್ಟೀವನ್ ಲಿಂಡ್ಸೆ ಭಾವುಕರಾಗಿ ನುಡಿದ ಮಾತಿದು.

ಮಾರ್ಚ್ 10 (ಕಳೆದ ಗುರುವಾರ) ಬಾಹ್ಯಾಕಾಶ ಅಧ್ಯಯನ ಕ್ಷೇತ್ರದ ಪುಟದಲ್ಲಿ ಇತಿಹಾಸವೊಂದು ದಾಖಲಾಯಿತು.
ಅಂತರಿಕ್ಷಯಾನಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕರೆದೊಯ್ಯುತ್ತಿದ್ದ ಬಾಹ್ಯಾಕಾಶ ನೌಕೆ ‘ಡಿಸ್ಕವರಿ’ 13 ದಿನಗಳ ತನ್ನ ಕೊನೆಯ ಯಾನವನ್ನು ಯಶಸ್ವಿಯಾಗಿ ಮುಗಿಸಿ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರಕ್ಕೆ ಬಂದಿಳಿಯಿತು.

ತನ್ನ 27 ವರ್ಷಗಳ ಯಶಸ್ವಿ ಹಾರಾಟ ಜೀವನದಲ್ಲಿ ನಾಸಾ ವಿಜ್ಞಾನಿಗಳು ರೂಪಿಸಿದ್ದ ಹಲವು ಬಾಹ್ಯಾಕಾಶ ಯೋಜನೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ  ‘ಡಿಸ್ಕವರಿ’ ನೌಕೆಯ ಅಂತಿಮ ಭೂ ಸ್ಪರ್ಶ  ಮಾಡಿದ ಸಂದರ್ಭದಲ್ಲಿ ನೂರಾರು ಖಗೋಳ ಆಸಕ್ತರು ಹ್ಯೂಸ್ಟನ್‌ನಲ್ಲಿರುವ ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ನೆರೆದಿದ್ದರು.

ತನಗೆ ನೀಡಿದ ಕೆಲಸವನ್ನು ಪ್ರತಿ ಬಾರಿಯು ಯಶಸ್ವಿಯಾಗಿ ನಿರ್ವಹಿಸಿ ಖಗೋಳ ವಿಜ್ಞಾನಿಗಳ ನೆಚ್ಚಿನ ನೌಕೆ ‘ಡಿಸ್ಕವರಿ’ಯು ತನ್ನ ಅತ್ಯುತ್ತಮ ಸಾಮರ್ಥ್ಯವನ್ನು ಕೊನೆಯ ಸಲವೂ ಸಾಬೀತು ಪಡಿಸಿತು.

ಡಿಸ್ಕವರಿಯ ಹಾದಿ...
ನಾಸಾ ವಿಜ್ಞಾನಿಗಳು ‘ಡಿಸ್ಕವರಿ’ಯ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಮಡಿದ್ದು 1979ರಲ್ಲಿ.   ಐದು ವರ್ಷಗಳ ಬಳಿಕ ಅಂದರೆ 1984ರಲ್ಲಿ ಅದು ಮೊದಲ ಬಾರಿಗೆ ಗಗನಯಾನಿಗಳನ್ನು ಹೊತ್ತು ಅಂತರಿಕ್ಷಕ್ಕೆ ನೆಗೆದಿತ್ತು.

ಅಲ್ಲಿಂದ ಇಲ್ಲಿಯವರೆಗೆ 27 ವರ್ಷಗಳ ಕಾಲ 39 ಬಾರಿ ಡಿಸ್ಕವರಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾನಿಗಳನ್ನು ಹೊತ್ತೊಯ್ದು ಮರಳಿದೆ.

ಸರಿ ಸುಮಾರು 241 ದಶಲಕ್ಷ ಕಿ.ಮೀಗಳಷ್ಟು ದೂರ ಕ್ರಮಿಸಿರುವ ಈ ಬಾಹ್ಯಾಕಾಶ ನೌಕೆ, ಒಟ್ಟು 365 ದಿನಗಳನ್ನು ಅಂತರಿಕ್ಷದಲ್ಲಿಯೇ ಕಳೆದಿದೆ!

ಇತರ ಬಾಹ್ಯಾಕಾಶ ನೌಕೆಗಳಿಗೆ ಹೋಲಿಸಿದರೆ, ಅತಿ ಹೆಚ್ಚು ಬಾರಿ ಅಂತರಿಕ್ಷಕ್ಕೆ ಪ್ರಯಾಣ ಮಾಡಿದ, ಹೆಚ್ಚು ಗಗನಯಾನಿಗಳನ್ನು ಹೊತ್ತೊಯ್ದ ಶ್ರೇಯ ಕೂಡ ಡಿಸ್ಕವರಿಯದ್ದೇ.

ಮುಂದೆ...
ಕಳೆದ ಗುರುವಾರ ಭೂಮಿಯನ್ನು ಸ್ಪರ್ಶಿಸಿದ ಬಳಿಕ ಡಿಸ್ಕವರಿ ನೌಕೆಯನ್ನು ವಿಜ್ಞಾನಿಗಳ ತಂಡವೊಂದಕ್ಕೆ ಹಸ್ತಾಂತರಿಸಲಾಗಿದೆ.

ಈ ತಂಡವು ಕೆಲವು ತಿಂಗಳ ಕಾಲ ನೌಕೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಅದನ್ನು ಕಾರ್ಯಾಚರಣೆಯಿಂದ  ಸಂಪೂರ್ಣವಾಗಿ ನಿವೃತ್ತಿ ಗೊಳಿಸಿದ ಬಳಿಕ ನೌಕೆಯನ್ನು ಸ್ಮಿತ್‌ಸೊನಿಯನ್ ಸಂಸ್ಥೆಯ ಸಂಗ್ರಹಾಲಯದಲ್ಲಿ ಇಡಲಾಗುವುದು. ಆ ಮೂಲಕ ‘ಡಿಸ್ಕವರಿ’ ನೆನಪು ಹಸಿರಾಗಿಯೇ ಉಳಿಯಲಿದೆ.

ನಿವೃತ್ತಿಗೆ ಕಾರಣ..
ನಾಸಾ ಆಡಳಿತವು ಉದ್ದೇಶಪೂರ್ವಕವಾಗಿಯೇ ಡಿಸ್ಕವರಿಗೆ ವಿದಾಯ ಹೇಳಿದ್ದಲ್ಲ. ಅಮೆರಿಕ ಸರ್ಕಾರ ಬಾಹ್ಯಾಕಾಶ ಯೋಜನೆಗಳಿಗೆ ನೀಡುವ ಅನುದಾನವನ್ನು ಕಡಿತಗೊಳಿಸಿರುವುದೇ ಇದಕ್ಕೆ ಕಾರಣ.

ಅನುದಾನದ ಕೊರತೆಯಿಂದಾಗಿಹಂತ ಹಂತವಾಗಿ ನಾಸಾ ತನ್ನ ಬಾಹ್ಯಾಕಾಶ ಯೋಜನೆಗಳ ಬಾಗಿಲುಗಳನ್ನು ಮುಚ್ಚುತ್ತಿದೆ.

ಡಿಸ್ಕವರಿ ಮಾತ್ರವಲ್ಲ...
ಮುಂಬರುವ ದಿನಗಳಲ್ಲಿ ನಾಸಾದ ಇನ್ನೂ ಎರಡು ಬಾಹ್ಯಾಕಾಶ ನೌಕೆಗಳು ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸಲಿವೆ.
 ಏಪ್ರಿಲ್ ತಿಂಗಳಲ್ಲಿ  ‘ಎಂಡೇವರ್’ ನೌಕೆ ನಿವೃತ್ತಿಗೊಳ್ಳಲಿದ್ದರೆ, ಜೂನ್‌ನಲ್ಲಿ ಅಟ್ಲಾಂಟಿಸ್ ನೌಕೆ ಕೂಡ ಕಾರ್ಯಾಚರಣೆಯನ್ನು ನಿಲ್ಲಿಸಲಿದೆ. ಆ ಮೂಲಕ ನಾಸಾದ ಬಾಹ್ಯಾಕಾಶ ಯೋಜನೆಗಳಿಗೆ ತೆರೆ ಬೀಳಲಿದೆ. ಒಂದು ವೇಳೆ ನಾಸಾದ ಬಾಹ್ಯಾಕಾಶ ಯೋಜನೆಗಳು ಸಂಪೂರ್ಣವಾಗಿ ಸ್ಥಗಿತಗೊಂಡರೆ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ 7000 ಉದ್ಯೋಗಗಳಿಗೆ ಕತ್ತರಿ ಬೀಳಲಿದೆ ಎಂದು ಅಂದಾಜಿಸಲಾಗಿದೆ.

ಅಮೆರಿಕದ ಭವಿಷ್ಯದ ಅಂತರಿಕ್ಷಯೋಜನೆಗಳ ಕುರಿತು ನಾಸಾ ವಿಜ್ಞಾನಿಗಳಿಗೂ ಸ್ಪಷ್ಟತೆ ಇಲ್ಲ.  ಮಂಗಳಗ್ರಹಕ್ಕೆ ಮಾನವನನ್ನು ಹೊತ್ತೊಯ್ಯಬಲ್ಲ ದೂರ -ವ್ಯಾಪ್ತಿಯ ರಾಕೆಟ್ ಅನ್ನು ನಾಸಾ ತಯಾರಿಸಬೇಕು ಎಂಬುದನ್ನು ಅಮೆರಿಕ ಸರ್ಕಾರ ಬಯಸುತ್ತಿದೆ. ಈ ನಿಟ್ಟಿನಲ್ಲಿ ನಾಸಾ ವಿಜ್ಞಾನಿಗಳು ಕಾರ್ಯಪ್ರವೃತ್ತರಾಗಿದ್ದರೂ, ಈಗ ಸರ್ಕಾರ ನೀಡುತ್ತಿರುವ ಅನುದಾನದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು  ಹೇಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT