ADVERTISEMENT

ಮೊಬೈಲ್ ಕಂಪೆನಿಗಳ ತಂತ್ರಾಂಶ ಸಮರ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2010, 10:55 IST
Last Updated 21 ಡಿಸೆಂಬರ್ 2010, 10:55 IST

ಹೆಚ್ಚೇನೂ ಬೇಡ, ಐದು ವರ್ಷಗಳ ಹಿಂದಿನ ಸನ್ನಿವೇಶ ಕಲ್ಪಿಸಿಕೊಳ್ಳಿ. ಆಗ ಮೊಬೈಲ್ ಖರೀದಿಸಬೇಕೆಂದರೆ ಗ್ರಾಹಕನ ಮುಂದಿರುತ್ತಿದ್ದ ಏಕೈಕ ಆಯ್ಕೆ ನೋಕಿಯಾ. ಕಲರ್ ಹ್ಯಾಂಡ್‌ಸೆಟ್ ಎಂದರೇನೇ ಅಂದಿನ ಕಾಲಕ್ಕೆ ಅದ್ಭುತ ತಂತ್ರಜ್ಞಾನ. ಈಗಿನ ಪರಿಸ್ಥಿತಿ ಊಹಿಸಿಕೊಳ್ಳಿ.ಮೊಬೈಲ್ ಖರೀದಿಸಬೇಕೆಂದು  ಸಮೀಪದ ಗಲ್ಲಿ ಅಂಗಡಿಗೆ ಭೇಟಿ ಕೊಟ್ಟರೂ  ಕಣ್ಮುಂದೆ ಎಷ್ಟೊಂದು ಆಯ್ಕೆಗಳು. ಎಷ್ಟೊಂದು ಹ್ಯಾಂಡ್‌ಸೆಟ್‌ಗಳು..!

ಹೌದು. ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ಮೊಬೈಲ್ ಹ್ಯಾಂಡ್‌ಸೆಟ್‌ಗಳೂ ಬದಲಾಗಿವೆ. ಅಷ್ಟೇ ಅಲ್ಲ, ಮೊಬೈಲ್ ಕಾರ್ಯನಿರ್ವಹಣಾ ತಂತ್ರಾಂಶಗಳೂ ಬದಲಾಗಿವೆ. ಮೊಬೈಲ್‌ನಲ್ಲಿ ಯಾವ ಕಾರ್ಯನಿರ್ವಹಣಾ ತಂತ್ರಾಂಶವಿದೆ? ಎಷ್ಟು ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು? ಇತ್ಯಾದಿ ತಾಂತ್ರಿಕ ಅಂಶಗಳೇ ಈಗಿನ ಮೊಬೈಲ್ ಖರೀದಿಯ ಮೊದಲ ಆದ್ಯತೆಗಳಾಗುತ್ತಿವೆ. ಮೊಬೈಲ್‌ಗಳು ಗಣಕಯಂತ್ರಗಳಾಗಿ ಬದಲಾಗಿರುವ ಈಗಿನ ‘ಮೊಬೈಲ್ ಕಂಪ್ಯೂಟಿಂಗ್’ ಯುಗದಲ್ಲಿ, ಒಟ್ಟಾರೆ ಮೊಬೈಲ್ ಬಳಕೆಯ ವಿಧಾನವೇ ಬದಲಾಗಿದೆ.

ಹೇಳಿ ಕೇಳಿ ಇದು ಸ್ಮಾರ್ಟ್‌ಫೋನ್‌ಗಳ ಕಾಲ. ದಿನಕ್ಕೊಂದು ಮೊಬೈಲ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಈ ಸ್ಪರ್ಧೆಯಲ್ಲಿ ಹಿಂದೆ ಬಿದ್ದಿರುವುದು ಹಳೆಯ ಮುಂಚೂಣಿ ಕಂಪೆನಿ ನೋಕಿಯಾವೇ. ನೋಕಿಯಾದ ಹೊಸ ಕಾರ್ಯನಿರ್ವಾಹಕರಾಗಿ ಸ್ಟೀಫನ್ ಇಲೊಪ್ ಮೂರು ತಿಂಗಳ ಹಿಂದಷ್ಟೇ ನೇಮಕಗೊಂಡಿದ್ದಾರೆ. ಇಲೊಪ್ ಅವರನ್ನು ನೇಮಕಗೊಳಿಸಿರುವುದೇ ನೋಕಿಯಾ ಕಳೆದುಕೊಳ್ಳುತ್ತಿರುವ ಮಾರುಕಟ್ಟೆ ಏಕಸ್ವಾಮ್ಯವನ್ನು ಮರಳಿ ಪಡೆಯಲು ಎನ್ನುವ ಮಾತುಗಳು ಕೇಳಿಬರುತ್ತಿವೆ.

ಸದ್ಯ ನೋಕಿಯಾ ಮುಂದಿರುವ ದೊಡ್ಡ ಸಮಸ್ಯೆ ‘ಮೊಬೈಲ್ ಕಾರ್ಯನಿರ್ವಹಣಾ ತಂತ್ರಾಂಶಕ್ಕೆ ಸಂಬಂಧಿಸಿದ್ದು.  ನೋಕಿಯಾದ ‘ಸಿಂಬಿಯನ್’ (Symbian OS)  ತಂತ್ರಾಂಶ ಈಗಾಗಲೇ ಹಳತು ಎನ್ನುವ ಹಣೆಪಟ್ಟಿ ಅಂಟಿಸಿಕೊಂಡಿದೆ.ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಆ್ಯಪಲ್ ಐಫೋನ್ (Apple~s iOS) ಮತ್ತು ಅದರ ಆನ್‌ಲೈನ್ ಅಪ್ಲಿಕೇಷನ್‌ಗಳು ನೋಕಿಯಾ ನಡೆಗೆ ತೊಡಕಾಗಿವೆ. 

ಸದ್ಯ ಒಟ್ಟು ಹ್ಯಾಂಡ್‌ಸೆಟ್ ಮಾರಾಟದಲ್ಲಿ ನೋಕಿಯಾ ಮುಂದಿದ್ದರೂ, ಐಫೋನ್‌ನ ಜನಪ್ರಿಯತೆ ನೋಕಿಯಾದ ಸ್ಮಾರ್ಟ್‌ಫೋನ್ ಮಾರುಕಟ್ಟೆ ವ್ಯಾಪ್ತಿ ಕಿರಿದುಗೊಳಿಸುತ್ತಿದೆ ಎನ್ನುತ್ತಾರೆ ತಜ್ಞರು. ಈ ಹಿನ್ನೆಲೆಯಲ್ಲಿ ಸಿಂಬಿಯನ್ ತಂತ್ರಾಂಶಕ್ಕೆ ಬದಲಾಗಿ ‘ಮೈಮೊ’ (Maemo) ಎನ್ನುವ ಹೊಸ ಮುಕ್ತ ತಂತ್ರಾಂಶವನ್ನು ನೋಕಿಯಾ ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿದೆ.

ಗೂಗಲ್‌ನ ಮುಕ್ತ ‘ಆಂಡ್ರಾಯ್ಡಾ’ ತಂತ್ರಾಂಶಕ್ಕೆ ಬಂದರೆ, (ಶೇ 25) ಈಗಾಗಲೇ ಈ ತಂತ್ರಾಂಶ, ಎಲ್‌ಜಿ, ಸ್ಯಾಮ್‌ಸಂಗ್ ಮೊಬೈಲ್‌ಗಳಲ್ಲಿ ಜನಪ್ರಿಯವಾಗಿದೆ. ಹಲವು ಮೊಬೈಲ್ ನಿರ್ಮಾಣ ಕಂಪೆನಿಗಳು ತಮ್ಮ ಚಿಕ್ಕ ಮತ್ತು ಸ್ಪರ್ಶ ಸಂವೇದಿ ಪರದೆಯ ಮೊಬೈಲ್‌ಗಳಿಗೆ, ಟ್ಯಾಬ್ಲೆಟ್‌ಗಳಿಗೆ ಈ ತಂತ್ರಾಂಶವನ್ನೇ ಆಯ್ಕೆ ಮಾಡಿಕೊಳ್ಳುತ್ತಿವೆ. ಹೀಗಾಗಿ  ಆರಂಭದಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದ ಮತ್ತು ಹೆಚ್ಚು ಮೊಬೈಲ್‌ಗಳಲ್ಲಿ ಬಳಕೆಯಲ್ಲಿದ್ದ, (ಶೇ 37) ‘ಸಿಂಬಿಯನ್’ ತಂತ್ರಾಂಶ ಈಗಿನ ಟ್ರೆಂಡ್‌ಗೆ ಹೊಂದಿಕೊಳ್ಳಲಾಗದೇ ಸ್ಪರ್ಧೆಯಲ್ಲಿ ಹಿಂದೆ ಬಿದ್ದಿದೆ.

ಸದ್ಯ ಮೊಬೈಲ್ ತಂತ್ರಾಂಶ ಸಮರದಲ್ಲಿ ಮುಂದಿರುವವರು ಆ್ಯಪಲ್ ಮತ್ತು ಗೂಗಲ್. ಮೂರನೆಯ ಸ್ಥಾನದಲ್ಲಿ ರಿಮ್ ಬ್ಲ್ಯಾಕ್‌ಬೆರಿ ಇದೆ.  ವಿಂಡೋಸ್ ಮತ್ತು ಪಾಮ್ ಬಳಕೆದಾರರು ಸಂಖ್ಯೆ ನಿಧಾನವಾಗಿ ಬೆಳೆಯುತ್ತಿದೆ. ಬೆಳೆಯುತ್ತಿರುವ ಸ್ಮಾರ್ಟ್ ಫೋನ್ (ಚುರುಕಿನ) ಮತ್ತು ಟ್ಯಾಬ್ಲೆಟ್ ಮಾರುಕಟ್ಟೆ  ಗಮನಿಸಿದರೆ ನೋಕಿಯಾದ ‘ಸಿಂಬಿಯನ್’ ಈಗಾಗಲೇ ಹಿಂದೆ ಹೋಗಿದೆ ಎನ್ನುತ್ತಾರೆ ಮೊಬೈಲ್ ತಂತ್ರಾಂಶಗಳ ವಿಶ್ಲೇಷಕ ಅಲೆಕ್ಸಾಂಡರ್ ಪೆಟ್ರಿಕ್.

ಹಾಗೆ ನೋಡಿದರೆ, ಈಗಿನ ನೋಕಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟೀಫನ್ ಈ ಹಿಂದೆ ಮೈಕ್ರೋಸಾಫ್ಟ್‌ನಲ್ಲಿದ್ದವರು.ಈ ಹಿನ್ನೆಲೆಯಲ್ಲಿ ಮುಂಬರುವ ನೋಕಿಯಾ ಸ್ಮಾರ್ಟ್‌ಫೋನ್ ಆವೃತ್ತಿಗಳಲ್ಲಿ ಮೈಕ್ರೊಸಾಫ್ಟ್‌ನ  ತಂತ್ರಾಂಶ ಇರಲಿದೆ ಎನ್ನುವ ವದಂತಿಗಳು ಅಲ್ಲಲ್ಲಿ ಕೇಳಿಬರುತ್ತಿವೆ.

ಈ ನಡುವೆ ಆಂಡ್ರಾಯ್ಡಾ ತಂತ್ರಾಂಶದ ಮುಖ್ಯಸ್ಥ ಆಂಡ್ರೊ ರುಬಿನ್ ಕೂಡ, ನೋಕಿಯಾ ಸಿಂಬಿಯನ್‌ಗೆ ಗುಡ್‌ಬೈ ಹೇಳಿ, ಆಂಡ್ರಾಯ್ಡಾ ಬಳಕೆಯ ಸಾಧ್ಯತೆಯ ಕುರಿತು ಮಾತುಕತೆ ನಡೆಸಲಿದ್ದಾರೆ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ‘ನೋಕಿಯಾದ ಹೊಸ ಆಡಳಿತ ವರ್ಗ (ಸ್ಟೀಫನ್) ಹೊಸ ಯೋಜನೆಗಳಿಗೆ ತೆರೆದುಕೊಳ್ಳಬಹುದು’ ಎನ್ನುವ ವಿಶ್ವಾಸ ಅವರದು.

ನೋಕಿಯಾದ ಪಾಲಿಗಂತೂ ಈ ವರ್ಷ ಕಷ್ಟದ ಕಾಲ ಎಂದೇ ಹೇಳಬಹುದು. ಕಂಪೆನಿಯ ಶೇಕಡ 15ರಷ್ಟು ಷೇರುಗಳು ಕುಸಿತ ಕಂಡಿವೆ.ಹೊಸ ಸ್ಮಾರ್ಟ್‌ಫೋನ್‌ಗಳು ಹೊಸ ತಂತ್ರಾಂಶದೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿರುವುದು ನೋಕಿಯಾಗೆ ದೊಡ್ಡ ಸವಾಲಾಗಿದೆ. ಈಗ ನೋಕಿಯಾ ಆಂಡ್ರಾಯ್ಡಾ ತಂತ್ರಾಂಶದ ಮೊರೆ ಹೋದರೆ ಹೂಡಿಕೆದಾರರು ತಮ್ಮ ಷೇರುಗಳನ್ನು ಮಾರಾಟ ಮಾಡಬಹುದು ಎನ್ನುತ್ತಾರೆ ಡಾನಿಷ್ ಟೆಲಿಕಾಮ್ಸ್ ಸಲಹೆಗಾರ ಜಾನ್ ಸ್ಟ್ರಾಂಡ್. ಹೀಗಾದರೆ ನೋಕಿಯಾ ಮತ್ತೆ ಮೊಬೈಲ್ ಮಾರುಕಟ್ಟೆಯ ಕೊನೆಯ ಸ್ಪರ್ಧಾಳುವಾಗಿ  ಉಳಿಯುತ್ತದೆ ಎನ್ನುತ್ತಾರೆ ಅವರು. ಈಗ ನೋಕಿಯಾ ‘ಸಿಂಬಿಯನ್’ನಿಂದ ಆಂಡ್ರಾಯ್ಡಾಗೆ ಜಿಗಿದರೂ ಅದರ ಮಾರುಕಟ್ಟೆ ಬೆಳೆಯುತ್ತದೆ ಎನ್ನುವುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ‘ಇದೊಂದು ಪರಿಹಾರವಲ್ಲ, ಬದಲಿಗೆ  ವಿಫಲ ಯತ್ನ ಕೂಡ ಆಗಬಹುದು’ ಎನ್ನುತ್ತಾರೆ ನೋಕಿಯಾ ಷೇರಿನ ಪಾಲುದಾರ ಅಲೆನ್ ಬಿ ಲಾಂಚ್.

ಈ ಎಲ್ಲ ಸಮಸ್ಯೆಗಳ ಮಧ್ಯೆಯೇ ನೋಕಿಯಾ ಹೊಸ ತಂತ್ರಾಂಶ ಸಾಧ್ಯತೆಯ ಬಗ್ಗೆ ಯೋಚಿಸುತ್ತಿದೆ. ಮುಕ್ತ ತಂತ್ರಾಂಶ ‘ಮಿಗೊ’ (MeeGo) ಅಭಿವೃದ್ಧಿಯ ಬಗ್ಗೆ ಗಮನ ಹರಿಸುತ್ತಿದೆ. ‘ಮಿಗೊ’ ಆ್ಯಪಲ್ ಐಫೋನ್ ಮತ್ತು ಆಂಡ್ರಾಯ್ಡಾ ಏಕಸ್ವಾಮ್ಯ  ಮುರಿಯಲು ಪ್ರಮುಖ ಅಸ್ತ್ರವಾಗಬಹುದು ಎನ್ನುವ ನಂಬಿಕೆ ನೋಕಿಯಾದ್ದು. ಈ ವರ್ಷದ ಆರಂಭದಲ್ಲಿ ಇಂಟೆಲ್ ಮೊಬೈಲ್ ಲೀನಕ್ಸ್ ಆವೃತ್ತಿ ತಂತ್ರಾಂಶವನ್ನು ‘ಮಿಗೊ’ ಜತೆ ವಿಲೀನಗೊಳಿಸಲು ನೋಕಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆದರೆ, ನಂತರ ನೋಕಿಯಾ  ಇದನ್ನು ಅಲ್ಲಗಳೆದಿತ್ತು. ಈಗ ಆ ನಿಟ್ಟಿನಲ್ಲಿ ಸಣ್ಣ ಪ್ರಯತ್ನಗಳು ಮುಂದುವರೆದಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಇತ್ತ ಸ್ಟೀಫನ್ ನೋಕಿಯಾ ಉಸ್ತುವಾರಿ ವಹಿಸಿಕೊಂಡ ನಂತರ ಪರ್ಯಾಯ ತಂತ್ರಾಂಶ ಅಭಿವೃದ್ಧಿಯ ಬಗ್ಗೆ ಸಾಕಷ್ಟು ಯೋಜನೆ ಹಮ್ಮಿಕೊಂಡಿದ್ದಾರೆ. ಅದರಲ್ಲೂ  ಮುಖ್ಯವಾಗಿ (Qt technology) ಅಪ್ಲಿಕೇಷನ್ಸ್ ತಂತ್ರಾಂಶಗಳ ಅಭಿವೃದ್ಧಿ ಚುರುಕುಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.