ADVERTISEMENT

ಲಾಗಿನ್: ವಾಯುಯಾನಕ್ಕೊಬ್ಬಳು ಸಂಗಾತಿ!

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 4 ಡಿಸೆಂಬರ್ 2012, 19:40 IST
Last Updated 4 ಡಿಸೆಂಬರ್ 2012, 19:40 IST
ಲಾಗಿನ್: ವಾಯುಯಾನಕ್ಕೊಬ್ಬಳು ಸಂಗಾತಿ!
ಲಾಗಿನ್: ವಾಯುಯಾನಕ್ಕೊಬ್ಬಳು ಸಂಗಾತಿ!   

ಲವ್ ಆಟ್ ಫಸ್ಟ್ ಸೈಟ್ ಅನ್ನೊ ಮಾತು ಈಗ `ಲವ್ ಆಟ್ ಫಸ್ಟ್ ಫ್ಲೈಟ್' ಅಂತ ಬದಲಾಗಿದೆ! ಹೌದು. ವಿಮಾನಕ್ಕೆಂದು ನಿಲ್ದಾಣದಲ್ಲಿ ಕಾದು ಕುಳಿತ ಪ್ರಯಾಣಿಕರಿಗೆ ಫ್ಲೈಟ್ ಇನ್ನಷ್ಟು  ತಡ ಎಂದಾಗ ಬೇಸರ ಆಗುವುದು ಸಹಜ. ಪ್ರಯಾಣಿಕರು ಎಷ್ಟು ಹೊತ್ತು ಪೇಪರ್, ನಿಯತಕಾಲಿಕ ಓದುತ್ತಾ ಸಮಯ ಕಳೆಯಲು ಸಾಧ್ಯ? ಇಂಥ ವೇಳೆ  ಪ್ರಯಾಣಿಕರು ಅನುಭವಿಸುವ ಒಂಟಿತನ, ಬೇಸರ ಹೋಗಲಾಡಿಸುವ ಸಲುವಾಗಿ `ಏರ್‌ಪೋರ್ಟ್ ಡೇಟಿಂಗ್' ಎಂಬ ವಿಶಿಷ್ಟ ವೆಬ್‌ಸೈಟ್ ಒಂದು ಆರಂಭಗೊಂಡಿದೆ.

ಇಂಥ ಸಂದರ್ಭದಲ್ಲಿ ತಮ್ಮದೇ ಅಭಿರುಚಿಯುಳ್ಳ ಒಬ್ಬ ಅಪರಿಚಿತ ವ್ಯಕ್ತಿ ಗೆಳೆಯ/ತಿಯಾದಾಗ ಆಗುವ ಸಂತಸ ಅಷ್ಟಿಷ್ಟಲ್ಲ. ವಿಮಾನ ನಿಲ್ದಾಣದಲ್ಲಿ ಕಾಯುವಾಗಲೇ ಅಂಥ ಒಬ್ಬ ಸಂಗಾತಿಯನ್ನು ನಾವು ನಿಮಗೆ ಹುಡುಕಿ ಕೊಡುತ್ತೇವೆ. ಎಲ್ಲ ಮರೆತು ನಿಮ್ಮ ಬೋರಿಂಗ್ ಜರ್ನಿಗೆ ಸ್ವಲ್ಪ ಮಸಾಲೆ ಬೆರೆಸಿ ಎನ್ನುತ್ತಿದೆ ಏರ್‌ಪೋರ್ಟ್ ಡೇಟಿಂಗ್ ವೆಬ್‌ಸೈಟ್. ಅಂದಹಾಗೆ, ಈ ವೆಬ್‌ಸೈಟ್‌ನ ಹೆಸರು Meeta­ttheair­port.­com. ಸ್ಥಾಪಕರು ಸ್ಟೀವ್ ಫಾಸ್ಟರ್‌ನ್ಯಾಕ್.
ಫಾಸ್ಟರ್‌ನ್ಯಾಕ್ ಒಮ್ಮೆ ಮಿಯಾಮಿ ಏರ್‌ಪೋರ್ಟ್‌ನಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದರಂತೆ. ವಿಮಾನ ನಿಗದಿತ ಸಮಯಕ್ಕಿಂತ ತಡವಾಗಿ ಬರುತ್ತದೆ ಎಂದು ಗೊತ್ತಾದಾಗ ಅವರಿಗೆ ನಿಲ್ದಾಣದಲ್ಲಿ ಒಬ್ಬಂಟಿಯಾಗಿ ಕಾಲ ಕಳೆಯಲು ಬೇಸರ ಆಯಿತಂತೆ.

ಆ ವೇಳೆ ಅವರ ಮನಸ್ಸಿನಲ್ಲಿ ಹುಟ್ಟಿದ್ದೇ ಈ ಡೇಟಿಂಗ್ ವೆಬ್‌ಸೈಟ್. ಬೇಸರ ಕಳೆಯಲೆಂದು ಸೃಷ್ಟಿಸಿದ ಈ ವೆಬ್‌ಸೈಟ್ ಇದೀಗ ವಿಶ್ವದ ಎಲ್ಲಡೆಯಿಂದ ಇಪ್ಪತ್ತು ಸಾವಿರಕ್ಕೂ ಅಧಿಕ ಮಂದಿಯನ್ನು ಆಕರ್ಷಿಸಿದೆ. ಅಚ್ಚರಿಯ ಅಂಶವೆಂದರೆ ವಿಮಾನ ಪ್ರಯಾಣಿಕರು ಸಹ ಈ ವೆಬ್‌ಸೈಟ್‌ಗೆ ಮಾರುಹೋಗಿದ್ದಾರೆ. ವಿಮಾನ ಕಾಯುವ ವೇಳೆ ಅನುಭವಿಸುವ ಬೇಸರ ಹಾಗೂ ಹೊಸ ಜನಗಳನ್ನು ಭೇಟಿಯಾಗುವ ಅವಕಾಶ ಇಲ್ಲಿ ವಿಫುಲವಾಗಿರುವುದರಿಂದ ಈ ವೆಬ್‌ಸೈಟ್ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.

ಹೊಸಬರು ಈ ವೆಬ್‌ಸೈಟ್‌ಗೆ ಪ್ರವೇಶಿಸಬೇಕಾದರೆ ಮಾಡಬೇಕಾದ್ದು ಇಷ್ಟು; ಹೊಸ ಹೊಸ ವ್ಯಕ್ತಿಗಳನ್ನು ಪರಿಚಯ ಮಾಡಿಕೊಳ್ಳುವ ಆಸಕ್ತಿ ಇದ್ದವರು Meeta­ttheair­port.­com ಗೆ ಮೊದಲು ನೋಂದಣಿ ಮಾಡಿಕೊಳ್ಳಬೇಕು. ಅಲ್ಲಿ ನಿಮ್ಮ ಆಸಕ್ತಿ, ಇಷ್ಟದ ಸಂಗತಿಗಳು, ಅಭಿರುಚಿಗಳನ್ನು ಬಿಂಬಿಸುವಂಥ ಒಂದು ರಸಪೂರ್ಣ ಫ್ರೋಪೈಲ್‌ನ್ನು ವಿಮಾನದ ವಿವರಗಳು ಹಾಗೂ ನಿರ್ಗಮನದ ವಿವರಗಳನ್ನು ಸೇರಿಸುವ ಮೊದಲಿಗೆ ನೀಡಬೇಕಷ್ಟೇ. ಅಲ್ಲಿಂದ ಮುಂದೆ ನಿಮ್ಮದೇ ಅಭಿರುಚಿ ಹೊಂದಿರುವ ವ್ಯಕ್ತಿಗಳೊಂದಿಗೆ ಹರಟುವ ಸೌಭಾಗ್ಯವನ್ನು ಈ ವೆಬ್‌ಸೈಟ್ ಕಲ್ಪಿಸಿಕೊಡುತ್ತದೆ.

ವಿಶ್ವದ ಎಲ್ಲೆಡೆಯಿಂದ ಈ ವೆಬ್‌ಸೈಟ್ ಬಗ್ಗೆ ಜನರು ಕುತೂಹಲ ವ್ಯಕ್ತಪಡಿಸುತ್ತಿದ್ದರೂ ಸಹ ಯುಎಸ್, ಮೆಕ್ಸಿಕೊ ಮತ್ತು ಜರ್ಮನಿಯ ಜನರು ಈ ವೆಬ್‌ಸೈಟ್ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರಂತೆ. ಏರ್‌ಪೋರ್ಟ್‌ನಲ್ಲಿ ಕುಳಿತು ಹೊಸ ವ್ಯಕ್ತಿಗಳನ್ನು ಭೇಟಿಯಾಗಲು ಇದಕ್ಕಿಂತಾ ಒಳ್ಳೆ ಸಮಯ ಇದೆಯಾ? ಎಂದು ಅದು ಪ್ರಶ್ನಿಸುತ್ತಿದೆ. `ನಿಲ್ದಾಣದಲ್ಲಿ ಪರಿಚಿತರಾದವರು ನಿಮ್ಮ ಪ್ರಯಾಣಕ್ಕೆ ಸಂಗಾತಿಯಾಗಬಹುದು. ಹೊಸ ಪರಿಚಯ ಸ್ನೇಹಕ್ಕೆ ತಿರುಗಬಹುದು. ಸ್ನೇಹದಿಂದ ಸಿಕ್ಕ ಸಲುಗೆ ಪ್ರಯಣಕ್ಕೂ ಮುನ್ನುಡಿ ಬರೆಯಬಹುದು. ಹೊಸ ವ್ಯಕ್ತಿಗಳ ಪರಿಚಯ ನಿಮ್ಮ ವ್ಯವಹಾರ ವ್ಯಾಪಾರಕ್ಕಷ್ಟೇ ಲಾಭ ಮಾಡುವುದಿಲ್ಲ. ನಿಮ್ಮ ಎಲ್ಲ  ವಿಷಯಕ್ಕೂ ಇದು ಲಾಭ ಮಾಡಿಕೊಡುತ್ತದೆ' ಎನ್ನುತ್ತಾರೆ  ಫಾಸ್ಟರ್‌ನ್ಯಾಕ್.

ವಿಮಾನ ನಿಲ್ದಾಣವನ್ನು ಸಾಮಾಜಿಕ ತಾಣವನ್ನಾಗಿ ಪರಿವರ್ತಿಸುವಲ್ಲಿ ಫಾಸ್ಟರ್‌ನ್ಯಾಕ್ ಈಗ ಸಫಲರಾಗಿದ್ದಾರೆ. ಇಂಥ ಹೊಸ ಪರಿಕಲ್ಪನೆಯಿಂದ ಉತ್ತೇಜನಗೊಂಡಿರುವ ಫಿನ್‌ಲ್ಯಾಂಡ್‌ನ ಹೆನ್ಸಿಂಕಿಯ ವಾಂಥಾ ಏರ್‌ಪೋರ್ಟ್ ಸಹ ತನ್ನ ನಿಲ್ದಾಣದಲ್ಲಿ `ಏರ್‌ಪೋರ್ಟ್ ಸ್ಪೀಡ್ ಡೇಟಿಂಗ್ ಸರ್ವಿಸ್' ಪರಿಚಯಿಸುವ ಬಗ್ಗೆ ಯೋಚಿಸುತ್ತಿದೆಯಂತೆ.

ಆನ್‌ಲೈನ್ ಡೇಟಿಂಗ್ ಎಂಬುದು ಒಂದು ಹೊಸ ಪರಿಕಲ್ಪನೆ. ಸಾಮಾನ್ಯವಾದ ಡೇಟಿಂಗ್ ಸೈಟ್‌ಗಳು ನಮ್ಮ ಸುತ್ತಮುತ್ತಲಿನ ಜನರ ನಡುವೆ ನಮಗೆ ಸಂಪರ್ಕ ಸೇತುವಾಗುತ್ತವೆ. ಅಂಥಹ ಸೈಟ್‌ಗಳಲ್ಲಿ ಅದೇ ಹಳೆ ಮುಖಗಳನ್ನು ನೋಡಿಕೊಳ್ಳಬೇಕಷ್ಟೇ. ಹಾಗಾಗಿ ನಾವು ಏರ್‌ಪೋರ್ಟ್‌ಗಳಲ್ಲಿ ಜನರ ನಡುವೆ ಪರಿಚಯ ಬೆಳೆಸುವ ಸಲುವಾಗಿ ಹೊಸ ಬಗೆಯ ಡೇಟಿಂಗ್ ಹಾಗೂ ಖಾಸಗಿ ಸೈಟ್‌ಗಳನ್ನು ರಚಿಸಿದ್ದೇವೆ ಎಂಬುದು ವೆಬ್‌ಸೈಟ್ ಜನಕರ ಹೇಳಿಕೆ.
`ಏರ್‌ಪೋರ್ಟ್ ಡೇಟಿಂಗ್ ಪರಿಕಲ್ಪನೆಯು ಇತರೆ ಜಯಪ್ರಿಯ ಡೇಟಿಂಗ್ ಸೈಟ್‌ಗಳಿಗಿಂತ ಭಿನ್ನವಾಗಿದೆ' ಎಂದು ಡೇಟಿಂಗ್ ಯೋಜನಾ ಚತುರ ರಚೆಲ್ ಗ್ರೂನ್‌ವಾಲ್ಡ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

90ರ ದಶಕದ ಮಧ್ಯಭಾಗದಲ್ಲಿ ಪ್ರವರ್ಧಮಾನಕ್ಕೆ ಬಂದ ಆನ್‌ಲೈನ್ ಡೇಟಿಂಗ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತು. ಕಳೆದ ಐದು ವರ್ಷಗಳಲ್ಲಿ ಅದರ ಜನಪ್ರಿಯತೆಯ ವಿಸ್ತಾರ ಸಾಕಷ್ಟು ಹಿಗ್ಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
`ವೈನ್ ಪ್ರಿಯರಿಗೆ, ಪುಸ್ತಕ ಪ್ರಿಯರು, ಎತ್ತರದ ವ್ಯಕ್ತಿಗಳು ಹೀಗೆ ಎಲ್ಲದಕ್ಕೂ ಈಗ ಒಂದೊಂದು ವೆಬ್‌ಸೈಟ್‌ಗಳು ಇವೆ.  20ರಿಂದ 30ರ ಆಸುಪಾಸಿನಲ್ಲಿ ಇರುವ ಯುವ ವೃತ್ತಿಪರರು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವ ಸಲುವಾಗಿ ವಿಶ್ವದಾದ್ಯಂತ ಪ್ರಯಾಣ ಕೈಗೊಳ್ಳುತ್ತಲೇ ಇರುತ್ತಾರೆ. ಆಗ ಅವರಿಗೆ ಬೇರೆಯವರನ್ನು ಭೇಟಿಯಾಗುವ ಸಮಯ ಇಲ್ಲದೇ ಇರಬಹುದು. ಅಂಥವರಿಗೆ ಏರ್‌ಪೋರ್ಟ್ ಡೇಟಿಂಗ್ ಬಹಳ ಪರಿಣಾಮಕಾರಿ ಆಯ್ಕೆ' ಎಂಬುದು ಗ್ರೀನ್‌ವಾಲ್ಡ್ ಅಭಿಮತ.
          

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.