ADVERTISEMENT

ಮೊಬೈಲ್ ಮಾತು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 18:30 IST
Last Updated 1 ಫೆಬ್ರುವರಿ 2011, 18:30 IST

ಟಾಟಾ ಡೊಕೊಮೊ ‘ಸ್ಪರ್ಶ’
ಲೈಂಗಿಕ ಶಿಕ್ಷಣ ಮತ್ತು ಸಂತಾನೋತ್ಪತ್ತಿ ಕುರಿತು ಮಾಹಿತಿ ನೀಡುವ   ‘ಸ್ವರ್ಶ’ ಸೇವೆಗೆ  ಟಾಟಾ ಡೊಕೊಮೊ ಚಾಲನೆ ನೀಡಿದೆ. ಈ ಸೇವೆಯು ಆರಂಭದಲ್ಲಿ ಇಂಗ್ಲೀಷ್, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಲಭ್ಯವಿದ್ದು, ಶೀಘ್ರದಲ್ಲಿಯೇ ಒರಿಯಾ, ಬೆಂಗಾಳಿ, ಗುಜರಾತ್, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಜಾರಿಗೊಳಿಸಲಾಗುವುದು. ಲೈಂಗಿಕ ಶಿಕ್ಷಣ ಮತ್ತು ಆರೋಗ್ಯದ ಕುರಿತು ಜಾಗೃತಿ ಮೂಡಿಸುವಂತ ಚುಟುಕು ಮಾಹಿತಿಯನ್ನು  ‘ಸ್ವರ್ಶ’  ಸೇವೆ ಒಳಗೊಂಡಿದೆ ಎಂದು ಕಂಪೆನಿ ಹೇಳಿದೆ.  ಭಾರತದಲ್ಲಿ ಇನ್ನೂ ಲೈಂಗಿಕತೆ ಕುರಿತು ಮುಕ್ತವಾಗಿ ಚರ್ಚಿಸಲು ಮಡಿವಂತಿಕೆ ಇದೆ. ಮೊಬೈಲ್ ಸಾರ್ವತ್ರಿಕ ಬಳಕೆಯಲ್ಲಿ ಇರುವುದರಿಂದ ‘ಸ್ವರ್ಶ’ ದೊಡ್ಡ ಪ್ರಮಾಣದ ಜನಸಮುದಾಯವನ್ನು ತಲುಪಲಿದೆ ಎಂದು ಟಾಟಾ ಡುಕೊಮೊದ ಉಪಾಧ್ಯಕ್ಷ ವಾಸ್ ಜುಬಿನ್ ಜಿಮ್ಮಿ ದುಬಾಶ್ ಅಭಿಪ್ರಾಯಪಟ್ಟಿದ್ದಾರೆ. ಟಾಟಾ ಡುಕೊಮೊ ಗ್ರಾಹಕರು 529222 ಸಂಖ್ಯೆಗೆ ಕರೆ ಮಾಡುವ ಮೂಲಕ ಈ ಸೇವೆ ಪಡೆಯಬಹುದು. 10 ದಿನಗಳ ‘ಸ್ಪರ್ಶ’ ಸೇವೆಗೆ ್ಙ 10 ಪಾವತಿಸಬೇಕು. ಬ್ರೌಸಿಂಗ್ ಶುಲ್ಕ ಪ್ರತಿ ಸೆಕೆಂಡ್‌ಗೆ ಒಂದು ಪೈಸೆ.

ಬಾಹ್ಯಾಕಾಶಕ್ಕೆ ಮೊಬೈಲ್
ನಿಮ್ಮ ಬಳಿ ಇರುವ ಮೊಬೈಲ್ ಅತಿಯಾದ ಉಷ್ಣಾಂಶ  ತಡೆದುಕೊಳ್ಳುವ ಹಾಗೂ ಅಂತರಿಕ್ಷದ ವಿಕಿರಣಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿದೆಯಾ? ಈ ಪ್ರಶ್ನೆಗೆ ಉತ್ತರ ಯೋಚಿಸುವ ಮುನ್ನ ಈ ಸುದ್ದಿಯನ್ನೊಮ್ಮೆ ಓದಿ.

ಬ್ರಿಟನ್ ಮೂಲದ ಸುರೆ ಸೆಟಲೈಟ್ ಟೆಕ್ನಾಲಜಿ ಲಿಮಿಟೆಡ್ (ಎಸ್‌ಎಸ್‌ಟಿಎಲ್) ವಿಜ್ಞಾನಿಗಳು ಬಾಹ್ಯಾಕಾಶಕ್ಕೆ ಮೊಬೈಲ್ ಒಂದನ್ನು ಕಳುಹಿಸುವ ಸಿದ್ಧತೆಯಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷಾಂತ್ಯಕ್ಕೆ ಅಂತರಿಕ್ಷಕ್ಕೆ ಪ್ರಯಾಣಿಸುವ  ಮೊಬೈಲ್ ಅಲ್ಲಿಂದಲೇ ಉಪಗ್ರಹ  ನಿಯಂತ್ರಿಸುತ್ತದೆ, ಜತೆಗೆ ಗ್ರಹ, ನಕ್ಷತ್ರಗಳ ಚಿತ್ರಗಳನ್ನು ತೆಗೆದು ಭೂಮಿಗೆ ರವಾನಿಸುತ್ತದೆ.  ಗೂಗಲ್ ಆಂಡ್ರಾಯ್ಡಾ ಕಾರ್ಯನಿರ್ವಹಣಾ ತಂತ್ರಾಂಶವಿರುವ ಸ್ಮಾರ್ಟ್‌ಫೋನ್ ಅನ್ನು ಈ ಪ್ರಯೋಗಾರ್ಥ ಪರೀಕ್ಷೆಗೆ ಬಳಸಿಕೊಳ್ಳಲಾಗಿದೆ.


 ಈ ಮೊಬೈಲ್ ಅಂತರಿಕ್ಷದ  ಕ್ಲಿಷ್ಟಕರ ವಾತಾವರಣದಲ್ಲೂ  ಕಾರ್ಯನಿರ್ವಹಿಸಲಿದೆ ಎಂದು  ‘ಎಸ್‌ಎಸ್‌ಟಿಎಲ್’ ಪ್ರಕಟಣೆ  ಆಧರಿಸಿ  ‘ಬಿಬಿಸಿ’ ವರದಿ ಮಾಡಿದೆ. ಮೊಬೈಲ್ ಫೋನ್‌ಗಳನ್ನು ಬಲೂನ್‌ಗಳಲ್ಲಿ ಭೂಮಿಯಿಂದ ಆಗಸದತ್ತ ಗರಿಷ್ಠ ಎತ್ತರಕ್ಕೆ  ಕಳುಹಿಸಿ ಈ ಹಿಂದೆ ನಡೆಸಲಾದ ಪರೀಕ್ಷೆ ಯಶಸ್ವಿಯಾಗಿತ್ತು. ಆದರೆ, ಇದೇ ಮೊದಲ ಬಾರಿಗೆ ಮೊಬೈಲ್ ಅನ್ನು ಅಂತರಿಕ್ಷಕ್ಕೆ ಕಳುಹಿಸಲಾಗುತ್ತಿದೆ. 

‘ಆಧುನಿಕ ಸ್ಮಾರ್ಟ್  ಫೋನ್‌ಗಳಲ್ಲಿ ವಿಪುಲ ತಾಂತ್ರಿಕ ಅವಕಾಶಗಳಿದ್ದು, ಇದನ್ನು ಬಾಹ್ಯಾಕಾಶ ಸಂಶೋಧನೆಗೆ ಬಳಸಿಕೊಳ್ಳಲಾಗುವುದು, ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ಇದು ತುಂಬಾ ಅಗ್ಗದ ಯೋಜನೆ. ಇದು ಯಶಸ್ವಿಯಾದರೆ ಭವಿಷ್ಯದಲ್ಲಿ ಉಪಗ್ರಹ ನಿಯಂತ್ರಣವನ್ನು ಮೊಬೈಲ್‌ನಿಂದ  ನಿರ್ವಹಿಸಲು ಸಾಧ್ಯ   ಎಂದು ‘ಎಸ್‌ಎಸ್‌ಟಿಎಲ್’ನ ಯೋಜನಾ ನಿರ್ವಾಹಕ ಶಹೂನ್ ಕೆನ್ಯಾನ್ ಹೇಳಿದ್ದಾರೆ.                                      l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.