ADVERTISEMENT

ರೇಷ್ಮೆ ನೂಲು ತೆಗೆವ ಸ್ಟೀರಿಂಗ್ ಯಂತ್ರ

ವಿದ್ಯಾರ್ಥಿ ತಂತ್ರಜ್ಞ

ಅನಿತಾ ಎಚ್.
Published 27 ಆಗಸ್ಟ್ 2013, 19:59 IST
Last Updated 27 ಆಗಸ್ಟ್ 2013, 19:59 IST

ರೇಷ್ಮೆ ನೂಲು ತೆಗೆಯುವ ಕೆಲಸಕ್ಕೆ ಮೊದಲಿನಂತೆ ಈಗ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ದೊರಕುತ್ತಿಲ್ಲ. ಇವೆಲ್ಲದಕ್ಕೆ ಪರಿಹಾರವಾಗಿ ಬೆಂಗಳೂರಿನ ಎಂ.ಎಸ್ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ತಂಡ ಸ್ಟೀರಿಂಗ್ ಯಂತ್ರ ಅಭಿವೃದ್ಧಿಪಡಿಸಿದ್ದಾರೆ.

ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು ಭಾಗದ ರೇಷ್ಮೆ ನೂಲು ಬಿಚ್ಚುವ ಕೇಂದ್ರಗಳಲ್ಲಿ ನೂರಾರು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಇಲ್ಲಿನ ಬಿಸಿ ಹಬೆ, ಆವಿಯಾಗುತ್ತಲೇ ಗಾಳಿಯಲ್ಲಿ ಬೆರೆತು ಹೋಗುವ ರಾಸಾಯನಿಕಗಳು, ಕುದಿವ ನೀರಿನಲ್ಲಿರುವ ರೇಷ್ಮೆ ಗೂಡಿನ ನೂಲಿನ ಎಳೆಯನ್ನು ಹುಡುಕಿ ತೆಗೆದು ರಾಟೆಗೆ ಜೋಡಿಸುವ ಕೆಲಸ ಬಹಳ ಕಷ್ಟದ್ದು. ಈ ಕಾರ್ಮಿಕರ ಕೈಗಳ ಚರ್ಮವಂತೂ ಬಿಸಿನೀರಿನ ಸತತ ಸ್ಪರ್ಶದಲ್ಲಿ ಬಹುತೇಕ ಬೆಂದು ಹೋಗಿರುತ್ತದೆ. ಇದೇ ಕೆಲಸ ಮುಂದುವರಿದಂತೆಲ್ಲ ಚರ್ಮ ಒರಟಾಗಿ ಜಡ್ಡುಗಟ್ಟಿ ಬಿಡುತ್ತದೆ.

ಇಂತಹ ರೇಷ್ಮೆ ನೂಲು ತೆಗೆಯುವ ಘಟಕಗಳಲ್ಲಿನ ಕಾರ್ಮಿಕರ ಆರೋಗ್ಯ ಹದಗೆಡುವುದು ಸಾಮಾನ್ಯ ಎನ್ನುವಂತಾಗಿದೆ. ಬಹುತೇಕ ಕಾರ್ಮಿಕರು ಚರ್ಮರೋಗ, ಆಸ್ತಮಾ, ತಲೆನೋವು ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕಾರ್ಮಿಕರ ಈ ಬವಣೆಗಳೇ ಮೆಕಾನಿಕಲ್ ಸ್ಟೀರಿಂಗ್ ಯಂತ್ರದ ಆವಿಷ್ಕಾರಕ್ಕೆ ಪ್ರೇರಣೆ ಎನ್ನುತ್ತಾರೆ ಬೆಂಗಳೂರಿನ ಎಂ.ಎಸ್ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಪಿ.ಎಸ್.ಅನಿಲ್‌ಕುಮಾರ್.

ರೇಷ್ಮೆ ನೂಲು ತೆಗೆಯುವ ಕೆಲಸಕ್ಕೆ ಮೊದಲಿನಂತೆ ಈಗ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ದೊರಕುತ್ತಿಲ್ಲ. ಇವೆಲ್ಲದಕ್ಕೆ ಪರಿಹಾರವಾಗಿ ಒಂದು ಯಂತ್ರ ಅಭಿವೃದ್ಧಿಪಡಿಸುವ ಚಿಂತನೆ ಮನಸ್ಸಿನಲ್ಲಿ ಮೂಡಿತು. ಈ ಕುರಿತು ಸ್ನೇಹಿತರಾದ ಬಿ.ಜಿ.ಸುಕೇಶ್ ಕುಮಾರ್, ಆರ್.ರವಿಕೀರ್ತನ್, ಎಂ.ವಿ.ಶರತ್ ಕುಮಾರ್ ಮತ್ತು ನಮ್ಮ ವಿಭಾಗದ ಮುಖ್ಯಸ್ಥರೊಂದಿಗೆ ಹಂಚಿಕೊಂಡಿದ್ದರಿಂದ ಮೆಕಾನಿಕಲ್ ಸ್ಟೀರಿಂಗ್ ಯಂತ್ರ ಅಭಿವೃದ್ಧಿ ಪಡಿಸಲು ಸಾಧ್ಯವಾಯಿತು ಎಂದರು.

ಯಂತ್ರದ ಜೋಡಣೆ
ಮೊದಲಿಗೆ ಫಿಕ್ಸೆಡ್ ಸ್ಟೆಮ್ ರಾಡ್‌ಗೆ ಬೋಲ್ಟ್ ಬಳಸಿ ಫ್ಲ್ಯಾಂಗ್ ಬ್ಲಾಕ್ ಜೋಡಿಸಿದೆವು. ಫ್ಲ್ಯಾಂಗ್ ಬ್ಲಾಕ್‌ಗೆ ಎಲ್-ಬ್ರಾಕೆಟ್ ಅಳವಡಿಸಿದೆವು. ನಂತರ ಎಲ್ ಬ್ರಾಕೆಟ್‌ಗೆ ಟಾಪ್ ಅಂಡ್ ಬಾಟಮ್ ಪ್ಲೇಟ್ ಅಸೆಂಬ್ಲಿ ಎಂಬ ಉಪಕರಣ ಜೋಡಿಸಿದೆವು. ಈ ಪ್ಲೇಟ್‌ಗೆ 12ರ ಅನುಪಾತದಲ್ಲಿ ಗೇರ್ ಬಾಕ್ಸ್ ಮತ್ತು 0.08 ಎಚ್‌ಪಿ ಮೋಟಾರ್ ಅಳವಡಿಸಿದೆವು. ಪ್ಲೇಟ್‌ಗಳ ನಡುವೆ ಐದು ಸ್ಪರ್ ಗೇರ್‌ಗಳನ್ನೂ ಅಳವಡಿಸಲಾಗಿದೆ. ಇದರಲ್ಲಿ ಒಂದು ಡ್ರೈವಿಂಗ್ ಗೇರ್, ಉಳಿದವು ಡ್ರಿವನ್ ಗೇರ್. ಡ್ರಿವನ್ ಗೇರ್‌ಗೆ ಬಟರ್‌ಫ್ಲೈ ವ್ಹೀಲ್ ಅಥವಾ ಜಿನೇವಾ ವ್ಹೀಲ್ ಸೇರಿಸಲಾಗಿದೆ.

ಟಾಪ್ ಅಂಡ್ ಬಾಟಮ್ ಪ್ಲೇಟ್‌ನಲ್ಲಿ `8' ಆಕಾರದ ಸ್ಲಾಟ್ ಮಿಲ್ಲಿಂಗ್ ಮಾಡಿರುವುದರಿಂದ ಅದರ ಮೂಲಕ ಸ್ಟಿರರ್ ಹೋಲ್ಡರ್ 8 ಅಂಕಿ ಆಕಾರದಲ್ಲಿಯೇ ತಿರುಗುತ್ತದೆ. ಸ್ಟಿರರ್(ದ್ರಾವಣ ತಿರುಗಿಸುತ್ತಾ ಇರುವ) ಹೋಲ್ಡರ್ ಒಳಗೆ ಬಿದಿರಿನ ಕಡ್ಡಿ ಸೇರಿಸಿದ್ದೇವೆ. ನೀರು ಮತ್ತು ರಾಸಾಯನಿಕದಲ್ಲಿ ಬೇಯುತ್ತಿರುವ ರೇಷ್ಮೆಗೂಡಿನ ಮೊದಲ ಎಳೆಗಳು ತಾವಾಗಿಯೇ ಕಡ್ಡಿಗೆ ಸಿಲುಕಿಕೊಳ್ಳುತ್ತವೆ ಎಂದರು.

ಕಾರ್ಯ ನಿರ್ವಹಣೆ
ಹಂಡೆಯಲ್ಲಿನ ಕುದಿಯುತ್ತಿರುವ ದ್ರಾವಣದಲ್ಲಿ 200ರಿಂದ 250 ಗ್ರಾಂಗಳಷ್ಟು ರೇಷ್ಮೆಗೂಡು ಹಾಕಬೇಕು. ನಂತರ ಯಂತ್ರವನ್ನು ಹಂಡೆಯ ನೇರಕ್ಕೆ ತಂದು ನಿಲ್ಲಿಸಿ ಸ್ವಿಚ್ ಹಾಕಿದರೆ ಸ್ಟಿರರ್ ಉಪಕರಣ 8 ಅಂಕಿಯ ಆಕಾರದಲ್ಲಿ ಗೂಡುಗಳನ್ನು ಅತ್ತಿಂದಿತ್ತ ತಿರುಗಿಸುತ್ತಾ ಇರುತ್ತದೆ. ಒಂದರಿಂದ ಎರಡು ನಿಮಿಷ ಈ ಕೆಲಸ ಮುಂದುವರಿಯುತ್ತದೆ. ನಂತರ ಗೂಡುಗಳ ಕೊನೆಯ ಎಳೆಗಳು ಸ್ಟಿರರ್‌ನಲ್ಲಿನ ಬಿದಿರು ಕಡ್ಡಿಗೆ ಸಿಲುಕಿಕೊಳ್ಳುತ್ತವೆ. ಇದನ್ನು ಜಾಲರಿ ಮೂಲಕ ಹೊರಗೆ ತೆಗೆದು ಎಳೆಗಳನ್ನು ಸ್ಟಿರರ್‌ನಿಂದ ಬೇರ್ಪಡಿಸಿ ರಾಟೆಯಲ್ಲಿ ಸುತ್ತಿಡಲು ಮುಂದಿನ ಕೆಲಸಕ್ಕೆ ವರ್ಗಾಯಿಸಬಹುದು ಎಂದು ಅನಿಲ್ ಕುಮಾರ್(ಮೊ: 7795804275) ವಿವರಿಸಿದರು.

`ನಮಗೆ ನೀಡಲಾಗಿದ್ದ ಕಾಲಾವಧಿಯಲ್ಲಿ ಈ ಯಂತ್ರ ಅಭಿವೃದ್ಧಿಪಡಿಸಲಷ್ಟೇ ಸಾಧ್ಯವಾಗಿದೆ. ಹೆಚ್ಚಿನ ಸಂಶೋಧನೆ ನಡೆಸಿ ಯಂತ್ರದಿಂದಲೇ ನೇರವಾಗಿ ಗೂಡುಗಳ ನೂಲು ರಾಟೆಗೆ ವರ್ಗಾವಣೆ ಆಗುವಂತೆ ಈ ಉಪಕರಣದಲ್ಲಿ ಇನ್ನಷ್ಟು ಸುಧಾರಣೆ ತರುವ ಆಲೋಚನೆ ಇದೆ. ಯಂತ್ರ ನೋಡಲು ಬಹಳ ಸರಳವಾಗಿ ಕಂಡರೂ ಈ ಯೋಜನೆಯನ್ನು ಕಷ್ಟಪಟ್ಟು ಪೂರ್ಣಗೊಳಿಸಿದ್ದೇವೆ.
ಇದಕ್ಕೆ ನ್ಯಾನೊ ಟೆಕ್ ಇನ್ನೊವೇಟಿವ್ ಎಂಜಿನಿಯರ್ ಸಂಸ್ಥೆ ಬೆಂಬಲವೂ ಸಿಕ್ಕಿದೆ. ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಶಿರಿಲ್ ಪ್ರಸನ್ನ, ಪ್ರೊ.ಶಿವಕುಮಾರ್ ಪ್ರೋತ್ಸಾಹಿಸಿದ್ದಾರೆ ಎಂದರು.

ನೆರವು ಬೇಕಿದೆ
ಸದ್ಯ ದೇಶದ ರೇಷ್ಮೆ ವಸ್ತ್ರೋದ್ಯಮದಿಂದ 25 ಸಾವಿರ ಮೆಟ್ರಿಕ್ ಟನ್‌ನಷ್ಟು ರೇಷ್ಮೆ ನೂಲಿಗೆ ಬೇಡಿಕೆ ಇದೆ. ಆದರೆ, ಈಗ ಕೇವಲ 18 ಸಾವಿರ ಮೆಟ್ರಿಕ್ ಟನ್ ರೇಷ್ಮೆ ನೂಲು ಉತ್ಪಾದನೆ ಆಗುತ್ತಿದೆ.

ಇನ್ನೊಂದೆಡೆ, ಬಹಳಷ್ಟು ಜನ ಜೀವನ ನಿರ್ವಹಣೆಗೆ ರೇಷ್ಮೆ ನೂಲು ಉದ್ಯಮವನ್ನೇ ನೆಚ್ಚಿಕೊಂಡಿದ್ದಾರೆ. ಕಾರ್ಮಿಕರ ಕೊರತೆ ಕಾರಣದಿಂದ ರೇಷ್ಮೆ ನೂಲು ಉದ್ಯಮ ಮುಚ್ಚಿಹೋಗಬಾರದು. ಈ ಹಿನ್ನೆಲೆಯಲ್ಲಿ ಈ ಮೆಕ್ಯಾನಿಕಲ್ ಸ್ಟೀರಿಂಗ್ ಯಂತ್ರ ರೈತ ಮತ್ತು ಉದ್ಯಮ ಸ್ನೇಹಿಯಾಗಿದೆ ಎಂಬುದು ಪಿ.ಎಸ್.ಅನಿಲ್‌ಕುಮಾರ್ ಅವರ ಅನಿಸಿಕೆ.

ಇಲಾಖೆಯಿಂದ ಮಾನ್ಯತೆ
ಮೆಕಾನಿಕಲ್ ಸ್ಟೀರಿಂಗ್ ಯಂತ್ರಕ್ಕೆ ಕೇಂದ್ರ ರೇಷ್ಮೆ ಇಲಾಖೆಯಿಂದಲೂ ಮಾನ್ಯತೆ ಸಿಕ್ಕಿದೆ. ರೇಷ್ಮೆ ನೂಲು ತೆಗೆಯುವ ಘಟಕಗಳಲ್ಲಿ ಇಂತಹ ಯಂತ್ರಗಳು ಇದ್ದರೆ ಹೆಚ್ಚು ರೇಷ್ಮೆ ನೂಲು ತೆಗೆಯಲು  ಅನುಕೂಲವಾಗಲಿದೆ. ಕಾರ್ಮಿಕರಿಗಾಗಿ ಪರಿತಪಿಸುವುದೂ ತಪ್ಪುತ್ತದೆ. ಈ ಯಂತ್ರ ತಯಾರಿಸಲು ರೂ 75 ಸಾವಿರ ವೆಚ್ಚವಾಗಿದೆ. ಸರ್ಕಾರದಿಂದ ಸಬ್ಸಿಡಿ ದೊರೆತರೆ, ದೊಡ್ಡ ಪ್ರಮಾಣದಲ್ಲಿ ಯಂತ್ರ ತಯಾರಿಸಿದರೆ ಕಡಿಮೆ ಬೆಲೆಗೆ ಈ ಯಂತ್ರ  ಇದನ್ನು ರೇಷ್ಮೆ ನೂಲು ತೆಗೆವ ಘಟಕಗಳಿಗೆ ನೀಡಬಹುದಾಗಿದೆ ಎನ್ನುತ್ತದೆ ಈ `ವಿದ್ಯಾರ್ಥಿ ತಂತ್ರಜ್ಞ'ರ ತಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.