ADVERTISEMENT

ತೆಂಗಿನ ಮರ ಉರುಳಿಸುವ ಕೆಂಪು ಮೂತಿ ಹುಳು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 20:30 IST
Last Updated 14 ಡಿಸೆಂಬರ್ 2018, 20:30 IST
ಕೆಂಪು ಮೂತಿ ಹುಳು
ಕೆಂಪು ಮೂತಿ ಹುಳು   

ಕೆಲವು ಕೀಟಗಳು ಚಿಕ್ಕಪುಟ್ಟ ಬೆಳೆಗಳನ್ನು ಹಾನಿ ಮಾಡುವುದನ್ನು ನಾವು ಬಲ್ಲೆವು.ಇನ್ನು ಕೆಲವು ಹಣ್ಣಿನ ಮರ ಮತ್ತು ಗಿಡಗಳ ಮೇಲೂ ಪೀಡೆಗಳಾಗಿ ಪರಿಣಮಿಸಿವೆ.

ಕೆಂಪು ಮೂತಿ ಹುಳು ನಮಗೆ ಹೊಸದೇನಲ್ಲ. ಮರಗಳ ಒಳಹೊಕ್ಕಿರುವುದರಿಂದ ಅವು ಕಾಣಿಸುವುದಿಲ್ಲ. ಇದನ್ನು ರೆಡ್ ಪಾಮ್ ವೀವಿಲ್(Red Palm Weevil)ಎಂದು ಕರೆಯುತ್ತಾರೆ.ಇದರ ವೈಜ್ಞಾನಿಕ ಹೆಸರು ರಿಂಕೋಫೋರಸ್ ಫೆರುಜಿನಿಯಸ್ (Rhynchophorus ferrugineus). ಇದು ಕುರ್ಕುಲಿಯೋನಿಡೆ (Curculionidae) ಕುಟುಂಬ ಮತ್ತು ದೊಡ್ಡ ವರ್ಗ ಕೋಲಿಯೋಪ್ಟೆರ(Coleoptera)ಕ್ಕೆ ಸೇರಿದೆ.

ಇದು ಗಾತ್ರದಲ್ಲಿ ಒಂದೂವರೆ ಅಂಗುಲದಷ್ಟಿದ್ದು, ಹೆಸರೇ ಹೇಳುವಂತೆ ಉದ್ದನೆಯ ಚೂಪಾದ ಮೂತಿ ಹೊಂದಿದೆ. ಈ ನೀಳವಾದ ಮೂತಿಯ ತುದಿಯಲ್ಲಿ ತೀರಾ ಚಿಕ್ಕದಾದ ಬಲಿಷ್ಟ ಎರಡು ದವಡೆಗಳಿವೆ. ಗಂಡು ಮತ್ತು ಹೆಣ್ಣು ಎರಡೂ ಕೀಟಗಳ ಮೂತಿಯ ಅರ್ಧಭಾಗಕ್ಕೆ ಎರಡು ಮೀಸೆಗಳಿವೆ ಮತ್ತು ಗಂಡಿಗೆ ವಿಶೇಷವಾದ ನಯವಾದ ರೋಮಗಳ ಕುಚ್ಚು ಇದೆ. ಸೌದಿ ಅರೇಬಿಯಾದಲ್ಲಿ ಕೀಟಶಾಸ್ತ್ರಜ್ಞನಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಈ ಕೆಂಪು ಮೂತಿ ಹುಳು ಖರ್ಜೂರದ ಮರಗಳಿಗೆ ಹಾನಿ ಮಾಡಿದ್ದನ್ನು ಕಂಡಿದ್ದೆ. ಈ ಬಾಧೆ ದುಬೈಯಲ್ಲೂ ಕಂಡು ಬಂದಿದೆ.

ADVERTISEMENT

ಹೆಣ್ಣು ದುಂಬಿಯು ಗಂಡಿನ ಆಕರ್ಷಣೆಗಾಗಿ ರಾಸಾಯನಿಕ(Pheromone)ವನ್ನು ಬಿಡುಗಡೆ ಮಾಡಿ ಸಮಾಗಮವಾಗುತ್ತದೆ. ತದನಂತರ ತೆಂಗು, ಖರ್ಜೂರ ಮತ್ತಿತರೆ ಆಶ್ರಯ ಪಡೆಯುವ ಮರಗಳ ಕಾಂಡಗಳಲ್ಲಿ ಗಾಯವಾದ ಜಾಗವಿದ್ದರೇ ಅಲ್ಲಿ ಮೊಟ್ಟೆಗಳನ್ನಿಡುತ್ತದೆ. ಅಥವಾ ತನ್ನಚೂಪಾದ ಮೊಟ್ಟೆಯಿಡುವ ಅಂಗ
(Ovipositor)ದಿಂದ ಕಾಂಡವನ್ನು ಗಾಯಗೊಳಿಸಿ ಮೊಟ್ಟೆಗಳನ್ನಿಡುತ್ತವೆ.

ಮೊಟ್ಟೆಯೊಡೆದು ಹೊರಬಂದ ಕಾಲುಗಳಿಲ್ಲದ ಮರಿಗಳು(Grubs) ಹರಿತವಾದ ದವಡೆಗಳನ್ನು ಹೊಂದಿದ್ದು ಕಾಂಡವನ್ನು ಕೊರೆದು ಒಂದೆರಡು ಮೀಟರಗಳುದ್ದಕ್ಕೂ ಒಳ ಸಂಚಾರ ನಡೆಸುತ್ತವೆ. ಹೀಗೆ ಕಾಂಡವನ್ನು ತಿನ್ನುತ್ತಾ ಅದನಾರನ್ನು ತಾವು ಪ್ರವೇಶಿಸಿದ ರಂಧ್ರದ ಮೂಲಕ ಹೊರಹಾಕುತ್ತವೆ. ಇದರ ಜೊತೆಗೆ ಕಾಂಡದ ಕಂದು ಬಣ್ಣದ ರಸ ಸೋರುತ್ತದೆ. ಕಾಂಡದ ಒಳಗೆಯೇ ನಾರನ್ನು ಉಪಯೋಗಿಸಿ ಗೂಡುಕಟ್ಟಿ ಕೋಶಾವಸ್ಥೆ ತಲುಪುತ್ತವೆ.

ಕೆಲವೊಮ್ಮೆ ಹಲವು ಮರಿಗಳು ಒಂದೇ ಕಾಂಡದಲ್ಲಿ ಅನೇಕ ತೂಬುಗಳನ್ನು ಮಾಡುತ್ತವೆ. ಇಂತಹ ಹಾನಿಗೊಳಗಾದ ಮರಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗಲಾರಂಭಿಸುತ್ತವೆ. ಕ್ರಮೇಣಮರವೂ ಸಾಯುತ್ತದೆ. ಇವನ್ನು ನಿಯಂತ್ರಿಸಲು ಫಿರಮೋನ್ ಬಕೇಟ್ ಬಲೆಗಳನ್ನು ಬಳಸಬಹುದೆಂದು ಮತ್ತು ಕಾರ್ಬಾರಿಲ್ ಕೀಟನಾಶಕ ದ್ರಾವಣವನ್ನು ಕೀಟಗಳ ಪ್ರವೇಶ ರಂಧ್ರಗಳಲ್ಲಿಸುರಿದು, ಮರಿಗಳನ್ನು ಕೊಲ್ಲಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.