ADVERTISEMENT

ಸೂಜಿ ಚುಚ್ಚಿದರೂ ಒಡೆಯದ ಬಲೂನ್!

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST
ಸೂಜಿ ಚುಚ್ಚಿದರೂ ಒಡೆಯದ ಬಲೂನ್!
ಸೂಜಿ ಚುಚ್ಚಿದರೂ ಒಡೆಯದ ಬಲೂನ್!   

ಬಣ್ಣ ಬಣ್ಣದ ಬಲೂನ್‌ಗಳನ್ನು ಊದುವುದು,ಅದರೊಂದಿಗೆ ಆಟವಾಡುವುದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಸಂತಸ. ಅದು ಒಡೆದಾಗಲಂತೂ ಅವರ ಕಣ್ಣುಗಳಲ್ಲಿ ಬೇಸರದ ಛಾಯೆಯೊಂದು ಮೂಡುವುದು. ಸೂಜಿಯಿಂದ ಚುಚ್ಚಿದರೂ ಒಡೆಯದ ಬಲೂನ್ ಬಗ್ಗೆ  ಮಾಹಿತಿ ಇಲ್ಲಿದೆ.
 
ಜಾದೂಗಾರ ಒಂದು ಬಲೂನು ತೆಗೆದುಕೊಂಡು ಊದುತ್ತಾನೆ. ನಂತರ ಸೂಜಿಯನ್ನು ಹಿಡಿದುಕೊಂಡು ಚುಚ್ಚುತ್ತಾನೆ. ನೋಡ ನೋಡುತ್ತಿದ್ದಂತೆ ಆ ಸೂಜಿ ಬಲೂನಿನ ಇನ್ನೊಂದು ತುದಿಯಿಂದ ಹೊರಬರುತ್ತದೆ. ಬಲೂನು ಒಡೆಯುವುದಿಲ್ಲ. ಸ್ವಲ್ಪವೇ ಸ್ವಲ್ಪ ಚೂಪಾದ ಯಾವುದೇ ವಸ್ತು ತಾಗಿದರೂ ಒಡೆಯುವಂತಹ ಬಲೂನ್ ಮೂಲಕ, ಚೂಪಾದ ಸೂಜಿ ಹಾದು ಹೋದರೂ ಒಡೆಯದ ಹಾಗೆ ಜಾದೂ ಮಾಡುವುದು ತುಂಬಾ ಸುಲಭ.

ಒಂದು ಬಲೂನ್ ತೆಗೆದುಕೊಳ್ಳಿ. ಚೆನ್ನಾಗಿ ಊದಿ ಅದರ ಬಾಯಿಯನ್ನು ದಾರದಿಂದ ಕಟ್ಟಿ. ಬಲೂನಿನ ಯಾವುದೇ ಒಂದು ಕಡೆ ಸಣ್ಣ ಬಣ್ಣರಹಿತ ಸೆಲ್ಲೊಟೇಪ್ ತುಂಡು ಅಂಟಿಸಿ. ಅದರ ಸರಿಯಾದ ವಿರುದ್ಧ ದಿಕ್ಕಿನಲ್ಲಿ ಇನ್ನೊಂದು ಸಣ್ಣ ಬಣ್ಣರಹಿತ ಸೆಲ್ಲೊಟೇಪ್ ತುಂಡು ಅಂಟಿಸಿ. ಸೂಜಿಯನ್ನು ಒಂದು ಕಡೆ ಅಂಟಿಸಿದ ಸೆಲ್ಲೊಟೇಪ್ ಮುಖಾಂತರ ಚುಚ್ಚಿ,ಇನ್ನೊಂದು ಕಡೆಯಲ್ಲಿ ಅಂಟಿಸಿದ ಸೆಲ್ಲೋಟೇಪ್ ಮುಖಾಂತರವೇ ಹಾದುಹೋಗುವಂತೆ ಮಾಡಬೇಕು.
 
ಆಗ ಬೆಲೂನು ಒಡೆಯದೇ ಹಾಗೇ ಉಳಿಯುವುದು.  ಇಲ್ಲಿ  ಎಚ್ಚರವಹಿಸಬೇಕಾದ ವಿಷಯವೆಂದರೆ ಸೂಜಿಯ ಇನ್ನೊಂದು ತುದಿ ವಿರುದ್ಧ ದಿಕ್ಕಿನಲ್ಲಿ ಅಂಟಿಸಿದ ಬಣ್ಣರಹಿತ ಸೆಲ್ಲೋಟೇಪ್ ಮೂಲಕವೇ ಹೊರಬರುತ್ತಿದೆಯೋ ಎಂದು ಜಾಗ್ರತೆ ವಹಿಸಬೇಕು.

 ಬೆಂಕಿ ಬಿದ್ದರೂ ಸುಡದ ಬಟ್ಟೆ
 ಒಂದು ಬಟ್ಟೆ ತೆಗೆದುಕೊಂಡು ಅದರ ಎರಡೂ ಬದಿಯನ್ನು ವೀಕ್ಷಕರಿಗೆ ತೋರಿಸಿ. ಈಗ ಈ ಬಟ್ಟೆಗೆ ಬೆಂಕಿಕಡ್ಡಿಯ ಸಹಾಯದಿಂದ ಬೆಂಕಿ ಕೊಡಿ. ಬಟ್ಟೆಗೆ ಬೆಂಕಿ ಹತ್ತಿಕೊಳ್ಳುತ್ತದೆ. ಆದರೆ, ಬಟ್ಟೆಯು ಈ ಬೆಂಕಿಯಿಂದ ಸುಡದೇ ಹಾಗೇ ಉಳಿದುಕೊಳ್ಳುತ್ತದೆ. ಬೆಂಕಿ ತಾಗಿದ ಕೂಡಲೇ ಸುಟ್ಟು ಬೂದಿಯಾಗುವ ಬಟ್ಟೆಯು ಸುಡದೇ ಉಳಿಯುವಂತೆ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ?  ಸ್ವಲ್ಪ ಕೈಚಳಕ,ಜಾಣ್ಮೆ,ಪ್ರಯತ್ನದಿಂದ ಇದನ್ನು ಪರಿಣಾಮಕಾರಿಯಾಗಿ  ಪ್ರದರ್ಶಿಸಬಹುದು.

 ಒಂದು ನಿಂಬೆಹಣ್ಣನ್ನು ಹಿಂಡಿ ಅದರ ರಸ ತೆಗೆಯಿರಿ. ಈ ರಸದ ಅರ್ಧದಷ್ಟು ಪ್ರಮಾಣದಲ್ಲಿ ಹೇರಳೇ ಹಣ್ಣಿನ ರಸವನ್ನೂ ತಯಾರಿಸಿ. ಈಗ ಈ ಎರಡೂ ಹಣ್ಣಿನ ರಸ ಒಟ್ಟಿಗೆ ಬೆರೆಸಿ. ಒಂದು ಸಣ್ಣ ಬಟ್ಟೆ  ತೆಗೆದುಕೊಂಡು ಅದರ ಎರಡೂ ಬದಿಗೆ ಈ ರಸ ಲೇಪಿಸಿ. ರಸ ಲೇಪಿಸಿದ ಬಟ್ಟೆಯನ್ನು ನೆರಳಿನಲ್ಲಿ ಒಣಗಿಸಿ. ನೆನಪಿರಲಿ, ಬಿಸಿಲಿನಲ್ಲಿ ಒಣಗಿಸಬಾರದು. ಹೀಗೆ ಒಣಗಿದ ಬಟ್ಟೆಯು ಈಗ ಜಾದೂ ಮಾಡಲು ತಯಾರಾಗಿದೆ. ಈ ಬಟ್ಟೆಗೆ ಬೆಂಕಿಕೊಟ್ಟರೆ,ಅದರಲಿರ‌್ಲುವ ಹುಳಿ ಮಾತ್ರ ಸುಟ್ಟು ಬಟ್ಟೆಯು ಹಾಗೆಯೇ ಉಳಿದುಕೊಳ್ಳುತ್ತದೆ.            

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.