ತಂತ್ರಜ್ಞಾನದಲ್ಲಿ ಏಣಿ ಮಾತ್ರ ಇದೆ. ಇಂದು ಅಭಿವೃದ್ಧಿಗೊಳಿಸಿದ ತಂತ್ರಜ್ಞಾನ ಜನರ ಕೈಗೆ ತಲುಪುವುದಷ್ಟೆ ತಡ; ಅದರಲ್ಲೆ ಇನ್ನಷ್ಟು ನವೀಕರಿಸಿದ ತಂತ್ರಜ್ಞಾನವುಳ್ಳ ಸರಕು ಬೆನ್ನಹಿಂದೆಯೇ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗುತ್ತದೆ. ಮುಖ್ಯವಾಗಿ ಎಲೆಕ್ಟ್ರಾನಿಕ್ ಸರಕುಗಳಲ್ಲಿ ಈ ರೀತಿಯ ಏರುಗತಿಯ ತಂತ್ರಜ್ಞಾನವನ್ನು ಹೆಚ್ಚಾಗಿ ಕಾಣಬಹುದು.
ದೊಡ್ಡ ಗಾತ್ರದಲ್ಲಿದ್ದ ಟಿವಿ ಜಾಗವನ್ನು ತೆಳ್ಳನೆಯ ಎಲ್‌ಸಿಡಿ. ಪ್ಲಾಸ್ಮಾ, ಡಿಎಲ್‌ಪಿ, ಟಿಎಫ್‌ಟಿ, ತ್ರೀಡಿ ಪರದೆಯ ಟಿವಿಗಳು ಆಕ್ರಮಿಸಿಕೊಳ್ಳುತ್ತಿವೆ. ಹಾಗಿದ್ದರೂ 2017ರ ಹೊತ್ತಿಗೆ ಪರದೆಇಲ್ಲದೆಯೆ ಟಿವಿ ವೀಕ್ಷಿಸಲು ಸಾಧ್ಯವಾಗುವ ಹೊಲೊಗ್ರಾಫಿಕ್ ಟಿವಿ ಬಿಡುಗಡೆಗೊಳಿಸುವುದಾಗಿ ಎಲೆಕ್ಟ್ರಾನಿಕ್ ಕಂಪೆನಿಗಳು ಘೋಷಿಸಿವೆ!
ಏನಿದು ಹೊಲೊಗ್ರಾಫಿಕ್ ತಂತ್ರಜ್ಞಾನ?
ಪ್ರೊಜೆಕ್ಟರ್ ನೆರವಿನಿಂದ ಗೋಡೆ, ಗಾಜು ಹಾಗೂ ಬಟ್ಟೆಯ ಪರದೆಗಳ ಮೇಲೆ ಚಿತ್ರಗಳನ್ನು ಬಿಂಬಿಸಿ ಚಿತ್ರಗಳನ್ನು ವೀಕ್ಷಿಸುತ್ತಿರುವುದು ಸದ್ಯದಲ್ಲಿದೆ. ಆದರೆ, ಹೊಲೊಗ್ರಾಫಿಕ್ ತಂತ್ರಜ್ಞಾನಕ್ಕೆ ಗೋಡೆಯಾಗಲಿ, ಬಟ್ಟೆಯ ಪರದೆಯಾಗಲಿ ಬೇಕಾಗುವುದಿಲ್ಲ.
ನಿಗದಿತ ದೂರದಲ್ಲಿ ಗಾಳಿಯಲ್ಲೆ ಚಿತ್ರಗಳು ತೇಲುತ್ತವೆ. ತುಂಬಾ ನೈಜ (ವರ್ಚ್ಯುವಲ್) ರೀತಿಯಲ್ಲಿ ಚಿತ್ರಗಳು ಎಲ್ಲಾ ಮಗ್ಗಲುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹೊಲೊಗ್ರಾಫಿಕ್ ಟಿವಿ ಇರುವ ಕೋಣೆಯಲ್ಲಿ ಟವಿ ಎದುರಿಗೆ ಕುಳಿತುಕೊಂಡೆ ವೀಕ್ಷಿಸಬೇಕೆನ್ನುವ ಜರೂರು ಇರುವುದಿಲ್ಲ.
ಜಪಾನ್ ದೇಶದ `ಎನ್‌ಎಚ್‌ಕೆ~ ಹೆಸರಿನ ರೇಡಿಯೊ ಪ್ರಸಾರ ಕೇಂದ್ರವು ಎಲೆಕ್ಟ್ರಾನಿಕ್ ಕ್ಷೇತ್ರದ ದಿಗ್ಗಜ ಕಂಪೆನಿಗಳಾದ `ಸೋನಿ~ ಹಾಗೂ `ಮಿತ್ಸುಬಿಶು~ ಸಹಯೋಗದೊಂದಿಗೆ ಹೊಲೊಗ್ರಾಫಿಕ್ ತಂತ್ರಜ್ಞಾನ ಅಭಿವೃದ್ಧಿ ಚುರುಕುಗೊಳಿಸಿದೆ.
ಈಗಾಗಲೇ ಹೊಲೆಗ್ರಾಫಿಕ್ ದೃಶ್ಯಗಳನ್ನು ಪ್ರಸಾರ ಮಾಡುವ ಬಗ್ಗೆ ಈ ಹಿಂದೆಯೇ ಸಂಶೋಧನೆ ಮಾಡಿರುವ ಅಮೆರಿಕದ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಲು ಜಪಾನ್ ದೇಶದ ವಿಜ್ಞಾನಿಗಳನ್ನು ಎನ್‌ಎಚ್‌ಕೆ ಅಮೆರಿಕಕ್ಕೆ ಕಳಿಸಿಕೊಟ್ಟಿದೆ. ಈ ತಂತ್ರಜ್ಞಾನ ಅಭಿವೃದ್ಧಿಗೆ ದೊಡ್ಡ ಮೊತ್ತವನ್ನೇ ಮೀಸಲಿಟ್ಟಿದೆ.
`2022ಕ್ಕೆ ಜಪಾನ್‌ನಲ್ಲಿ ನಡೆಯಲಿರುವ ಫುಟ್‌ಬಾಲ್ ವಿಶ್ವಕಪ್ ಪಂದ್ಯವನ್ನು ಸೆಟಲೈಟ್ ಮೂಲಕ ಪ್ರಸಾರ ಮಾಡಿದಾಗ, ವೀಕ್ಷಕರಿಗೆ ಲಂಡನ್ ಕ್ರೀಡಾಂಗಣದಲ್ಲಿಯೇ ಕುಳಿತು ನೇರವಾಗಿ ಪಂದ್ಯ ನೋಡುವ ಅನುಭವ ಆಗಬೇಕು~ ಎಂದು ಜಪಾನ್ ದೇಶದ ಇಂಟರ್‌ನೆಟ್ ಜನಕ ಎಂದು ಖ್ಯಾತಿ ಪಡೆದ ಜುನ್ ಮುರೈ ಅವರು ಎನ್‌ಎಚ್‌ಕೆ ತಂಡಕ್ಕೆ ಸವಾಲು ಎಸೆದಿದ್ದಾರೆ.
ಎಲ್‌ಸಿಡಿ, ಪ್ಲಾಸ್ಮಾ ಟಿವಿಗಳನ್ನು ಗೋಡೆಗೆ ನೇತುಹಾಕುವ ರೀತಿಯಲ್ಲಿ ಹೊಲೆಗ್ರಾಫಿಕ್ ಟಿವಿ ಬಳಕೆಯಲ್ಲಿ ಇರುವುದಿಲ್ಲ. ಕೋಣೆಯೊಂದರ ಮಧ್ಯೆ ನೆಲದ ಮೇಲೆ ಹೊಲೊಗ್ರಾಫಿಕ್ ಟಿವಿಯನ್ನು ಅಡ್ಡಲಾಗಿ ಇಟ್ಟರಾಯಿತು. ಅದರಿಂದ ಚಿತ್ರಗಳು ಪ್ರೊಜೆಕ್ಷನ್ ಮೂಲಕ ಹೊರಬಂದು, ನೈಜಲೋಕವನ್ನು ಕಣ್ಮುಂದೆ ಸೃಷ್ಟಿಸುತ್ತವೆ.
ಇದರಿಂದ ಸಿನಿಮಾಗಳ ನಾಯಕ, ನಾಯಕಿಯರು ಮನೆಯಲ್ಲೆ ಓಡಾಡಿಕೊಂಡು ಅಭಿನಯಿಸಿದಂತಾಗುತ್ತದೆ. ಕ್ರಿಕೆಂಟ್ ಪಂದ್ಯ ವೀಕ್ಷಣೆಗೆ ಕ್ರೀಡಾಂಗಣಕ್ಕೆ ಹೋಗುವ ಪ್ರಮೆಯವೇ ಇರುವುದಿಲ್ಲ! ಮನೆಯಂಗಳದಲ್ಲೆ ಸಚಿನ್, ಸೆಹವಾಗ್ ಪಂದ್ಯವಾಡುತ್ತಾರೆ.
ಯಾವುದೇ ವಸ್ತುವನ್ನು ಎಲೆಕ್ಟ್ರಾನ್ ಬೆಳಕಿನ ಸಹಾಯದಿಂದ ಪ್ರತಿಫಲಿಸಿದಾಗ, ಪ್ರತಿಫಲನದಲ್ಲಿ ಅದೇ ವಸ್ತುವಿನ ಚಿತ್ರ ಕಾಣಿಸಿಕೊಳ್ಳುತ್ತದೆ ಎಂದು 1979ರಲ್ಲಿ ಹಂಗೇರಿಯ ಭೌತಶಾಸ್ತ್ರಜ್ಞ ಡೆನ್ನಿಸ್ ಗೊಬರ್ ಅವರು ಮಾಡಿದ್ದ ಸಂಶೋಧನೆಯೆ ಹೊಲೊಗ್ರಾಫಿಕ್ ತಂತ್ರಜ್ಞಾನ ಅಭಿವೃದ್ಧಿಗೆ ಮೂಲಾಧಾರ ಎಂದು ಪರಿಗಣಿಸಲಾಗಿದೆ.
ಗಾಜಿನ ಪರದೆಯಿಂದ ಹೊರಸೂಸುವ ಚಿತ್ರಗಳ ಬೆಳಕನ್ನು ನಿರ್ದಿಷ್ಟ ದೂರದಲ್ಲಿ ಸ್ಥಾಯಿಗೊಳಿಸಿ, ಆ ಬೆಳಕಿನಲ್ಲೆ ಚಿತ್ರಗಳನ್ನು ವೀಕ್ಷಿಸಲು ಸಾಧ್ಯವಾಗಿಸುವುದೆ ಹೊಲೊಗ್ರಾಫಿಕ್ ತಂತ್ರಜ್ಞಾನ. ಶಬ್ದದ ಅಲೆಗಳನ್ನು, ಬೆಳಕಿನ ಪ್ರತಿಫಲನವನ್ನು ತಾಳೆಹಾಕಿ ತಂತ್ರಜ್ಞಾನವನ್ನು ವಾಸ್ತವ (ಲೈವ್)ವಾಗಿ ತೋರಿಸಲು ಮೂರು ದಶಕಗಳಿಂದ ವಿಜ್ಞಾನಿಗಳು ಹೆಣಗಾಡುತ್ತಿದ್ದಾರೆ.
ಜಪಾನ್ ದೇಶದ ವಿಜ್ಞಾನಿಗಳು ಇದೀಗ ಹೊಲೊಗ್ರಾಫಿಕ್ ತಂತ್ರಜ್ಞಾನ ಅಭಿವೃದ್ಧಿಗೊಳಿಸುವುದನ್ನು ಸವಾಲಾಗಿ ಸ್ವೀಕರಿಸುವ ಮೂಲಕ ತಂತ್ರಜ್ಞಾನ ಜಗತ್ತಿನಲ್ಲಿ ಹೊಸ ಮುನ್ನುಡಿ ಬರೆಯಲು ಮುಂದಾಗಿದ್ದಾರೆ.
ಜಪಾನ್ ದೇಶದ ವಿಜ್ಞಾನಿಗಳಿಗಿಂತ ಮೊದಲು ಹೊಲೊಗ್ರಾಫಿಕ್ ಟಿವಿ ತಂತ್ರಜ್ಞಾನ ಅಭಿವೃದ್ಧಿಗೊಳಿಸಲು ಮುಂದುವರಿದ ದೇಶದ ವಿಜ್ಞಾನಿಗಳು ಸಂಶೋಧನೆಯನ್ನು ತೀವ್ರಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.