ಸ್ಮಾರ್ಟ್‌ಫೋನ್‌ಗಳ (ಚುರುಕಿನ ಮೊಬೈಲ್) ಜಗತ್ತು ಬದಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದ್ದರೆ, ದಶಕದ ಹಿಂದೆ ಗಗನ ಕುಸುಮವಾಗಿದ್ದ ಸ್ಮಾರ್ಟ್ ಫೋನ್‌ಗಳು ಈಗ ಜನರ ಅಂಗೈ ಮಾಣಿಕ್ಯವಾಗತೊಡಗಿವೆ.
ಕೇವಲ ಸಂವಹನ ಮಾಧ್ಯಮವಾಗಿ ಮಾತ್ರ ಬಳಕೆಯಾಗುತ್ತಿದ್ದ ಮೊಬೈಲ್‌ಫೋನ್‌ಗಳು ಈಗ ಬಹೂಪಯೋಗಿ ಉಪಕರಣಗಳಾಗಿ ಮಾರ್ಪಟ್ಟಿವೆ.
ಇತ್ತೀಚೆಗೆ ಜಾಗತಿಕ ಸ್ಮಾರ್ಟ್‌ಫೋನ್ ಸಲಹಾ ಸಂಸ್ಥೆಯೊಂದು ನಡೆಸಿದ ಅಧ್ಯಯನದಂತೆ, ಅತಿ ಹೆಚ್ಚು ಸ್ಮಾರ್ಟ್‌ಫೋನ್ ಬಳಕೆ ಇರುವುದು ಭಾರತದಲ್ಲಿ. ಚೀನಾವನ್ನು ಹೊರತುಪಡಿಸಿದರೆ ಪ್ರಪಂಚದಲ್ಲಿಯೇ ಎರಡನೇಯ ಅತಿ ದೊಡ್ಡ ಮೊಬೈಲ್ ಮಾರುಕಟ್ಟೆ ಭಾರತ.
ಜುಲೈ ಅಂತ್ಯಕ್ಕೆ ಭಾರತೀಯ ಮೊಬೈಲ್ ಚಂದಾದಾರರ ಸಂಖ್ಯೆಯೂ 892 ದಶಲಕ್ಷಕ್ಕೆ ಏರಿದೆ. ಮೊಬೈಲ್ ಇಂಟೆಲಿಜೆನ್ಸ್ ಸಮೀಕ್ಷೆಯಂತೆ ಭಾರತದ ಯುವ ಜನತೆ ಸ್ಮಾರ್ಟ್‌ಫೋನ್ ಅನ್ನು ಮಾತನಾಡುವುದಕ್ಕಿಂತ ಹೆಚ್ಚಾಗಿ ಬೇರೆ ಬೇರೆ ಉದ್ದೇಶಗಳಿಗಾಗಿ ಬಳಸುತ್ತಿದ್ದಾರೆ ಎನ್ನುವುದು.
15 ರಿಂದ 24 ವರ್ಷ ವಯಸ್ಸಿನ ಒಳಗಿನ ಯುವ ಸಮೂಹವು, ದಿನದಲ್ಲಿ ಕನಿಷ್ಠ ಮೂರು ಗಂಟೆಗಳ ಕಾಲ ತಮ್ಮ ಸ್ಮಾರ್ಟ್‌ಫೋನ್ ಜತೆಯಲ್ಲಿ ಇರುತ್ತಾರೆ. 30 ವರ್ಷ ದಾಟಿದವರಲ್ಲಿ ಇದರ ಪ್ರಮಾಣ 2 ಗಂಟೆ. ಶೇ. 68ರಷ್ಟು ಯುವಜನತೆ ಸ್ಮಾರ್ಟ್‌ಫೋನ್‌ಗಳಲ್ಲಿರುವ `ಚಾಟ್~ ತಂತ್ರಾಂಶವನ್ನೆ ಹೆಚ್ಚಾಗಿ ಬಳಸುತ್ತಾರೆ.
ಒಟ್ಟು ಸ್ಮಾರ್ಟ್‌ಫೋನ್ ಬಳಕೆ ಸಮಯದಲ್ಲಿ ಶೇ. 72ರಷ್ಟು ವೇಳೆಯನ್ನು ಮೊಬೈಲ್ ಗೇಮ್ಸ, ಆನ್‌ಲೈನ್ ಬಳಕೆ, ಮತ್ತಿತರ ಮನೋರಂಜನೆಗಳಿಗಾಗಿ ಬಳಸುತ್ತಾರೆ. ಶೇ 28 ರಷ್ಟು ಅವಧಿ `ಎಸ್‌ಎಂಎಸ್~ಗೆ ಮೀಸಲು.
ಜಾಗತಿಕ ಸ್ಮಾರ್ಟ್‌ಫೋನ್ ಮಾರಾಟ ಜುಲೈ ಅಂತ್ಯದ ವೇಳೆಗೆ 472 ದಶಲಕ್ಷ ತಲುಪಿದೆ. 2015ರ ವೇಳೆಗೆ ಈ ಸಂಖ್ಯೆ 982 ದಶಲಕ್ಷ ದಾಟುವ ಸಾಧ್ಯತೆ ಇದೆ. 3ಜಿ, ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶದ ಜನಪ್ರಿಯತೆ ಮತ್ತು ಅಗ್ಗದ ದರದ ಹ್ಯಾಂಡ್‌ಸೆಟ್‌ಗಳು ಸ್ಮಾರ್ಟ್‌ಫೋನ್ ಮಾರುಕಟ್ಟೆ ತ್ವರಿತವಾಗಿ ಬೆಳೆಯಲು ಕಾರಣ.
ಭಾರತದಲ್ಲಿ ಪ್ರಸಕ್ತ ವರ್ಷ 210 ದಶಲಕ್ಷ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗುವ ನಿರೀಕ್ಷೆ ಇದ್ದು, ಶೇ 25ರಷ್ಟು ಮಾರುಕಟ್ಟೆ ಪ್ರಗತಿ ನಿರೀಕ್ಷಿಸಲಾಗಿದೆ.
ಸ್ಮಾಟ್‌ಫೋನ್‌ಗಳು ಡೆಸ್ಕ್‌ಟಾಪ್ ಹಾಗೂ ಲ್ಯಾಪ್‌ಟ್ಯಾಪ್‌ಗಳ ಹೊರೆಯನ್ನೂ ತಗ್ಗಿಸುತ್ತವೆ. ಏಕಕಾಲಕ್ಕೆ ಅವು ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಎರಡರ ಕೆಲಸವನ್ನೂ ನಿರ್ವಹಿಸುತ್ತವೆ. ಉದ್ಯಮಿಗಳ ಪಾಲಿಗಂತೂ ಅನುಕೂಲಕರವಾಗಿವೆ.
ಆದರೆ, ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್ ಬಳಕೆಯು ಯುವಜನತೆಯಲ್ಲಿ ಅನೇಕ ವ್ಯಸನಗಳನ್ನೂ ತಂದಿಟ್ಟಿದೆ ಎನ್ನುತ್ತದೆ ಈ ಸಮೀಕ್ಷೆ. ನಿದ್ರಾಹೀನತೆ, ಖಿನ್ನತೆ ಇತರೆ ಸಮಸ್ಯೆಗಳೂ ಯುವಸಮೂಹದಲ್ಲಿ ಕಂಡುಬಂದಿದೆ.
ಗೇಮಿಂಗ್ ಮತ್ತು ಇಂಟರ್ನೆಟ್ ಸರ್ಫಿಂಗ್‌ಗಾಗಿ ಹೆಚ್ಚು ಕಾಲ ಮೀಸಲಿಡಿರುವುದರಿಂದ ಅವರು ವಾಸ್ತವ ಜಗತ್ತನ್ನು ಮರೆಯುವ ಅಪಾಯವೂ ಇದೆ ಎನ್ನುತ್ತದೆ ಮೊಬೈಲ್ ಇಂಟಲಿಜೆನ್ಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.